ಜ.18 ರಂದು ತನಾರತಿ-19 ಕ್ಕೆ ರಥೋತ್ಸವ. ಕೋರಿಸಿದ್ಧೇಶ್ವರರ ಜಾತ್ರಾಮಹೋತ್ಸವಕ್ಕೆ ನಾಲವಾರ ಸಜ್ಜು.

ಜ.18 ರಂದು ತನಾರತಿ-19 ಕ್ಕೆ ರಥೋತ್ಸವ.  ಕೋರಿಸಿದ್ಧೇಶ್ವರರ ಜಾತ್ರಾಮಹೋತ್ಸವಕ್ಕೆ ನಾಲವಾರ ಸಜ್ಜು.

ಜ.18 ರಂದು ತನಾರತಿ-19 ಕ್ಕೆ ರಥೋತ್ಸವ.

ಕೋರಿಸಿದ್ಧೇಶ್ವರರ ಜಾತ್ರಾಮಹೋತ್ಸವಕ್ಕೆ ನಾಲವಾರ ಸಜ್ಜು.

ಕಲ್ಯಾಣ ಕರ್ನಾಟಕದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಕಲಬುರಗಿ ಜಿಲ್ಲೆಯ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ನಾಲವಾರ ಕ್ಷೇತ್ರ ನವವಧುವಿನಂತೆ ಸಿಂಗಾರಗೊಂಡಿದೆ.

ಜಾತ್ರಾಮಹೋತ್ಸವದ ಅಂಗವಾಗಿ ಈಗಾಗಲೇ ವಾರದ ಹಿಂದಿನಿಂದಲೇ ಶ್ರೀಮಠದಲ್ಲಿ ಧಾರ್ಮಿಕ ಪುರಾಣ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನನಿತ್ಯ ನಡೆಯುತ್ತಿವೆ.

ಪೀಠಾಧಿಪತಿಗಳಾದ ಪೂಜ್ಯ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಪಾವನಸಾನಿಧ್ಯದಲ್ಲಿ ಪ್ರಸಕ್ತ ವರ್ಷದ ಜಾತ್ರಾಮಹೋತ್ಸವವು ಇದೇ ಜ.18-19-20 ರಂದು ಅದ್ಧೂರಿಯಾಗಿ ನಡೆಯಲಿದೆ.

18 ರಂದು ರಾತ್ರಿ 8 ಗಂಟೆಗೆ ಜಾತ್ರಾಮಹೋತ್ಸವದ ಉದ್ಘಾಟನೆ ಹಾಗೂ ಶಿವಾನುಭವ ಚಿಂತನ ಕಾರ್ಯಕ್ರಮ ನಡೆಯಲಿದೆ. ಅಂದೇ ಮಧ್ಯರಾತ್ರಿ ದಕ್ಷಿಣ ಭಾರತದ ದೀಪಮೇಳವೆಂದೇ ಖ್ಯಾತಿಯಾದ ಭಕ್ತರ ಹರಕೆಯ ತನಾರತಿ ಮಹೋತ್ಸವ ನಡೆಯಲಿದೆ. 

ಮರುದಿನ ಜ.19 ರಂದು ಸಂಜೆ 7 ಗಂಟೆಗೆ ಲಕ್ಷಾಂತರ ಭಕ್ತರ ಮಧ್ಯೆ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಭವ್ಯ ರಥೋತ್ಸವ ಜರುಗಲಿದೆ.ಇದೇ ಸಂದರ್ಭದಲ್ಲಿ ವಿಶೇಷ ಮದ್ದು ಸುಡುವ ಕಾರ್ಯಕ್ರಮ ಹಾಗೂ ಜಾನಪದ ಕಲಾತಂಡಗಳ ಪ್ರದರ್ಶನ ನಡೆಯಲಿದೆ.

ನಂತರ ನಡೆಯುವ ಸಮಾರಂಭದಲ್ಲಿ ಶ್ರೀಮಠದ ವತಿಯಿಂದ ನಾಡಿನ ಗಣ್ಯಸಾಧಕರಿಗೆ ಪ್ರತಿವರ್ಷ ನೀಡಲ್ಪಡುವ "ಶ್ರೀ ಸಿದ್ಧತೋಟೇಂದ್ರ" ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಬಾರಿ ನಾಡಿನ ಹಿರಿಯ ಕಲಾವಿದ,ಖ್ಯಾತ ಚಲನಚಿತ್ರ ನಟ ಶ್ರೀನಾಥ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ಮರುದಿನ ಮಂಗಳವಾರ ದಿಂದ ಶ್ರೀಮಠದ ಆವರಣದಲ್ಲಿ ಬೃಹತ್ ಜಾನುವಾರು ಜಾತ್ರೆ ಪ್ರಾರಂಭವಾಗಲಿದ್ದು ಮೂರು ದಿನಗಳ ಕಾಲ ವಿವಿಧ ತಳಿಯ ಸಾವಿರಾರು ಜಾನುವಾರುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.ಜಾನುವಾರು ಜಾತ್ರೆಯಲ್ಲಿ ಪಾಲ್ಗೊಂಡ ಅತ್ಯತ್ತಮ ಜಾನುವಾರಗಳಿಗೆ ಬಹುಮಾನ ವಿತರಣೆ ಕೂಡ ನಡೆಯಲಿದೆ.

ಜಾತ್ರಾಮಹೋತ್ಸವಕ್ಕೆ ಕರ್ನಾಟಕ ಆಂಧ್ರ, ಮಹಾರಾಷ್ಟ್ರ, ತೆಲಂಗಾಣ, ಗೋವಾ ಸೇರಿದಂತೆ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದು, ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಭಾರತ ಸರ್ಕಾರದ ರೈಲ್ವೆ ಇಲಾಖೆಯು ನಾಲವಾರ ರೈಲು ನಿಲ್ದಾಣದ ಮೇಲೆ ಹಾದು ಹೋಗುವ ಎಲ್ಲಾ ರೈಲುಗಳ ನಿಲುಗಡೆ ವ್ಯವಸ್ಥೆ ಮಾಡಿದೆ.

ಭಕ್ತರ ದಾಸೊಹಕ್ಕಾಗಿ ಬೃಹತ್ ದಾಸೋಹ ಮನೆ ಸಿದ್ಧಗೊಂಡಿದ್ದು,ನೂರಾರು ಬಾಣಸಿಗರು ವಿವಿಧ ಬಗೆಯ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ.ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಗಳಲ್ಲಿ ದಾಸೋಹಕ್ಕಾಗಿ ರೊಟ್ಟಿ ಮತ್ತು ವಿವಿಧ ದವಸ ಧಾನ್ಯಗಳನ್ನು ತಂದು ಸಮರ್ಪಿಸುತ್ತಿದ್ದಾರೆ.

ಶ್ರೀಮಠವು ವರ್ಣರಂಜಿತ ವಿದ್ಯುದ್ಧೀಪಗಳಿಂದ ಅಲಂಕೃತವಾಗಿದ್ದು, ನವವಧುವಿನಂತೆ ಶ್ರೀಕ್ಷೇತ್ರ ನಾಲವಾರ ಕಂಗೊಳಿಸುತ್ತಿದೆ.ಶ್ರೀಮಠದ ಆವರಣ ಸೇರಿದಂತೆ ಇಡೀ ಗ್ರಾಮವನ್ನು ಸ್ವಚ್ಛ ಗೊಳಿಸಲಾಗಿದ್ದು ಅಂತಿಮ ಹಂತದ ಕಾರ್ಯಗಳು ಭರದಿಂದ ಸಾಗಿವೆ.

ನಾಡಿನ ಪ್ರತಿಷ್ಠಿತ ಮಠಾಧೀಶರು,ಸಚಿವರು, ಶಾಸಕರು ಹಾಗೂ ಕವಿ-ಕಲಾವಿದರು ಭಾಗವಹಿಸುವ ಜಾತ್ರೆ ಕೇವಲ ಧಾರ್ಮಿಕ ಯಾತ್ರೆಯಾಗಿರದೇ ಕಲ್ಯಾಣ ಕರ್ನಾಟಕ ಭಾಗದ ಸಾಂಸ್ಕೃತಿಕ ಜಾತ್ರೆಯಾಗಿ ಆಚರಣೆಗೊಳ್ಳುತ್ತಿದ್ದು ನಾಡಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುವಿನ ಕೃಪೆಗೆ ಪಾತ್ರರಾಗಲು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.