ವಿಶ್ವ ಯೋಗ ದಿನಾಚರಣೆಗೆ ಜಲಯೋಗದ ವಿಶೇಷ ಸ್ಪರ್ಶ: ಪವನಕುಮಾರ ಬಿ. ವಳಕೇರಿ

ವಿಶ್ವ ಯೋಗ ದಿನಾಚರಣೆಗೆ ಜಲಯೋಗದ ವಿಶೇಷ ಸ್ಪರ್ಶ: ಪವನಕುಮಾರ ಬಿ. ವಳಕೇರಿ

ಕಲಬುರಗಿ, ಜೂನ್ 21: 12ನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ತಾಲೂಕಿನ ನಂದಿಕೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಪವನಕುಮಾರ ಬಿ. ವಳಕೇರಿ ಅವರು ಜಲಯೋಗ ಪ್ರದರ್ಶನ ಮಾಡುವ ಮೂಲಕ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ನಂದಿಕೂರು ತೋಟದ ಬಾವಿಯಲ್ಲಿ ಭಾನುವಾರ ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ಸುಮಾರು ಎರಡು ಗಂಟೆಗಳ ಕಾಲ ಜಲಯೋಗ ಕೈಗೊಂಡ ಅವರು, ಪದ್ಮಾಸನ ಸೇರಿದಂತೆ ವಿವಿಧ ಯೋಗಾಸನಗಳನ್ನು ನೀರಿನಲ್ಲಿಯೇ ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದರು.

ಕಳೆದ 25 ವರ್ಷಗಳಿಂದ ನಿರಂತರವಾಗಿ ಯೋಗಾಭ್ಯಾಸ ಮಾಡುತ್ತಿರುವ ಪವನಕುಮಾರ ವಳಕೇರಿ ಅವರು, ತಮ್ಮ ಪುತ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಜಲಯೋಗದ ತರಬೇತಿ ನೀಡುತ್ತಾ ಬಂದಿದ್ದಾರೆ. ಜಲಯೋಗದ ಮಹತ್ವ ಮತ್ತು ಆರೋಗ್ಯಕಾರಿ ಪ್ರಯೋಜನಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಅವರು ನಿರಂತರವಾಗಿ ನಡೆಸುತ್ತಿದ್ದಾರೆ.

ವಳಕೇರಿ ಮಾತನಾಡಿ, “ಜಲಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ನಿಯಮಿತ ಯೋಗಾಭ್ಯಾಸದಿಂದ ಹಲವು ರೋಗರುಜಿಗಳನ್ನು ದೂರವಿಡಬಹುದು. ಕಳೆದ 25 ವರ್ಷಗಳಿಂದ ನಾನು ಯೋಗಾಸನ ಮಾಡುತ್ತಿದ್ದು, ಇದರ ಪ್ರಯೋಜನಗಳನ್ನು ಅನುಭವಿಸಿದ್ದೇನೆ. ಆದ್ದರಿಂದ ಕುಟುಂಬದ ಸದಸ್ಯರು ಹಾಗೂ ಗ್ರಾಮೀಣ ಪ್ರದೇಶದ ಜನರಲ್ಲೂ ಯೋಗದ ಬಗ್ಗೆ ಆಸಕ್ತಿ ಮೂಡಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಹೇಳಿದರು.

ವಿಶ್ವ ಯೋಗ ದಿನದ ಅಂಗವಾಗಿ ನಡೆದ ಈ ಜಲಯೋಗ ಪ್ರದರ್ಶನ ಗ್ರಾಮಸ್ಥರಲ್ಲಿ ವಿಶೇಷ ಕುತೂಹಲ ಮೂಡಿಸಿದ್ದು, ಯೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಆಸಕ್ತಿ ಬೆಳೆಸುವಲ್ಲಿ ನೆರವಾಯಿತು. ಪವನಕುಮಾರ ವಳಕೇರಿ ಅವರ ಈ ವಿಶಿಷ್ಟ ಯೋಗಾಚರಣೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಯಿತು.