“ಪೋಲಿಯೋ ಹನಿ ಹಾಕಿಸುವ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸಿ” ಶಾಸಕ ಅಲ್ಲಂಪ್ರಭು ಪಾಟೀಲ
“ಪೋಲಿಯೋ ಹನಿ ಹಾಕಿಸುವ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸಿ” ಶಾಸಕ ಅಲ್ಲಂಪ್ರಭು ಪಾಟೀಲ
ಕಲಬುರಗಿ, ಡಿ.21 (ಕಲ್ಯಾಣ ಕಹಳೆ ವಾರ್ತೆ): ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವುದರಿಂದ ಅವರ ಜೀವನ ಉಜ್ವಲವಾಗುತ್ತದೆ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ ಅವರು ಹೇಳಿದರು.
ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕಲಬುರಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪಂಚಾಯತ್‌ಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣ ಗ್ರಾಮದಲ್ಲಿರುವ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಅವರು ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್,ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 5,80,045 ಮನೆಗಳಿದ್ದು, ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ 3,50,716 ಆಗಿದೆ ಎಂದು ಮಾಹಿತಿ ನೀಡಿದರು.
ಮೊದಲನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ 1,519 ಲಸಿಕಾ ಕೇಂದ್ರಗಳನ್ನು ರಚಿಸಲಾಗಿದ್ದು, ಮುಂದಿನ ಮೂರು ದಿನಗಳಲ್ಲಿ 1,475 ಮನೆಗಳಿಗೆ ಭೇಟಿ ನೀಡಲಾಗುತ್ತದೆ ಎಂದರು. ಟ್ರಾಂಜಿಟ್ ಲಸಿಕಾ ತಂಡಗಳು 132, ಸಂಚಾರಿ ತಂಡಗಳು 31 ಸೇರಿ ಒಟ್ಟು 1,682 ತಂಡಗಳು ಕಾರ್ಯನಿರ್ವಹಿಸಲಿದ್ದು, 334 ಮೇಲ್ವಿಚಾರಕರು ಹಾಗೂ 3,364 ಲಸಿಕೆ ಹಾಕುವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಗುರಿಯನ್ನು ಸಾಧಿಸಲು ಅಧಿಕಾರಿಗಳು ಹಾಗೂ ಸ್ವಯಂಸೇವಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ವಿಶ್ವದ ಕೆಲವು ಭಾಗಗಳಲ್ಲಿ ವೈಲ್ಡ್ ಪೋಲಿಯೋ ವೈರಸ್ ಪತ್ತೆಯಾಗಿರುವ ಹಿನ್ನೆಲೆ, ಭಾರತದಲ್ಲಿ ಈ ವೈರಸ್ ಪ್ರವೇಶಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಆಯೋಜಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಲಬುರಗಿ ವಿಭಾಗ ನಿರ್ದೇಶಕರಾದ ಡಾ. ಅಂಬಾರಾಯ ಎಸ್. ರುದ್ರವಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳು ಡಾ. ಸಿದ್ದು ಪಾಟೀಲ, ಪೋಲಿಯೋ ಸರ್ವೇಕ್ಷಣಾಧಿಕಾರಿ ಡಾ.ಅನಿಲ ತಾಳಿಕೋಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಮಾರುತಿ ಕಾಂಬಳೆ, ಪಟ್ಟಣ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಿ ರುಕ್ಕಪ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಭೀಮಶಂಕರ್ ಹಿರೇಸಾವಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಡಾ. ಸಂಗೀತಾ ಮಾಲೆ, ಶಿಕ್ಷಣ ಇಲಾಖೆಯ ಡಿಡಿಪಿಐ ಸೂರ್ಯಕಾಂತ್ ಮದಾನೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಕಾಂತ್ ನರಿಬೋಳಿ, ಜಿಲ್ಲಾ ಕಾಲರಾ ಅಧಿಕಾರಿ ಡಾ. ವಿವೇಕಾನಂದ ರೆಡ್ಡಿ, ಡಾ. ರಾಕೇಶ್ ಕಾಂಬಳೆ , ಎಫ್ ಡಬ್ಲ್ಯೂ ಓ ಅಧಿಕಾರಿ ಶಿವಶರಣಪ್ಪ ಭೂಸನೂರ್, ಡಿಟಿಸಿ ಪ್ರಾಂಶುಪಾಲರು ಡಾ. ರವಿಕಾಂತಿ ಕ್ಯಾತನಾಳ್, ಜಿಲ್ಲಾ ಮಕ್ಕಳ ಆರೋಗ್ಯ ಸಮಾಲೋಚಕರು ಮಂಜುನಾಥ ಕಂಬಾಳಿಮಠ,.ಪಟ್ಟಣ ಗ್ರಾಮ ಪಂಚಾಯತಿಯ ಸದಸ್ಯರು, ಮುಖಂಡರು / ಗ್ರಾಮಸ್ಥರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು. ಆರೋಗ್ಯ ಇಲಾಖೆಯ ಸಿಬ್ಬಂದಿ, ಪಟ್ಟಣ ಆಯುಷ್ಮಾನ್ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗದವರು , ಉಪಸ್ಥಿತರಿದ್ದರು.
