ಸಪ್ತ ನೇಕಾರ ಸೇವಾ ಸಂಘದಿಂದ ಬಸವಂತಪ್ಪ ನಾಗನಹಳ್ಳಿ ಅವರ 76ನೇ ಜನ್ಮದಿನ ಆಚರಣೆ
ಸಪ್ತ ನೇಕಾರ ಸೇವಾ ಸಂಘದಿಂದ ಬಸವಂತಪ್ಪ ನಾಗನಹಳ್ಳಿ ಅವರ 76ನೇ ಜನ್ಮದಿನ ಆಚರಣೆ
ಕಲಬುರಗಿ: ನಗರದ ಸನಿಹದ ನಾಗನಹಳ್ಳಿ ಗ್ರಾಮದ ಹಿರಿಯ ವಕೀಲರು ಹಾಗೂ ಪೊಲೀಸ್ ಇಲಾಖೆಯ ನಿವೃತ್ತ ಉಪ ನಿರೀಕ್ಷಕರಾದ ಶ್ರೀ ಬಸವಂತಪ್ಪ ಸಿದ್ದಪ್ಪ ನಾಗನಹಳ್ಳಿ (ಬಿ.ಎಸ್. ನಾಗನಹಳ್ಳಿ) ಅವರ 76ನೇ ಜನ್ಮದಿನೋತ್ಸವ ವನ್ನು ಫೆಬ್ರವರಿ 7ರ ಸಂಜೆ 5 ಗಂಟೆಗೆ ನಗರದ ಹೊಸ ವಕೀಲರ ಕೆಳ ಸಭಾಂಗಣದಲ್ಲಿ ಸಪ್ತ ನೇಕಾರ ಸೇವಾ ಸಂಘದ ವತಿಯಿಂದ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಪ್ತ ನೇಕಾರ ಸೇವಾ ಸಂಘದ ಗೌರವ ಕಾರ್ಯದರ್ಶಿಗಳಾದ ಮ್ಯಾಳಗಿ ಚಂದ್ರಶೇಖರ ಅವರು ಶಾಲು ಹೊದಿಸಿ, ನೂಲಿನ ಹಾರ ಹಾಕಿ, ಸಿಹಿ ಹಂಚುವ ಮೂಲಕ ಶುಭಾಶಯಗಳನ್ನು ಕೋರಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸವಂತಪ್ಪ ನಾಗನಹಳ್ಳಿ ಅವರು ಪೊಲೀಸ್ ಇಲಾಖೆಯಲ್ಲೂ ಹಾಗೂ ವಕೀಲ ವೃತ್ತಿಯಲ್ಲೂ ನಿಷ್ಠಾವಂತ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿರುವುದು ಶ್ಲಾಘನೀಯ ಎಂದರು.
ದಿ. 7-2-1950ರಂದು ಜನಿಸಿದ ಬಸವಂತಪ್ಪ ನಾಗನಹಳ್ಳಿ ಅವರು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ನಾಗನಹಳ್ಳಿಯಲ್ಲಿ ಪೂರ್ಣಗೊಳಿಸಿ, ನಗರದ ಸರ್ಕಾರಿ ಎಂ.ಎಚ್.ಪಿ.ಎಸ್. ಶಾಲೆ, ವಿಜಯ ವಿದ್ಯಾಲಯ ಹಾಗೂ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಬಿ.ಎ ಪದವಿ ಪಡೆದಿದ್ದಾರೆ. 24-9-1976ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು, ಸೇವೆಯಲ್ಲಿರುವಾಗಲೇ ಕಾನೂನು ಪದವಿಯನ್ನು ಪಡೆದು, 29-2-2008ರಂದು ಪೊಲೀಸ್ ಉಪ ನಿರೀಕ್ಷಕರಾಗಿ ನಿವೃತ್ತರಾದರು. ನಂತರ 1-3-2008ರಿಂದ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡು ನ್ಯಾಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸರಳ ಸ್ವಭಾವದಿಂದ “ವಕೀಲ ಪೊಲೀಸ್ ಮಾಮ” ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ.
ಪ್ರಸ್ತುತ ಓಂ ನಗರದಲ್ಲಿನ ತಮ್ಮ ನಿವಾಸದಿಂದ ಸಮಾಜಸೇವೆಯಲ್ಲಿ ಸಕ್ರಿಯರಾಗಿರುವ ಅವರಿಗೆ ಇನ್ನೂ ಅನೇಕ ವರ್ಷಗಳ ಆರೋಗ್ಯಪೂರ್ಣ ಜೀವನ ದೊರಕಲಿ ಎಂದು ಶರಣಬಸವೇಶ್ವರರ ಕೃಪಾಶೀರ್ವಾದ ಕೋರಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಕೋಟೆ ಮಲ್ಲಿಕಾರ್ಜುನ,ಗುರುಸ್ವಾಮಿ ಎಸ್,ಕನ್ನಡಪ್ರಿಯ ವಕೀಲರಾದ ಸಂಜೀವಕುಮಾರ ಡೊಂಗರಗೌಡ,ಬಸವರಾಜ ಶಿರವಾಳ,ಜೆ.ಎಸ್. ವಿನೋದಕುಮಾರ,ಜಾನೆ,ಗಣಪತಿ,ಲಕ್ಷ್ಮೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.
