ಶಹಾಬಾದ್‌ನಲ್ಲಿ ಮಾತಾ ಶ್ರೀ ಮಹಾಕಾಳಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಶಿವ ಪಾರ್ವತಿ ಕಲ್ಯಾಣ ಮಹೋತ್ಸವ
ಶಹಾಬಾದ್‌ನಲ್ಲಿ ಮಾತಾ ಶ್ರೀ ಮಹಾಕಾಳಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಶಿವ ಪಾರ್ವತಿ ಕಲ್ಯಾಣ ಮಹೋತ್ಸವ
ಶಹಾಬಾದ್: ನಗರದ ಮಡ್ಡಿ ನಂ.1ರಲ್ಲಿ ಇರುವ ಮಾತಾ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮೊದಲನೇ ವರ್ಷದ ಶಿವ ಪಾರ್ವತಿ
ಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ದೇವಸ್ಥಾನ ಸಮಿತಿ ಮತ್ತು ಟ್ರಸ್ಟ್ ವತಿಯಿಂದ ವಿಜೃಂಭಣೆಯಿಂದ ಆಯೋಜಿಸಲಾಗಿದೆ.
ಫೆಬ್ರವರಿ 15 ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ ದೇವಸ್ಥಾನದ ಮುಖ್ಯ ಅರ್ಚಕರಾದ ಅಧ್ಯಕ್ಷ ಬಲಭೀಮ್ ಚಿಂತಾಮಣಿ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಲಿವೆ. ಮಹಾಕಾಳಿ ಅಮ್ಮನವರ ಮೂರ್ತಿಗೆ ಬಗೆಬಗೆಯ ವಸ್ತ್ರಾಲಂಕಾರ ಮಾಡಲಾಗುವುದು. ಉತ್ಸವ ಮೂರ್ತಿಯ ಪ್ರದಕ್ಷಿಣೆಯ ನಂತರ ಸಾರ್ವಜನಿಕರು ಹಾಗೂ ಭಕ್ತಾದಿಗಳು ದೇವರ ದರ್ಶನ ಪಡೆದು ಪಾವನಗೊಳ್ಳುವರು. ರಾತ್ರಿ 9ರಿಂದ 12ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಖಜಾಂಚಿ ನೀಲ್ಲಮ್ಮ ಕೊಂಚಿಕೊರವೇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 16ರಂದು ಮಧ್ಯರಾತ್ರಿ 12 ಗಂಟೆಗೆ ಮಹಾ ಮಂಗಳಾರತಿ ಜರುಗಲಿದ್ದು, ಬೆಳಗ್ಗೆ 9 ಗಂಟೆಗೆ ಮೂರ್ತಿ ಪೂಜೆ ಬಳಿಕ ಮಹಾ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಭಕ್ತರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಪಾಧ್ಯಕ್ಷರಾದ ಶ್ರೀಮತಿ ದುರ್ಗಾದೇವಿ ಮಾಹಿತಿ ನೀಡಿದ್ದಾರೆ.
ಕೊಂಚಿಕೊರವೇ ಸಮಾಜದ ಯುವಕರು ಹಾಗೂ ಯುವತಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನದ ಸಂಸ್ಥಾಪಕರಾದ ದಿವಂಗತ ಯಲ್ಲಪ್ಪ ಚಿಂತಾಮಣಿ ಅವರ ಧರ್ಮಪತ್ನಿ ಶ್ರೀಮತಿ ಯಂಕಮ್ಮ ಚಿಂತಾಮಣಿ ತಿಳಿಸಿದ್ದಾರೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆಯಬೇಕೆಂದು ದೇವಸ್ಥಾನ ಸಮಿತಿ ಮನವಿ ಮಾಡಿದೆ.
