ಮದಗುಣಕಿಯ ಗ್ರಾಮದ ದರ್ಶನ
ಮದಗುಣಕಿಯ ಗ್ರಾಮದ ದರ್ಶನ
ಮದಗುಣಕಿಯ ಕ್ರಿಯಾಶೀಲ ಮಿತ್ರರು ಹಾಗೂ ಸೃಜನಶೀಲ ಶಿಕ್ಷಕರು ಆದ ಅಂಬಾರಾಯ ಆರ್.ಮಡ್ಡೆ ಹಾಗೂ ಶಿವರಾಜ್ ಸೂ. ಸಣ್ಣಮನಿ ಅವರು ಸೇರಿ "ಮದುಗುಣಕಿ ಗ್ರಾಮದ ಸಮಗ್ರ ಇತಿಹಾಸಿಕ ಮತ್ತು ಸಾಂಸ್ಕೃತಿಕ ದರ್ಶನ” ಎಂಬ ಕೃತಿಯನ್ನು ಸಿದ್ದಗೊಳಿಸಿರುವುದು ಸಂತಸದ ಸಂಗತಿ. ಗ್ರಾಮಗಳ ಹೆಸರಿನ ಹಿಂದೆ, ಪರಂಪರೆ ಇತಿಹಾಸವಿದೆ. ಗ್ರಾಮಗಳ ಅಧ್ಯಯನದಿಂದ ನಮ್ಮ ಹಿರಿಯರ ನಂಬಿಕೆ, ಆಚರಣೆ ಮತ್ತು ಜೀವನ ಕ್ರಮಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಈ ಕೃತಿ ಸಹಕಾರಿಯಾಗಬಲ್ಲದಾಗಿದೆ. ಸ್ಥಳನಾಮಗಳ ಅಧ್ಯಯನಕ್ಕೆ ಒಂದು ಶತಮಾನದ ಇತಿಹಾಸವಿದೆ.
ಇತಿಹಾಸವೆಂದರೆ ಕೇವಲ ಸಾಮ್ರಾಜ್ಯಗಳ ಉಗಮ ಮತ್ತು ಅಂತ್ಯಗಳ ಲೆಕ್ಕಾಚಾರವಲ್ಲ; ಅದು ತಳಮಟ್ಟದ ಜನಜೀವನ, ಮಣ್ಣಿನ ಗುಣ ಮತ್ತು ಗ್ರಾಮೀಣ ಪರಂಪರೆಯ ಜೀವಂತ ದಾಖಲೆ."
ಯಾವುದೇ ಒಂದು ರಾಷ್ಟ್ರದ ಅಥವಾ ರಾಜ್ಯದ ನೈಜ ಇತಿಹಾಸವು ಅಡಗಿರುವುದು ಅಲ್ಲಿನ ಹಳ್ಳಿಗಳಲ್ಲಿ. ಕಾಲಗರ್ಭದಲ್ಲಿ ಕರಗಿಹೋಗಬಹುದಾದ ಸ್ಥಳೀಯ ಇತಿಹಾಸ, ಮೌಖಿಕ ಪರಂಪರೆ ಮತ್ತು ಜನಪದರ ಬದುಕನ್ನು ಅಕ್ಷರ ರೂಪದಲ್ಲಿ ದಾಖಲಿಸಿ ಸಂರಕ್ಷಿಸುವುದು ಪತ್ರಾಗಾರ ಇಲಾಖೆಯ ಪ್ರಮುಖ ಆಶಯಗಳಲ್ಲೊಂದು. ಈ ನಿಟ್ಟಿನಲ್ಲಿ, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ 'ಮದಗುಣಕಿ' ಗ್ರಾಮದ ಚರಿತ್ರೆಯನ್ನು ಕಟ್ಟಿಕೊಡುವ "ಮದಗುಣಕಿ ಗ್ರಾಮದ ಸಮಗ್ರ ಐತಿಹಾಸಿಕ ಮತ್ತು ಸಾಂಸ್ಕೃತಿಕ ದರ್ಶನ" ಕೃತಿಯು ಇತಿಹಾಸದ ದಾಖಲೀಕರಣದ ದೃಷ್ಟಿಯಿಂದ ಅತ್ಯಂತ ಮೌಲ್ಯಯುತವಾದ ಹೆಜ್ಜೆಯಾಗಿದೆ.
ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ರಜಾಕಾರರ ವಿರುದ್ಧ ಸಿಡಿದು ನಿಂತ ಗ್ರಾಮದ ಶೌರ್ಯ (ದುಧನಿ ಕ್ಯಾಂಪ್), ಕಲಿಯುಗದ ಸಂಜೀವಿನಿಯಂತಿರುವ 'ಕಾಮಣಿ' (ಕಾಮಾಲೆ) ರೋಗದ ನಾಟಿ ವೈದ್ಯ ಪರಂಪರೆ, ಪ್ರಾಚೀನ 'ಗಣಾಚಾರಿ' ಆಡಳಿತ ವ್ಯವಸ್ಥೆ, ಶರಣರ ತತ್ವಗಳನ್ನು ಪಾಲಿಸಿಕೊಂಡು ಬಂದಿರುವ ಮಠ-ಮಾನ್ಯಗಳು ಹಾಗೂ ಹಿಂದೂ-ಮುಸ್ಲಿಂ ಭಾವೈಕ್ಯತೆಯ ದ್ಯೋತಕವಾಗಿರುವ 'ಮೊಹರಂ' ಆಚರಣೆಗಳು ಮದಗುಣಕಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುತ್ತವೆ. ಈ ಕೃತಿಯು ಇವೆಲ್ಲವನ್ನೂ ಅತ್ಯಂತ ಅಚ್ಚುಕಟ್ಟಾಗಿ ಮತ್ತು ಸಾಧಾರವಾಗಿ ದಾಖಲಿಸಿದೆ.
ದಾಖಲೆಗಳಿಲ್ಲದಿದ್ದರೆ ಇತಿಹಾಸವಿಲ್ಲ. ಹಿರಿಯರ ನೆನಪಿನಾಳದಲ್ಲಿದ್ದ ಮೌಖಿಕ ಇತಿಹಾಸವನ್ನು, ಊರಿನ ಗುಡಿ-ಗೋಪುರಗಳ ಹಿಂದಿರುವ ರೋಚಕ ಸಂಗತಿಗಳನ್ನು ಶ್ರದ್ಧೆಯಿಂದ ಕಲೆಹಾಕಿ, ಭವಿಷ್ಯದ ಪೀಳಿಗೆಗೆ ಒಂದು 'ಆಕರ ಗ್ರಂಥ'ವಾಗಿ ರೂಪಿಸಿದ ಲೇಖಕರಾದ ಶ್ರೀ ಶಿವರಾಜ ಸೂ. ಸಣಮನಿ ಮತ್ತು ಶ್ರೀ ಅಂಬಾರಾಯ ಆರ್. ಮಡ್ಡೆ ಅವರ ಕಾರ್ಯವು ಒಬ್ಬ ನೈಜ ಇತಿಹಾಸಕಾರನ ಮತ್ತು ಪತ್ರಾಗಾರನ (Archivist) ಕೆಲಸಕ್ಕೆ ಸಮಾನವಾದುದು. ಈ ಕೃತಿಯು ನಮ್ಮ ಜಿಲ್ಲೆಯ ಸಾಂಸ್ಕೃತಿಕ ದಾಖಲಾತಿಗಳ ಭಂಡಾರಕ್ಕೆ ಒಂದು ಹೆಮ್ಮೆಯ ಸೇರ್ಪಡೆಯಾಗಿದೆ.
ಗ್ರಾಮದ ಯುವಜನತೆಗೆ ತಮ್ಮ ಬೇರುಗಳ ಪರಿಚಯ ಮಾಡಿಸುವ ಮತ್ತು ಸಂಶೋಧಕರಿಗೆ ಕೈಪಿಡಿಯಾಗುವ ಈ ಕೃತಿಯು ನಾಡಿನಾದ್ಯಂತ ತಲುಪಲಿ. ಇಂತಹ ಮಾದರಿ ದಾಖಲೀಕರಣದ ಕಾರ್ಯಗಳು ಪ್ರತಿಯೊಂದು ಗ್ರಾಮದಲ್ಲೂ ನಡೆಯುವಂತಾಗಲಿ.
ಡೊoಗರಗಾoವದ ಮಾತೊಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ 2026 ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 186 ಪುಟಗಳಿದ್ದು 200 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ ಕಲಬುರಗಿ
