ಮಕ್ಕಳ ಮನಸ್ಸು ಮೊಬೈಲ್ ಮುಕ್ತವಾಗಬೇಕು -ಡಾ ಹೊಸಮನಿ
ಪಣಜಿಯಲ್ಲಿ ಜರುಗಿದ ಯಶಸ್ವಿ 21ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ
ಮಕ್ಕಳ ಮನಸ್ಸು ಮೊಬೈಲ್ ಮುಕ್ತವಾಗಬೇಕು -ಡಾ ಹೊಸಮನಿ
ಪಣಜಿ, ಎ. 12: ವಿಷ್ಣು ನಾಯ್ಕ್ ವೇದಿಕೆ - ಗೋವಾದ ಪಣಜಿಯಲ್ಲಿ ಆಯೋಜಿಸಿದ್ದ 21ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ದಲ್ಲಿ ಹಸಿರು ಹೊನ್ನು ಮತ್ತು ಶರಣ ಸಂಸ್ಕೃತಿ ಕೃತಿಯ ಗಳನ್ನು ಲೋಕಾರ್ಪಣೆ ಗೊಳಿಸಲಾಯಿತು.
ಡಾ ಸತೀಶ್ ಕುಮಾರ್ ಹೊಸಮನಿ ಅವರ ಸ್ವರಚಿತ ಹಸಿರು ಹೊನ್ನು ಮತ್ತು ಶರಣ ಸಂಸ್ಕೃತಿ ಕೃತಿಗಳನ್ನು ಗೋವಾ ಕನ್ನಡ ಸಮಾಜದ ಅಧ್ಯಕ್ಷರಾದ ಅರುಣ್ ಕುಮಾರ್ ಅವರು ಲೋಕಾರ್ಪಣೆಗೊಳಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೊರನಾಡ ಕನ್ನಡಿಗರು ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಏಕೆಂದರೆ ಅದು ತಾಯಿನಾಡಿನೊಂದೆಗಿನ ನಂಟನ್ನು ಗಟ್ಟಿಗೊಳಿಸುವ ದಾರಿಯಾಗಿದೆ. ಈ ಸಂದರ್ಭದಲ್ಲಿ ಅವರು ಕೃತಿಯ ಲೇಖಕರನ್ನು ಅಭಿನಂದಿಸಿದರು.
ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಲೇಖಕರಾದ ಡಾ ಸತೀಶ್ ಕುಮಾರ್ ಹೊಸಮನಿ ಯವರು ಒತ್ತಡದ ಜೀವನದಿಂದಾಗಿ ಸಾಹಿತ್ಯ ರಚನೆ ಕ್ಷೀಣಗೊಳ್ಳುತ್ತಿದೆ. ಗ್ರಂಥಗಳನ್ನು ಓದದೆ ಬರೆಯುವ ಸಾಹಿತ್ಯ ಸತ್ವಯುತವಾಗಿರುವುದಿಲ್ಲ. ಅಧ್ಯಯನಶೀಲತೆಯಿಂದ ಮಾತ್ರ ಉತ್ತಮ ಸಾಹಿತ್ಯವನ್ನು ಕೊಡಲು ಸಾಧ್ಯ. ಮಕ್ಕಳು ಸಾಹಿತ್ಯ ಪರಕೃತಿಗಳನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ಅವರ ಗಮನವನ್ನು ಮೊಬೈಲ್ ಸಂಪೂರ್ಣವಾಗಿ ಕಿತ್ತುಕೊಂಡಿದೆ. ಬಹಳಷ್ಟು ಮಕ್ಕಳು ಮೊಬೈಲ್ ವ್ಯಸನಿಗಳಾಗುತ್ತಿರುವುದು ದುರದೃಷ್ಟಕರ. ಕರ್ನಾಟಕ ಸರಕಾರ ಶಾಲಾ ಮಕ್ಕಳಿಗೆ ಶಾಲೆಯ ಒಳಗಡೆ ಮೊಬೈಲ್ ಬಳಕೆಯನ್ನು ನಿಷೇಧಿಸಿದೆ. ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬ ಘೋಷ ವಾಕ್ಯವನ್ನು ಪ್ರಚಾರ ಮಾಡುತ್ತಿದೆ. ಸರಕಾರದ ಈ ಪ್ರಯತ್ನ ಸಫಲವಾಗಲು ವಿದ್ಯಾರ್ಥಿಗಳ ತಂದೆ ತಾಯಿಗಳ ಸಹಕಾರ ಅತ್ಯಗತ್ಯ ಎಂದರು.
ರಾಷ್ಟ್ರೀಯ ಕನ್ನಡ ಸಮ್ಮೇಳನ ಸಮಿತಿ ಸ್ಥಾಪಕಾಧ್ಯಕ್ಷ ಕೆ ಪಿ ಮಂಜುನಾಥ್ ಸಾಗರ್ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕನ್ನಡದ ಕಲಾವಿದರು ಸಾಹಿತಿಗಳಿಗೆ 25 ವರ್ಷಗಳಿಂದ ದೇಶ ವಿದೇಶಗಳಲ್ಲಿ 10,000ಕ್ಕೂ ಹೆಚ್ಚು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದೇವೆ. ಈ ಸಾಧನೆಗೈದ ಕರ್ನಾಟಕದ ಏಕೈಕ ಸಂಘಟನೆ ನಮ್ಮದು. ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ್ ಮುಂತಾದ ದಿಗ್ಗಜರು ವೇದಿಕೆಗೆ ಶೋಭೆ ತಂದಿದ್ದಾರೆ. ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷರಾದವರು ಮುಂದಿನ ವರ್ಷಗಳಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಲು ಪರಿಗಣಿಸಲ್ಪಡುತ್ತಾರೆ ಎಂದರು.
ಹೃದಯವಾಹಿನಿ ಮಂಗಳೂರು, ಮಂಜುನಾಥ್ ಎಜುಕೇಶನ್ ಟ್ರಸ್ಟ್ ರಿ. ಮತ್ತು ಗೋವಾ ಕದಂಬ ಪ್ರತಿಷ್ಠಾನ ಪಣಜಿ ಸಂಯುಕ್ತವಾಗಿ ಪಣಜಿಯ ಅಶೋಕ ಪ್ಲಾಜಾ ಸಭಾಂಗಣದಲ್ಲಿ ಏಪ್ರಿಲ್ 12ರಂದು ಒಂದು ದಿನದ 21ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಿದ್ದರು.
ಪ್ರತಿ ಲೋಕಾರ್ಪಣೆ ಮತ್ತು ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಮ್ಮೇಳನ ಅಧ್ಯಕ್ಷ ಡಾ ಸುಬ್ರಮಣಿ ( ಪಲ್ಲವಿ ಮಣಿ ), ಪ್ರೊ. ಪ್ರಭುಲಿಂಗ ದಂಡಿನವರ, ಮಂಗಳೂರಿನ ಎಸ್ ಕೆ ಮುನ್ಸಿಪಲ್ ಎಂಪ್ಲಾಯಸ್ ಯೂನಿಯನ್ ನ ಮಾಜಿ ಅಧ್ಯಕ್ಷ ಶಿವರಾಜ್ ಪಾಂಡೇಶ್ವರ್, ಮಂಗಳೂರಿನ ಕರಾವಳಿ ಲಯನ್ಸ್ ಅಧ್ಯಕ್ಷ ರಿಯಾಜ್, ರಾಯಚೂರಿನ ಕಲಾ ಸಂಕುಲ ಪ್ರಧಾನ ಕಾರ್ಯದರ್ಶಿ ಮಾರುತಿ ಬಡಿಗೇರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ ಶೈನಿ ಗ್ರೇಸ್, ಶ್ರೀ ರುದ್ರಯ್ಯ ಸ್ವಾಮಿ ಹಿರೇಮಠ, ಶ್ರೀ ಬಸವರಾಜ್ ಎಚ್, ಶ್ರೀಮತಿ ಭೀಮವ್ವ ಬೆಲ್ಲದ ಬಾಗೆವಾಡಿ ಇವರಿಗೆ ಹೃದಯವಂತರು ಪ್ರಶಸ್ತಿ - 2026 ಪ್ರದಾನ ಮಾಡಲಾಯಿತು.
ಕರ್ನಾಟಕದಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಕಲಾವಿದರು ವೈವಿಧ್ಯಮಯ ಕಾರ್ಯಕ್ರಮ ನೀಡಿದರು.
ಅಂತರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿ ಅವರಿಂದ ನಗೆ ಹೊನಲು ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು .
ಶ್ರೀ ಸಾಯಿ ರಾಮನ್ ಕಲಾಕೇಂದ್ರ ತುಮಕೂರು, ಭಾರ್ಗವಿ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಬೆಂಗಳೂರು ಹಾಗೂ ರತಿಕ ಹಡಗಲಿ ಮತ್ತು ತಂಡ ಧಾರವಾಡ ಇವರಿಂದ ಉಳ್ಳಾಲ ಅಬ್ಬಕ್ಕ ರಾಣಿ ನೃತ್ಯ ರೂಪಕ, ಭರತನಾಟ್ಯ ಮತ್ತು ಜಾನಪದ ನೃತ್ಯಗಳು ಮನಮೋಹಕವಾಗಿ ಮೂಡಿ ಬಂದವು.
ಮಂಗಳೂರಿನ ಆಫೀಸರ್ ಕ್ಲಬ್ ನ ಕರೋಕೆ ತಂಡ ಗಾಯಕರಾದ ನಾಗರಾಜು ಆರ್ ಬಿ, ಶಿವರಾಜ್ ಪಾಂಡೇಶ್ವರ, ಶಂಸುದ್ದೀನ್, ಜಗದೀಶ್ ಪೖ, ರಿಯಾಜ್ ಮಂಗಳೂರು, ಸಂತೋಷಿ ರಾಯಚೂರು, ಚಿತ್ರ ಕಲಾವಿದೆ ಹೇಮಾ ಪಾಟೀಲ್ ಅವರು ನಡೆಸಿಕೊಟ್ಟ ಸ್ವರ - ಕುಂಚ - ಚಿತ್ರ ಕಾರ್ಯಕ್ರಮ ಸಭೆಯನ್ನು ಮಂತ್ರ ಮುಗ್ಧಗೊಳಿಸಿತು.
ಅಮೂಲ್ಯ ಸುಜಿತ್ ಮತ್ತು ಅನು ಆನಂದ್ ಅವರ ಸೆಮಿ ಕ್ಲಾಸಿಕಲ್ ಮತ್ತು ಭರತನಾಟ್ಯ ಪ್ರದರ್ಶನ ಸೊಗಸಾಗಿದ್ದವು.
ಪಣಜಿ ಮಕ್ಕಳು ನಡೆಸಿಕೊಟ್ಟ ಪ್ಯಾಶನ್ ಶೋ ವರ್ಣ ರಂಜಿತವಾಗಿತ್ತು.
ಶ್ರೀಮತಿ ಪೂರ್ಣಿಮ ಎನ್ ಮತ್ತು ಸಾಗರ್ ಟಿ ಎಸ್ ಸಮ್ಮೇಳನದ ನಿರೂಪಣೆ ನಡೆಸಿಕೊಟ್ಟರು.
