ಜಗತ್ತಿನಲ್ಲಿ ಜಾನಕಿಯ ಕಂಠ ಮರೆಯದಂತೆ ಮಾಡಿದ ಅಪರೂಪದ ಕಲಾವಿದೆ: ಶಿವರಾಜ ಅಂಡಗಿ

ಜಗತ್ತಿನಲ್ಲಿ ಜಾನಕಿಯ ಕಂಠ ಮರೆಯದಂತೆ ಮಾಡಿದ ಅಪರೂಪದ ಕಲಾವಿದೆ: ಶಿವರಾಜ ಅಂಡಗಿ

ಜಗತ್ತಿನಲ್ಲಿ ಜಾನಕಿಯ ಕಂಠ ಮರೆಯದಂತೆ ಮಾಡಿದ ಅಪರೂಪದ ಕಲಾವಿದೆ: ಶಿವರಾಜ ಅಂಡಗಿ

ಕಲಬುರಗಿ, ಜು. 15: ದಕ್ಷಿಣ ಭಾರತದ ಗಾನಕೋಗಿಲೆ ಎಂದೇ ಖ್ಯಾತರಾದ ದಿವಂಗತ ಎಸ್. ಜಾನಕಿ ಅವರ ಅಪಾರ ಸಂಗೀತ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ವಿದ್ಯಾನಗರ ವೆಲ್‌ಫೇರ್ ಸೊಸೈಟಿ, ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಹಾಗೂ ಸ್ವರಾಂಜಲಿ ಮೇಲೋಡಿಸ್ ಅವರ ಸಂಯುಕ್ತ ಆಶ್ರಯದಲ್ಲಿ "ಗಾನ ಸ್ವರಾಭಿಷೇಕ" ಸಂಗೀತ ಕಾರ್ಯಕ್ರಮದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿ, "ದಕ್ಷಿಣ ಭಾರತದ ಗಾನಕೋಗಿಲೆ ಎಂಬ ಬಿರುದು ಎಸ್. ಜಾನಕಿ ಅವರಿಗೆ ಸುಮ್ಮನೆ ಬಂದದ್ದಲ್ಲ. ಸುಮಾರು 48 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿರುವ ಅವರು ಕನ್ನಡ ಸೇರಿದಂತೆ ಹಿಂದಿ, ಸಂಸ್ಕೃತ, ತಮಿಳು, ತೆಲುಗು, ಮಲಯಾಳಂ, ತುಳು, ಕೊಂಕಣಿ, ಒಡಿಯಾ, ಬೆಂಗಾಲಿ, ಉರ್ದು, ಪಂಜಾಬಿ ಸೇರಿದಂತೆ ಭಾರತದ ಹಲವು ಭಾಷೆಗಳ ಜೊತೆಗೆ ಇಂಗ್ಲಿಷ್, ಫ್ರೆಂಚ್, ಅರೇಬಿಕ್ ಮತ್ತು ಜಪಾನಿ ಭಾಷೆಗಳಲ್ಲಿಯೂ ಹಾಡಿ ತಮ್ಮ ಗಾಯನದ ಮೂಲಕ ವಿಶ್ವದಾದ್ಯಂತ ಸಂಗೀತದ ಕಂಪು ಹರಡಿಸಿದ್ದಾರೆ. ಕನ್ನಡ ಮಾತೃಭಾಷೆಯಾಗಿರದಿದ್ದರೂ 10 ಸಾವಿರಕ್ಕೂ ಹೆಚ್ಚು ಕನ್ನಡ ಹಾಡುಗಳನ್ನು ಹಾಡಿ ಕನ್ನಡ ಸಂಗೀತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ" ಎಂದು ಹೇಳಿದರು.

ಹಿರಿಯ ಕಲಾವಿದ ಎಂ.ಜಿ. ಘನತೆ ಮಾತನಾಡಿ, "ಎಸ್. ಜಾನಕಿ ಅವರು ಕೇವಲ ಹಿರಿಯ ಗಾಯಕಿಯಷ್ಟೇ ಅಲ್ಲ, ಧ್ವನಿ ವೈವಿಧ್ಯತೆಯ ಅದ್ಭುತ ಪ್ರತಿಭೆಯಾಗಿದ್ದರು. ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿಭಿನ್ನ ಶೈಲಿ ಹಾಗೂ ಸ್ವರಗಳಲ್ಲಿ ಹಾಡಬಲ್ಲ ಅಪರೂಪದ ಗಾಯಕಿಯಾಗಿದ್ದು, ಭಾರತೀಯ ಸಂಗೀತ ಕ್ಷೇತ್ರದಲ್ಲಿ ಅಳಿಸಲಾಗದ ಹೆಜ್ಜೆ ಗುರುತು ಮೂಡಿಸಿದ್ದಾರೆ" ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಲ್ಲಿನಾಥ ದೇಶಮುಖ, ಶಿವರಾಜ ಅಂಡಗಿ, ರತ್ನಮ್ಮ ನಿಂಬೂರ, ಮಮತಾ ಜೋಶಿ ಹಾಗೂ ಸಿದ್ದರಾಮ ಹಂಚನಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೇಖಾ ಅಂಡಗಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ಸಿದ್ದರಾಮ ಹಂಚನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ಕಲಾವಿದರಾದ ಮಮತಾ ಜೋಶಿ, ರವೀಂದ್ರ ಕುಲಕರ್ಣಿ, ಕಾವೇರಿ ಹೀರೆಮಠ ಹಾಗೂ ಶಂಕರ ಹೀರೆಮಠ ಅವರು ಎಸ್. ಜಾನಕಿ ಅವರ ಜನಪ್ರಿಯ ಗೀತೆಗಳನ್ನು ಗಾಯನ ಮಾಡುವ ಮೂಲಕ ಅವರ ಸಂಗೀತ ಸೇವೆಯನ್ನು ಸ್ಮರಿಸಿದರು.

ಕೇವಲ ಅರ್ಧ ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ, ಅಭಿಮಾನಿಗಳ ಅಪಾರ ಸ್ಪಂದನೆಯಿಂದ ಸುಮಾರು ಮೂರುವರೆ ಗಂಟೆಗಳ ಕಾಲ ನಡೆಯಿತು. ನೂರಾರು ಸಂಗೀತಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾನಕಿ ಅವರ ಅಮರ ಗೀತೆಗಳನ್ನು ಆಲಿಸಿ ಭಾವಪೂರ್ಣ ನಮನ ಸಲ್ಲಿಸಿದರು.

ಕೊನೆಯಲ್ಲಿ ಸ್ವರಾಂಜಲಿ ಮೇಲೋಡಿಸ್‌ನ ನಿರ್ದೇಶಕರಾದ ಸಿದ್ದರಾಮ ಹಂಚನಾಳ ವಂದನಾರ್ಪಣೆ ಸಲ್ಲಿಸಿದರು.