ಜಯದೇವಿಗಾಯಕವಾಡ

ಜಯದೇವಿಗಾಯಕವಾಡ

ವಾಚಿಕೆ-22.                               ಜಯದೇವಿಗಾಯಕವಾಡ

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಛೆ ನೆರವೇರುವಲ್ಲಿ ಡಾ. ಹಣಮಂತ ಎಚ್.ಮೇಲಕೇರಿ ಅವರು ಡಾ.ಜಯದೇವಿ ಗಾಯಕವಾಡ ಅವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಜಯದೇವಿ ಗಾಯಕವಾಡ ಅವರಿಂದ ರಚಿತವಾದ

ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ರಾಜ್ಯ ಸಾಹಿತ್ಯ ಪ್ರಶಸ್ತಿ ಕೂಡಾ ಲಭಿಸಿದೆ. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

ಡಾ. ಜಯದೇವಿ ಗಾಯಕವಾಡ ಅವರು ವಚನ ಸಾಹಿತ್ಯ, ಮಹಿಳಾ ಸಾಹಿತ್ಯ ವೈಚಾರಿಕ ಸಾಹಿತ್ಯದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವು ಕೂಡಾ ಸೃಜನಶೀಲವೇ. ಅಲ್ಲದೇ ಜೀವನ ಚರಿತ್ರೆ, ಲೇಖನಗಳು ಸಾಕಷ್ಟು ಪ್ರಕಟವಾಗಿವೆ. ಅವುಗಳನ್ನು ಇಲ್ಲಿ ಕಲೆ ಹಾಕದೇ ಕೇವಲ ಅವರ ಸೃಜನಶೀಲ ಚಿಂತನೆಯ ಅಂಶಗಳು ಮಾತ್ರ ವಾಚಿಕೆಗೆ ನೀಡಿದ್ದು, ಅವರ ಸಾಹಿತ್ಯದ ವಿಸ್ತಾರವೂ ಬಹು ವಿಶೇಷವಾಗಿದೆ. ಡಾ. ಜಯದೇವಿ ಗಾಯಕವಾಡ ಅವರ ಕುರಿತು ಡಾ. ಎಚ್.ಟಿ. ಪೋತೆ ಅವರ ಮಾರ್ಗದರ್ಶನದಲ್ಲಿ ಎಂ.ಫಿಲ್. ಪದವಿ, ಮೂರು ಎಂ.ಎ. ಪದವಿ ವಿದ್ಯಾರ್ಥಿಗಳ ಪ್ರಬಂಧಗಳು, ದಲಿತ ಸಂವೇದನೆಯ ಲೇಖಕಿ ಡಾ. ಜಯದೇವಿ ಗಾಯಕವಾಡ ಎಂಬ ಡಾ. ವಿಜಯಕುಮಾರ ಬೀಳಗಿ ಅವರು ಸಂಪಾದನೆ ಮಾಡಿದ್ದಾರೆ. ಡಾ. ಟಿ.ಎಂ. ಭಾಸ್ಕ‌ರ್ ಅವರು ಪ್ರತಿಭಾನ್ವೇಷಣೆ ಕೃತಿ ರಚನೆ ಪ್ರಕಟಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯ, ಮಹಿಳಾ ವಿಶ್ವವಿದ್ಯಾಲಯಗಳ ಸ್ನಾತಕ ಮತ್ತು ಸ್ನಾತಕೋತ್ತರಗಳಲ್ಲಿ ಇವರ ಕವಿತೆ, ಗಜಲ್, ಲೇಖನಗಳು ಪಠ್ಯದಲ್ಲಿ ಸೇರಿವೆ.

ಡಾ. ಜಯದೇವಿ ಗಾಯಕವಾಡ ಅವರು ಕಾವ್ಯ, ಆಧುನಿಕ ವಚನ, ಹೋರಾಟದ ಹಾಡುಗಳು, ರುಬಾಯಿ, ಗಜಲ್, ಹಾಯಿಕು, ತಾಂಕಾಗಳು ಕಾವ್ಯ ಕ್ಷೇತ್ರದಲ್ಲಿ ಹನ್ನೆರಡು ಸಂಕಲನಗಳು ಹೊರಬಂದಿವೆ. ಯಜ್ಞಸೇನಿಯ ಆತ್ಮಕಥನ ಕಾದಂಬರಿ, ಪ್ರಾಚೀನ ಬೌದ್ಧ ವಿದ್ಯಾಕೇಂದ್ರ, ಸನ್ನತಿ ಈ ಎಲ್ಲಾ ಸಾಹಿತ್ಯದ ಪ್ರಕಾರಗಳನ್ನು ಅವಲೋಕಿಸಿದರೆ ನಮಗೆ ದಟ್ಟವಾಗಿ ಕಂಡು ಬರುವ ಅಂಶ ಸೃಜನಶೀಲ-ಸಂವೇದನಾಶೀಲ ಲೇಖಕಿಯೆಂದು ಗುರುತಿಸಬೇಕಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತ್ತು ಇಡೀ ಕರ್ನಾಟಕದ ಸಾಹಿತ್ಯವನ್ನು ಅವಲೋಕನ ಮಾಡಿದರೆ ಗಟ್ಟಿಯಾಗಿ ಬರೆದ, ಬರಹ-ಭಾಷಣ ಮಾಡುವ ಹಾಗೂ ಸಾಹಿತ್ಯ ರಚನೆಗೆ ತೊಡಗಿದ ದಲಿತ ಮಹಿಳೆ ಹಾಗೂ ಕನ್ನಡ ಸಾಹಿತ್ಯ ಮಹಿಳೆ ತೆಗೆದುಕೊಂಡಾಗ ಇವರ ಪ್ರಚಲಿತ ಸೃಜನಶೀಲ ಸಂವೇದನಾ ಶೀಲ ಸಮಕಾಲೀನರ ಲೇಖಕಿಯರ ಸಾಲಿನಲ್ಲಿ ಇವರ ಹೆಸರು ಮುಂಚೂಣಿಯಲ್ಲಿ ಬರುವುದು. ಇವರ ಒಟ್ಟು ಆಶಯ ಓದು ಬದುಕು ಬರಹದಲ್ಲಿ ಬದ್ಧತೆ, ತಾತ್ವಿಕ ನಿಲುವು ಖಚಿತವಾಗಿ ಕಂಡುಬರುತ್ತದೆ.

ಜೊತೆಗೆ ಅವರ ಬರಹದ ಆಶಯ-ಧೋರಣೆ, ವೈಚಾರಿಕತೆ ನಿಲುವಿಗೆ ಬದ್ಧರಾಗಿರುವುದು. ಬುದ್ಧತ್ವ-ಬಸವತತ್ವ ಅಂಬೇಡ್ಕರ್ ತತ್ವದ ಹಾಗೂ ಮಹಾತ್ಮರ, ಚಿಂತಕರ ಆಶಯಗಳು ಇವರಿಗೆ ಪ್ರೇರಣೆ-ಧೋರಣೆಗಳು ಆದರೂ ಸಹಿತ ಅವರೆಲ್ಲರ ಚಿಂತನೆಗಳ ಓದು ಅಧ್ಯಯನದಿಂದ ಆ ಅರಿವಿನೊಳಗಡೆ ತಮ್ಮ ಅಕ್ಷರದ ಅರಿವು- ಅನುಭಾವವಾಗಿಸಿ ಸಾಹಿತ್ಯ ಮುಖೇನ ಹರಿಯಬಿಟ್ಟಿರುವುದು ವಿಶೇಷವಾಗಿದೆ. ಸಂವಿಧಾನದ ಆಶಯಕ್ಕೆ ದಕ್ಕೆ ಆಗಲಾರದೇ ಕಾನೂನಾತ್ಮಕ ಸಂವಿಧಾನದ ಆಶಯಗಳನ್ನು ಕಟ್ಟಿ ಬದ್ಧವಾಗಿ ಈಡೇರಿಸುವ ಬಯಕೆ ಅವರ ಎಲ್ಲಾ ಸೃಜನಶೀಲಕಾಣುತ್ತೇವೆ. ಮಹಿಳಾವಾದ-ಸಂವೇದನೆಯು ಕೂಡಾ ಅವರಲ್ಲಿದೆ. ಇಂತಹ ವಿಶಿಷ್ಟವಾದ ಸಂವೇದನೆಯ ಲೇಖಕಿ ಡಾ. ಜಯದೇವಿ ಗಾಯಕವಾಡ ಅವರ ಸಾಹಿತ್ಯ ಜೀವಪರ- ಕಾರುಣ್ಯತೆ-ಬುದ್ಧ-ಬಸವ-ಅಂಬೇಡ್ಕರ ಹಾಗೂ ಸಂವಿಧಾನದ ಆಶಯದಂತೆ ಜೀವಪರತೆಯಿಂದ ಕೂಡಿದ್ದಾಗಿದೆ. ಡಾ. ಜಯದೇವಿ ಗಾಯಕವಾಡ ಅವರು ಬರೆದ ಹೋರಾಟದ ಹಾಡುಗಳು ಮತ್ತು ರುಬಾಯಿಗಳನ್ನು ತೆಗೆದುಕೊಂಡರೆ ಕನ್ನಡದ ಮೊಟ್ಟ ಮೊದಲ ಕವಯತ್ರಿಯಾಗಿ ಕಂಡು ಬರುತ್ತಾಳೆ. ತಾಂಕಾ, ಹಾಯಿಕು, ಗಜಲ್‌ಗಳನ್ನು ಬರೆದ ಮೊದಲ ದಲಿತ ಕವಿಯತ್ರಿ ಎಂಬ ಸಾಲಿಗೆ ಸೇರಿದ್ದಾರೆ. ಹೀಗಾಗಿ ಅವರೊಬ್ಬ ಶ್ರೇಷ್ಠ ಸೃಜನಶೀಲ ಬರಹಗಾರ್ತಿಯಾಗಿದ್ದಾರೆ.

 ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 196 ಪುಟಗಳನ್ನು ಹೊಂದಿದ್ದು 195 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.