ನಿರಂತರ ಶ್ರದ್ಧೆ, ಸಾಧನೆ ಹಾಗೂ ಸಾಂಸ್ಕೃತಿಕ ಬದ್ಧತೆಗೆ ಸಾಕ್ಷಿ - ಸಂಗೀತ ಕೃಪಾ ಕುಟೀರ
ನಿರಂತರ ಶ್ರದ್ಧೆ, ಸಾಧನೆ ಹಾಗೂ ಸಾಂಸ್ಕೃತಿಕ ಬದ್ಧತೆಗೆ ಸಾಕ್ಷಿ - ಸಂಗೀತ ಕೃಪಾ ಕುಟೀರ
ನಗರದ ಸಾಂಸ್ಕೃತಿಕ ವಲಯದಲ್ಲಿ ನಾಲ್ಕು ದಶಕಗಳಿಗೂ ಅಧಿಕ ಕಾಲದಿಂದ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಗೀತ ಕೃಪಾ ಕುಟೀರ ತನ್ನ 41ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಭಕ್ತಿಭಾವ ಮತ್ತು ಸಂಗೀತ ವೈಭವದೊಂದಿಗೆ ಆಚರಿಸಿಕೊಂಡಿತು.
ನಗರದ ಬನಶಂಕರಿ ಪ್ರಥಮ ಹಂತದ ಪಿ.ಎಸ್. ಕಾಲೇಜ್ ಹಿಂಭಾಗದಲ್ಲಿರುವ ಸ್ವಾಮಿ ವಿವೇಕಾನಂದ ವಿದ್ಯಾ ಶಾಲೆಯಲ್ಲಿ 41ನೇ ವಾರ್ಷಿಕೋತ್ಸವದ ಸಂಭ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವು ಖ್ಯಾತ ವಿಮರ್ಶಕ, ಕರ್ನಾಟಕ ಕಲಾಶ್ರೀ ಡಾ. ಎಂ. ಸೂರ್ಯಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಖ್ಯಾತ ಸಂಗೀತ ಕಲಾವಿದ ವಿದ್ವಾನ್ ಬಿ. ಹುಸೇನ್ ಸಾಬ್ ಕನಕಗಿರಿ ಹಾಗೂ ಖ್ಯಾತ ಹಾರ್ಮೋನಿಯಂ ವಾದಕ ವಿದ್ವಾನ್ ಕೆ. ಗುರುರಾಜ್ ಅವರಿಗೆ ‘ಸಂಗೀತ ಕಲಾರವಿಂದ’ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.
ಇದನಂತರ ‘ದಾಸವಾಣಿ ಸೌರಭ’ ಕಾರ್ಯಕ್ರಮದಲ್ಲಿ, ವಿದ್ವಾನ್ ಬಿ. ಹುಸೇನ್ ಸಾಬ್ ಕನಕಗಿರಿ ಅವರ ಗಾಯನಕ್ಕೆ ಹಾರ್ಮೋನಿಯಂನಲ್ಲಿ ವಿದ್ವಾನ್ ಕೆ. ಗುರುರಾಜ್, ತಬಲದಲ್ಲಿ ವಿದ್ವಾನ್ ಸಂತೋಷ್ ಕೊಡ್ಲಿ, ವಿಶೇಷ ಲಯವಾದ್ಯದಲ್ಲಿ ವಿದ್ವಾನ್ ಶಾಮದತ್ ಹಾಗೂ ತಾಳದಲ್ಲಿ ವಿದ್ವಾನ್ ವೀರೇಂದ್ರ ಮತ್ತು ವಿದ್ವಾನ್ ಪ್ರಸಾದ್ ಸಾಥ್ ನೀಡಿದರು.
1984ರಲ್ಲಿ ಸ್ಥಾಪನೆಯಾದ ಸಂಗೀತ ಕೃಪಾ ಕುಟೀರವು ಗುರು–ಶಿಷ್ಯ ಪರಂಪರೆಯನ್ನು ಜೀವಂತವಾಗಿಟ್ಟುಕೊಂಡು ಅನೇಕ ಯುವ ಪ್ರತಿಭೆಗಳಿಗೆ ಸಂಗೀತ ಶಿಕ್ಷಣ, ವೇದಿಕೆ ಹಾಗೂ ಮಾರ್ಗದರ್ಶನ ನೀಡುತ್ತ ಬಂದಿದೆ. ಸಂಗೀತವನ್ನು ಕೇವಲ ಕಲೆಯಾಗಿ ಮಾತ್ರವಲ್ಲದೆ ಜೀವನ ಮೌಲ್ಯಗಳೊಂದಿಗೆ ಬೆಸೆಯುವ ಸಂಸ್ಥೆಯಾಗಿ ತನ್ನದೇ ಆದ ವಿಶಿಷ್ಟ ಗುರುತನ್ನು ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಹೆಚ್. ಸುಬ್ರಮಣ್ಯ ಜೋಯಿಸ್ ಹಾಗೂ ಕಾರ್ಯದರ್ಶಿ ಎನ್.ಎಸ್. ಗುಂಡಾ ಜೋಯಿಸ್ ತಿಳಿಸಿದರು.
