ಸಂಸ್ಕೃತಿಯ ಜೀವಂತ ಪ್ರತೀಕ ಪುಸ್ತಕ : ದೀಪಾ ಭಾಸ್ತಿ
ಸಂಸ್ಕೃತಿಯ ಜೀವಂತ ಪ್ರತೀಕ ಪುಸ್ತಕ : ದೀಪಾ ಭಾಸ್ತಿ
ಕಲಬುರಗಿ :ಪುಸ್ತಕಗಳು, ಪುಸ್ತಕ ಸಂಸ್ಕೃತಿ ಹಾಗೂ ಓದುವಿಕೆ ಇವೆಲ್ಲವೂ ನಮ್ಮ ಬದುಕಿನ ಭಾಗಗಳು. ಪುಸ್ತಕಗಳನ್ನು ಬಿಟ್ಟು ವಿದ್ಯಾವಂತ ಸಮಾಜ ಬದುಕಲು ಸಾಧ್ಯವಿಲ್ಲ. ಒಂದಲ್ಲಾ ಒಂದು ಸಂದರ್ಭದಲ್ಲಿ ನಾವು ಪುಸ್ತಕಗಳ ಜೊತೆಗೆ ಬದುಕು ಮಾಡಬೇಕಾಗುತ್ತದೆ ಎಂದು ಬುಕರ ಪ್ರಶಸ್ತಿ ವಿಜೇತ ಅನುವಾದಕಿ ದೀಪಾ ಭಾಸ್ತಿ ಹೇಳಿದರು.
ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ನಮ್ಮ ತಲೆಮಾರು ಕೂಡ ಇಂದಿನ ಜ್ಞಾನ ಪರಂಪರೆಯನ್ನು ಪುಸ್ತಕ ರೂಪದಲ್ಲಿ ಇಟ್ಟು ಹೋಗುತ್ತದೆ. ಹಿಂದಿನವರು ಬಿಟ್ಟು ಹೋಗಿರುವುದು ಹಾಗೂ ನಾವು ಮುಂದಿನವರಿಗಾಗಿ ಉಳಿಸಿ ಹೋಗುವ ಜ್ಞಾನದ ನಿರಂತರ ಧಾರೆ ಪುಸ್ತಕ ರೂಪದಲ್ಲಿ ಸಂಗ್ರಹವಾಗಿರುತ್ತದೆ. ಹಳೆಯ ತಲೆಮಾರು ತಮ್ಮ ಜೀವಮಾನದ ನೆನಪಿನ ಸಂಚಯವನ್ನು ಉಳಿಸಿ ಹೋಗುವ ವಿಧಾನ ಬರವಣಿಗೆ‘ ಅಂತಹ ಬರವಣಿಗೆಯನ್ನು ನಾಡಿನ ಜನರಿಗೆ ತಮ್ಮ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಮೂಲಕ ಪುಸ್ತಕ ಮುದ್ರಿಸಿ ತಲುಪಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಡಾ.ಎಚ್.ಟಿ.ಪೋತೆ ಮಾತನಾಡಿ ’ಪುಸ್ತಕಗಳು ಆಯಾ ಕಾಲದ ಸಂಸ್ಕೃತಿಯ ಜೀವಂತ ಪ್ರತೀಕ. ಯಾವುದೇ ಕಾಲದ ಸಂಸ್ಕತಿ, ಜನಜೀವನ ಅರ್ಥಮಾಡಿಕೊಳ್ಳಲು ನಮಗೆ ಅಧಿಕೃತವಾಗಿ ಸಿಗುವ ಆಕರಗಳೆಂದರೆ ಪುಸ್ತಕಗಳು. ಪುಸ್ತಕ ನಾಗರಿಕತೆಯ ತಳಹದಿ, ಜ್ಞಾನಾರ್ಜನೆಯ ಮಾಧ್ಯಮದ ಒಂದು ಪ್ರಮುಖ ಸಾಧನ. ಅನುಭವ, ಜ್ಞಾನದ ಅಭಿವ್ಯಕ್ತಿ ರೂಪವಾದ ಪುಸ್ತಕ ಸಂಸ್ಕತಿಯ ನಿರಂತರ ಪ್ರವಾಹಕ್ಕೆ ಸೇತುವೆಯಾಗಿವೆ‘ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಕಾಶಕರಾದ ಡಾ. ಬಸವರಾಜ ಕೊನೇಕ ಮಾತನಾಡಿ, ’ಜ್ಞಾನ-ವಿಜ್ಞಾನ, ಸಂಸ್ಕತಿ-ಸಂಪ್ರದಾಯ, ಆಗು-ಹೋಗುಗಳು ಎಲ್ಲವನ್ನೂ ದಕ್ಕಿಸಿಕೊಳ್ಳಲು ಓದಿನ ಮೂಲಕ ಮಾತ್ರ ಸಾಧ್ಯವಾಗುವುದು ಆದ್ದರಿಂದ ಪ್ರಕಾಶನದ ಕಾಯಕ ಮಾಡುತಿದ್ದೇನೆ ‘ ಎಂದರು.
ಇದೇ ಸಂದರ್ಭದಲ್ಲಿ ಸಲಹಾ ಸಮಿತಿಯ ಡಾ. ಮೀನಾಕ್ಷಿ ಬಾಳಿ,ಪ್ರೊ. ಶಿವರಾಜ ಪಾಟೀಲ, ಡಾ. ಚಿ.ಸಿ ನಿಂಗಣ್ಣ,ಡಾ. ಕಾವ್ಯಶ್ರೀ ಮಹಾಗಾoವಕರ, ಡಾ. ಶರಣಬಸಪ್ಪ ವಡ್ಡನಕೇರಿ,ಡಾ.ವಿಕ್ರಮ ವಿಸಾಜಿ,ಡಾ.ಸದಾನಂದ ಪೆರ್ಲ,ಸಂದ್ಯಾ ಹೊನಗುಂಟಿಕರ್,ಕಿರಣ ಪಾಟೀಲ,ವಿಶ್ವನಾಥ ಬಕರೆ,ಸಿದ್ದಲಿಂಗ ಕೊನೇಕ್,ಶರಣು ಕೊನೇಕ,ಪ್ರೀತಿ ಕೊನೇಕ್ ಡಾ.ಶೈಲಜಾ ಕೊನೇಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
