ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಲು ಆಗ್ರಹಿಸಿ ಸಿಪಿಐ(ಎಂ) ಬೃಹತ್ ಪ್ರತಿಭಟನೆ
ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಲು ಆಗ್ರಹಿಸಿ ಸಿಪಿಐ(ಎಂ) ಬೃಹತ್ ಪ್ರತಿಭಟನೆ
ಮಹಾಗಾಂವ, ಜು. 27: ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ಜನಸಾಮಾನ್ಯರು ಹಾಗೂ ರೈತರ ಸಂಕಷ್ಟ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ನೇತೃತ್ವದಲ್ಲಿ ಸೋಮವಾರ ಮಹಾಗಾಂವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಖಂಡರು, ಈ ವರ್ಷ ಸಮರ್ಪಕ ಮಳೆಯಾಗದ ಪರಿಣಾಮ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಜನರು ಹಾಗೂ ಜಾನುವಾರುಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಕೂಡಲೇ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ವಿಸ್ತರಿಸಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಉದ್ಯೋಗ ಸೃಷ್ಟಿಸಬೇಕು. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೆಲಸ ಒದಗಿಸಿ, ವಾರಕ್ಕೊಮ್ಮೆ ಕಡ್ಡಾಯವಾಗಿ ವೇತನ ಪಾವತಿಸಬೇಕು ಹಾಗೂ ಬಾಕಿ ಇರುವ ಕೂಲಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ನಗರ ಪ್ರದೇಶಗಳಲ್ಲಿಯೂ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಿ, ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರವಾಗಿ ಕಾಮಗಾರಿ ನಡೆಸಬೇಕು. ಕೂಲಿಗಾಗಿ ಕಾಳು ಯೋಜನೆಯನ್ನು ಜಾರಿಗೆ ತಂದು, ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿಪತ್ತು ನಿರ್ವಹಣಾ ಪ್ರಾಧಿಕಾರ ತಕ್ಷಣ ಕಾರ್ಯಪ್ರವೃತ್ತವಾಗಿ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ನಿಧಿಯಿಂದ ಅಗತ್ಯ ಅನುದಾನ ಬಿಡುಗಡೆ ಮಾಡಿ, ಉದ್ಯೋಗ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಗ್ರಾಮದಲ್ಲಿ ಮೇವಿನ ಬ್ಯಾಂಕ್ ಸ್ಥಾಪಿಸಿ, ಸಣ್ಣ ಮತ್ತು ಅತಿಸಣ್ಣ ರೈತರ ಜಮೀನಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಚಟುವಟಿಕೆಗಳಿಗೆ ನೆರವು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರೈತರ ಸಾಲ ಮನ್ನಾ ಮಾಡುವುದು, ಉಚಿತ ಬೀಜ ಹಾಗೂ ಗೊಬ್ಬರ ವಿತರಿಸುವುದು, ವಲಸೆಯನ್ನು ತಡೆಗಟ್ಟಿ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶ ಕಲ್ಪಿಸುವುದು, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಸೇರಿದಂತೆ ಬಾಕಿ ಇರುವ ಎಲ್ಲಾ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆಯ ಬಳಿಕ ಮಹಾಗಾಂವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಣಮಂತ, ಮಹೇಬೂಬ್ ಕುರಿಕೋಟಾ ಸೇರಿದಂತೆ ಸಿಪಿಐ(ಎಂ) ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ ಮುರುಗೇಶ್ ಇಟಗಿ ಡೊಂಗರಗಾಂವ
