ನನ್ನ ನರನಾಡಿ, ಹೃದಯಲ್ಲಿ ಕನ್ನಡ ಆವರಿಸಿದೆ: ಶಾಸಕ ಪ್ರಭು ಚವ್ಹಾಣ
ನನ್ನ ನರನಾಡಿ, ಹೃದಯಲ್ಲಿ ಕನ್ನಡ ಆವರಿಸಿದೆ: ಶಾಸಕ ಪ್ರಭು ಚವ್ಹಾಣ
ನನ್ನ ನರನಾಡಿ ಹಾಗೂ ಹೃದಯದಲ್ಲಿ ಕನ್ನಡ ಆವರಿಸಿಕೊಂಡಿದೆ. ಕನ್ನಡ ಕೇವಲ ಭಾಷೆಯಲ್ಲ, ಅದು ನನ್ನ ಬದುಕಿನ ಉಸಿರು, ಸಂಸ್ಕೃತಿ ಮತ್ತು ಆತ್ಮಗೌರವದ ಪ್ರತೀಕವಾಗಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ತಿಳಿಸಿದರು.
ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಔರಾದ(ಬಿ) ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಫೆ.4 ರಂದು ಔರಾದ(ಬಿ) ಪಟ್ಟಣದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನನ್ನ ಮಾತೃಭಾಷೆ ಬಂಜಾರಾ, ಅನಿವಾರ್ಯವಾಗಿ ಮರಾಠಿ ಮಾಧ್ಯಮದಲ್ಲಿ ಓದಿದ್ದೇನೆ. ಆದರೆ ನನ್ನ ಹೃದಯದ ಭಾಷೆ ಕನ್ನಡವಾಗಿದೆ. ಕನ್ನಡ ಬಲ್ಲವರು ಅನೇಕರು ಸಿಗುತ್ತಾರೆ. ಆದರೆ ಕನ್ನಡ ಕೆಲಸಗಳನ್ನು ಮಾಡುವ ಮತ್ತು ಕನ್ನಡವನ್ನು ಬೆಳೆಸಬೇಕೆಂಬ ಇಚ್ಛಾಶಕ್ತಿ ಬೇಕು. ಹಿಂದೆ ಔರಾದನಲ್ಲಿ ಕನ್ನಡದ ಪರಿಸ್ಥಿತಿ ತುಂಬಾ ಹೀನಾಯವಾಗಿತ್ತು. ಗಡಿ ಭಾಗದಲ್ಲಿ ಕನ್ನಡ ಮಾತನಾಡಿದರೆ ಸಾಕು ಜಗಳ ಮಾಡುತ್ತಿದ್ದರು. ನಾನು ಹಿಂದೆ ಅನುಭವಿಸಿದ ಕಷ್ಟ ಮುಂದಿನ ಪೀಳಿಗೆ ಅನುಭವಿಸಬಾರದು ಎಂಬ ಕಾರಣಕ್ಕಾಗಿ ನಾನು ಶಾಸಕನಾದ ನಂತರ ಎಲ್ಲ ಕಡೆ ಕನ್ನಡ ಶಾಲೆಗಳನ್ನು ತಂದು ಕನ್ನಡ ಶಿಕ್ಷಕರನ್ನು ನಿಯೋಜಿಸಿದ್ದು, ಈಗ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಈಗ ಕ್ಷೇತ್ರದ ಪ್ರತಿ ಮನೆಯಲ್ಲಿ ಕನ್ನಡ ಮಾತನಾಡುವವರಿದ್ದಾರೆ. ಎಲ್ಲ ಕಡೆಗಳಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಿದೆ ಎಂದರು.
ಔರಾದನಲ್ಲಿ 7 ಕನ್ನಡ ಸಾಹಿತ್ಯ ಸಮ್ಮೇಳನಗಳು, ಕಮಲನಗರದಲ್ಲಿ ಒಂದು ಸಮ್ಮೇಳನ, ವಲಯ ಸಮ್ಮೇಳನಗಳು ಸೇರಿದಂತೆ ಹತ್ತು ಹಲವು ಕನ್ನಡದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಹಿಂದಿನ ಅಧ್ಯಕ್ಷರ ನೇತೃತ್ವದಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಬೇಕೆಂದು ಉದ್ದೇಶವಿತ್ತು. ಆದರೆ ಅದು ಕೈಗೂಡಿಲ್ಲ. ಆದರೆ ಅವರು ಹೇಳಿದ ಎಲ್ಲ ಕನ್ನಡದ ಕೆಲಸಗಳನ್ನು ಮಾಡಿದ್ದೇನೆ. ಈ ಕೆಲಸ ನಿರಂತರವಾಗಿ ಮುನ್ನಡೆಯಲಿದೆ. ಕನ್ನಡದ ಕೆಲಸಗಳಿಗೆ ಸದಾ ಸಿದ್ಧ ಎಂದು ಹೇಳಿದರು. ಮಕ್ಕಳು ಕನ್ನಡ ಕಲಿಯಬೇಕು. ಕನ್ನಡದಲ್ಲಿ ಮಾತನಾಡಬೇಕು. ನಮ್ಮ ಸಂಸ್ಕೃತಿ ಪರಂಪರೆಯನ್ನು ಗೌರವಿಸಬೇಕು. ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡದ ಕೆಲಸಗಳಿಗೆ ಮುನ್ನುಗ್ಗುವ ಮನೋಭಾವ ಎಲ್ಲರಲ್ಲಿಯೂ ಬೆಳೆಯಬೇಕು ಎಂದು ಶಾಸಕರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಮಲನಗರದಲ್ಲಿ ಕನ್ನಡ ಭವನ ನಿರ್ಮಿಸಬೇಕೆಂಬ ಬೇಡಿಕೆಯಿದೆ. ಅಲ್ಲಿ ನಿವೇಶನದ ಸಮಸ್ಯೆಯಿರುವ ಕಾರಣ ವಿಳಂಬವಾಗುತ್ತಿದೆ. ನಿವೇಶನ ಸಿಕ್ಕ ತಕ್ಷಣ ಕನ್ನಡ ಭವನಕ್ಕೆ ಭೂಮಿ ಪೂಜೆ ನೆರವೇರಿಸುವೆ ಎಂದು ಶಾಸಕರು ಭರವಸೆ ನೀಡಿದರು. ಅಲ್ಲದೇ ಹೊಸ ಕವಿ-ಸಾಹಿತಿಗಳು ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಪ್ರಕಟಿಸಲು ಸಾಧ್ಯವಾಗುತ್ತಿಲ್ಲವೆಂದು ಕಸಾಪ ತಾಲ್ಲೂಕು ಅಧ್ಯಕ್ಷರು ಸಲ್ಲಿಸಿದ ಬೇಡಿಕೆಗೆ ಸ್ಪಂದಿಸಿದ ಶಾಸಕರು, ತಾಲ್ಲೂಕಿನ ಹೊಸ ಕವಿ-ಸಾಹಿತಿಗಳ ಪುಸ್ತಕಗಳನ್ನು ಮುದ್ರಿಸಲು ಸಹಾಯ ಮಾಡುವುದಾಗಿ ಘೋಷಿಸಿದರು.
ನಾನು ಪ್ರಯತ್ನಪಟ್ಟು ಬೀದರ ಜಿಲ್ಲಾ ಕನ್ನಡ ಭವನಕ್ಕೆ ಅನುದಾನ ತಂದು ಕಟ್ಟಡ ನಿರ್ಮಾಣ ಪೂರ್ಣಗೊಳಿಸಿದ್ದೇನೆ. ಜಿಲ್ಲಾ ರಂಗಮAದಿರಕ್ಕೆ ಡಾ.ಚನ್ನಬಸವ ಪಟ್ಟದೇವರು ರಂಗಮAದಿರವೆAದು ಮರುನಾಮಕರಣ, ಬಸವಕಲ್ಯಾಣದಲ್ಲಿ ನೂತನ ಅನುಭವನ ಮಂಟಪಕ್ಕೆ ಭೂಮಿ ಪೂಜೆ ನನ್ನ ಅವಧಿಯಲ್ಲಿ ನೆರವೇರಿಸಿರುವುದು ನನ್ನ ಸೌಭಾಗ್ಯ ಎಂದರು. ಅದರಂತೆ ಔರಾದ(ಬಿ) ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದು, ಅನೇಕ ಪ್ರಗತಿ ಕೆಲಸಗಳನ್ನು ಜಾರಿಗೊಳಿಸಲಾಗುತ್ತಿದೆ. ಯಾವುದೇ ತಂಟೆ-ತಕರಾರುಗಳಿಗೆ ಅವಕಾಶವಿಲ್ಲದೇ ಔರಾದ(ಬಿ) ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು, ದಿವ್ಯ ಸಾನಿಧ್ಯ ವಹಿಸಿದ್ದರು. ಚಿಕ್ಕಮಗಳೂರಿನ ಸಂಸ್ಕೃತಿ ಚಿಂತಕರಾದ ಚಟ್ನಳ್ಳಿ ಮಹೇಶ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷರಾದ ಡಾ.ಮನ್ಮಥ ಡೋಳೆ ಅವರು ಸಮ್ಮೇಳನದ ನುಡಿಗಳನ್ನಾಡಿದರು. ರಾಯಚೂರಿನ ಪ್ರಗತಿಪರ ಕೃಷಿ ಚಿಂತಕರಾದ ಕವಿತಾ ಮಿಶ್ರಾ, ಕಸಾಪ ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶೆಟ್ಟಿ, ತಾಲ್ಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ, 6ನೇ ಸಮ್ಮೇಳನಾಧ್ಯಕ್ಷ ಡಾ.ಸಂಜೀವಕುಮಾರ ಜುಮ್ಮಾ, ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಮುಖಂಡರಾದ ಶಿವರಾಜ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಪಂಡರಿ ಆಡೆ, ಕಸಾಪ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಟಂಕಸಾಲೆ, ಮಹಿಳಾ ಘಟಕದ ಅಧ್ಯಕ್ಷೆ ಮಹಾನಂದಾ ಎಂಡೆ, ನಿಕಟಪೂರ್ವ ಅಧ್ಯಕ್ಷ ಡಾ.ಶಾಲಿವಾನ ಉದಗೀರೆ, ತಾಲ್ಲೂಕು ಉಪಾಧ್ಯಕ್ಷ ಖಂಡೋಬಾ ಕಂಗಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
