ಕಬ್ಬಿನ ದರ ಕುರಿತ ಸರ್ಕಾರದ ನಿರ್ದೇಶನ ಪಾಲನೆಗೆ ಶಶೀಲ್ ನಮೋಶಿ ಒತ್ತಾಯ
ಕಬ್ಬಿನ ದರ ಕುರಿತ ಸರ್ಕಾರದ ನಿರ್ದೇಶನ ಪಾಲನೆಗೆ ಶಶೀಲ್ ನಮೋಶಿ ಒತ್ತಾಯ
ಕಲಬುರಗಿ ಜಿಲ್ಲೆಯ ರೈತರು ಗೊಂದಲದಲ್ಲಿದ್ದು ಪುನಃ ಹೋರಾಟದ ಅಂಚಿನಲ್ಲಿ
ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿ ಟನ್ ಕಬ್ಬಿಗೆ ರೂ. 3,300/-ನಂತೆ ಬೆಲೆ ನಿಗದಿ ಮಾಡಿದರೂ, ಕಲಬುರಗಿ ಜಿಲ್ಲೆಯ ಹೆಚ್ಚಿನ ಸಕ್ಕರೆ ಕಾರ್ಖಾನೆಗಳು ಈ ಸರಕಾರದ ನಿರ್ದೇಶನವನ್ನು ಪಾಲಿಸಲು ನಿರಾಕರಿಸಿರುವುದು ರೈತ ಸಮುದಾಯದಲ್ಲಿ ತೀವ್ರ ಅಸಮಾಧಾನ ಮತ್ತು ಗೊಂದಲಕ್ಕೆ ಕಾರಣವಾಗಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲಕರು ಕಾರ್ಖಾನೆ ಭಾಗದಿಂದ ರೂ. 2,950/- ಹಾಗೂ ಸರ್ಕಾರದ ರೂ. 50/- ಸೇರಿ ಒಟ್ಟು ರೂ. 3,000/- ಮಾತ್ರ ನೀಡುವ ನಿರ್ಧಾರ ಕೈಗೊಂಡಿರುವುದು ಅತ್ಯಂತ ವಿಷಾಧನೀಯ ಬೆಳವಣಿಗೆಯಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಕೂಡ ಸರಕಾರದ ಮೂಲ ಆದೇಶವನ್ನು ಪಾಲಿಸಲು ಕಾರ್ಖಾನೆಗಳು ಮುಂದಾಗದಿರುವುದು ರೈತರ ವಿಶ್ವಾಸಕ್ಕೆ ದೊಡ್ಡ ಹೊಡೆತವಾಗಿದೆ.
ರಾಜ್ಯದಲ್ಲಿ ನಡೆದ ಬಿರುಸಿನ ರೈತ ಹೋರಾಟಕ್ಕೆ ಮಧ್ಯಪ್ರವೇಶಿಸಿ, ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯ ಅವರು ಸರ್ಕಾರಿ ಪ್ರೋತ್ಸಾಹಧನ ಸೇರಿಸಿ ಟನ್‌ಗೆ ರೂ. 3,300/- ನಂತೆ ದರ ನಿಗದಿ ಮಾಡಿದ ಹಿನ್ನೆಲೆಯಲ್ಲಿ, ಇದೀಗ ಜಿಲ್ಲೆಯ ಕಾರ್ಖಾನೆಗಳ ಈ ನಿರಾಕರಣೆ ರೈತರಲ್ಲಿ ಮತ್ತೊಮ್ಮೆ ಹೋರಾಟಕ್ಕೆ ಹೊರಡುವ ಚಿಂತನೆ ಹುಟ್ಟಿಸಿದೆ.
ರೈತರ ಹಿತಕ್ಕಾಗಿ ತೆಗೆದುಕೊಂಡಿರುವ ಸರ್ಕಾರದ ಮಹತ್ವದ ನಿರ್ಧಾರವನ್ನು ನಿರ್ಲಕ್ಷಿಸಿದ ಈ ಘಟನೆ ಹಿನ್ನೆಲೆಯಲ್ಲಿ,
"ಸರ್ಕಾರದ ಆದೇಶವನ್ನು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ತಕ್ಷಣ ಸ್ಪಷ್ಟ ಮತ್ತು ಕಠಿನ ಆದೇಶ ಹೊರಡಿಸಬೇಕು"ಎಂದು ರೈತರು ಸರ್ಕಾರಿ ವಲಯಕ್ಕೆ ಮನವಿ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ರೈತರು ಸರ್ಕಾರದ ತುರ್ತು ಮಧ್ಯಪ್ರವೇಶವನ್ನು ನಿರೀಕ್ಷಿಸುತ್ತಿದ್ದು, ಕಬ್ಬಿನ ದರದ ವಿಷಯದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಶೀಘ್ರವೇ ಜಾರಿಗೆ ತರದೆ ಇದ್ದಲ್ಲಿ ಪುನಃ ಹೋರಾಟ ತೀವ್ರವಾಗುವ ಸೂಚನೆ ನೀಡಿದ್ದಾರೆ.
