ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ತೀವ್ರ ಖಂಡನೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ತೀರ್ವವಾಗಿ ಖಂಡನೆ.

ಕಲಬುರಗಿ: ಸಂವಿಧಾನದ 371ನೇ(ಜೆ) ಕಲಂ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಒಳಗೊಂಡಂತೆ ಕಿತ್ತೂರು ಕರ್ನಾಟಕದ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಶಾಸಕ ರಾಜು ಕಾಗೆರವರು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವುದು ಖಂಡನಾರ್ಹ ವಿಷಯವಾಗಿದೆ. ಕನ್ನಡ ಮಾತನಾಡುವ ಜನರು ಒಂದೇ ರಾಜ್ಯದಲ್ಲಿರುವುದರಿಂದ ಅಭಿವೃದ್ಧಿಗೆ ಪೂರಕವಾಗುವುದು ಅಷ್ಟೇ ಅಲ್ಲದೆ ಕನ್ನಡದ ಅಸ್ತಿತ್ವ ಮತ್ತು ಸ್ಥಾನಮಾನ ಉಳಿಯುವದೆಂಬ ಮಹತ್ತರ ಉದ್ದೇಶವಿಟ್ಟುಕೊಂಡು ಅಖಂಡ ಕರ್ನಾಟಕದ ಏಕೀಕರಣಕ್ಕಾಗಿ ನಮ್ಮ ಹಿರಿಯರು ಹೋರಾಟ ಮಾಡಿದ ಫಲಸ್ವರೂಪ ಫಜಲ್ ಅಲಿ ವರದಿಯಂತೆ 1956 ರಲ್ಲಿ ಮೈಸೂರು ಕರ್ನಾಟಕ, ಮುಂಬೈ ಕರ್ನಾಟಕ, ಹೈದ್ರಾಬಾದ ಕರ್ನಾಟಕ, ಕೊಡಗು ಕರ್ನಾಟಕ, ಮದ್ರಾಸ ಕರ್ನಾಟಕ ಪ್ರದೇಶದ ಕನ್ನಡಿಗರು ಒಂದಾಗಿ ವಿಶಾಲ ಮೈಸೂರು ರಾಜ್ಯವಾಗಿ ಉದಯಿಸಿರುವುದು ಇತಿಹಾಸ ಸಾಕ್ಷಿಯಾಗಿದೆ.

ಅಖಂಡ ಕರ್ನಾಟಕ ರಚನೆಯಾದ ನಂತರ ಕಲ್ಯಾಣ ಕರ್ನಾಟಕದ ಬೀದರ, ಕಲಬುರಗಿ, ರಾಯಚೂರು, ಯಾದಗೀರ, ಕೊಪ್ಪಳ, ಬಳ್ಳಾರಿ ಮತ್ತು ವಿಜಯ ನಗರ ಜಿಲ್ಲೆಗಳಿಗೆ ಸಿಗುವ ಅಭಿವೃದ್ಧಿ ಯೋಜನೆಗಳನ್ನು ಮುಂಬೈ ಕರ್ನಾಟಕದ ಪ್ರಭಾವಿ ನಾಯಕರು ತಮ್ಮ ಪ್ರದೇಶಕ್ಕೆ ಸ್ಥಳಾಂತರ ಮಾಡಿಕೊಂಡು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರ ಅನ್ಯಾಯ, ಮೋಸ, ಮಲತಾಯಿ ಧೋರಣೆ ಮಾಡುತ್ತಾ, ಬರುತ್ತಿದ್ದಾರೆ. ಅಷ್ಟೇ ಅಲ್ಲದೆ, ಉತ್ತರ ಕರ್ನಾಟಕದ ಹೆಸರಿನ ಮೇಲೆ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಫಲ ಸಹ ಮುಂಬೈ ಕರ್ನಾಟಕದವರೇ ಬಹುಪಾಲು ಪಡೆದುಕೊಂಡಿದ್ದಾರೆ. ಮತ್ತೇ ಈಗ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಸೇರಿಸಿಕೊಂಡು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಯಾಗಬೇಕೆಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವುದು ಯಾವ ನ್ಯಾಯ? ಒಂದು ಕಡೆ ಚೂರಿ ಹಾಕುವ ಮುಂಬೈ ಕರ್ನಾಟಕದ ನಯಕರು, ಮತ್ತೊಂದು ಕಡೆ ನಮ್ಮನ್ನೇ ಸೇರಿಸಿಕೊಂಡು ರಾಜ್ಯ ಕಟ್ಟುವ ಮಾತನಾಡುತ್ತಾರೆ. ಇಂತಹ ಕಿತ್ತೂರು ಕರ್ನಾಟಕದ ನಾಯಕರು ಮತ್ತು ಸಂಘಟನೆಗಳಿಂದ ಕಲ್ಯಾಣ ಕರ್ನಾಟಕದ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. 

 ನಮ್ಮ ದಶಕಗಳ ಹೋರಾಟದ ಫಲಸ್ವರೂಪ ಮತ್ತು ರಾಜಕೀಯ ಇಚ್ಚಾಶಕ್ತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371ನೇ (ಜೆ) ಕಲಂ ಸಿಕ್ಕಿರುವುದರಿಂದ ಸಹಸ್ರಾರು ಜನ ವೈದ್ಯರು ಆಗುತ್ತಿದ್ದಾರೆ. ಮೊದಲಿಗಿಂತಲೂ ಈಗ ರಾಜ್ಯ ಸರಕಾರಿ ನೌಕರಿಗಳಲ್ಲಿ ನಮಗೆ ಸಿಗಬೇಕಾದ ಪಾಲು ಸಿಗುತ್ತಿದೆ. ಅಷ್ಟೇ ಅಲ್ಲದೆ, ಕೆ.ಕೆ.ಆರ್.ಡಿ.ಬಿ. ಯಿಂದ ವಿಶೇಷ ಅನುದಾನ ಸಿಗುತ್ತಿದೆ. ಇದನ್ನು ಮನಗಂಡ ಉತ್ತರ ಕರ್ನಾಟಕದ ನಾಯಕರು ಹೊಟ್ಟೆಕಿಚ್ಚು ಪಟ್ಟು ಸಹಿಸಿಕೊಳ್ಳದೆ ನಮಗೆ ಸಿಗುತ್ತಿರುವ ಸಂವಿಧಾನಬದ್ಧ ಸ್ಥಾನಮಾನವನ್ನು ಕಬಳಿಸಲು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆ ಬಗ್ಗೆ ಮಾತನಾಡುತ್ತಿರುವುದು ಖಂಡನಾರ್ಹವಾಗಿದೆ. ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕಲ್ಯಾಣದ ಜನಮಾನಸದ ವತಿಯಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಯ ಕೂಗು ಎಬ್ಬಿಸಿರುವ ನಾಯಕರಿಗೆ ಎಚ್ಚರಿಕೆ ನೀಡಿದೆ. ಮುಂಬೈ ಕರ್ನಾಟಕದವರಿಗೆ ಪ್ರತ್ಯೇಕ ರಾಜ್ಯ ಕೇಳಬೇಕಾದರೆ, ಕಿತ್ತೂರು ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳಲಿ. ಇದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಆದರೆ ಕಲ್ಯಾಣ ಕರ್ನಾಟಕ ಒಳಗೊಂಡಂತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳಿದರೆ, ನಾವು ಸಹಿಸುವದಿಲ್ಲ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷರಾದ ಬಸವರಾಜ ದೇಶಮುಖ, ಸಂಸ್ಥಾಪಕ ಅಧ್ಯಕ್ಷರಾದ ಡಾ. ಲಕ್ಷ್ಮಣ ದಸ್ತಿಯವರು ಶಾಸಕರಾದ ರಾಜು ಕಾಗೆಯವರಿಗೆ ಎಚ್ಚರಿಕೆ ನೀಡಿದ್ದಾರೆ.

 ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಂಜೂರಾಗಿದ್ದ, ಐ.ಐ.ಐ.ಟಿ. ಮತ್ತು ಐ.ಐ.ಟಿ. ಸೇರಿದಂತೆ, ಅನೇಕ ಯೋಜನೆಗಳು ಹುಬ್ಬಳ್ಳಿ-ಧಾರವಾಡಕ್ಕೆ ಸ್ಥಳಾಂತರ ಮಾಡಿಕೊಂಡಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ, ಕಲ್ಯಾಣ ಕರ್ನಾಟಕಕ್ಕೆ ಏಮ್ಸ್ ನೀಡಬೇಕೆಂದು ಕೇಂದ್ರಕ್ಕೆ ಅಧಿಕೃತ ಆಗೃಹ ಮಾಡಿದ್ದರು ಆ ಯೋಜನೆಗೂ ಸಹ ತಡೆ ಹಿಡಿದಿರುವ ಮುಂಬೈ ಕರ್ನಾಟಕದ ಪ್ರಭಾವಿ ನಾಯಕರು ಕಳೆದ ಮೂರು ವರ್ಷಕ್ಕೂ ಮೇಲ್ಪಟ್ಟು ಅವಧಿಯಿಂದ ಏಮ್ಸ್ ಕಲ್ಯಾಣ ಕರ್ನಾಟಕದ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿಗೆ ನೀಡಬೇಕೆಂದು, ನಿರಂತರ ಹೋರಾಟ ನಡೆದರೂ ಸಹ ಕೇಂದ್ರದಲ್ಲಿರುವ ಮುಂಬೈ ಕರ್ನಾಟಕದ ಪ್ರಭಾವಿ ನಾಯಕರು ಪ್ರಧಾನ ಮಂತ್ರಿಗಳಿಗೆ ದಾರಿ ತಪ್ಪಿಸಿ ಕಲ್ಯಾಣ ಕರ್ನಾಟಕ್ಕೆ ಏಮ್ಸ್ ಯೋಜನೆಯಿಂದ ವಂಚಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನೀರಾವರಿ, ಕೈಗಾರಿಕೆ, ರಸ್ತೆ, ಸಾರಿಗೆ, ರೈಲ್ವೆ, ಮುಂತಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮಾರಕ ಉಂಟು ಮಾಡಿರುವ ಮುಂಬೈ ಕರ್ನಾಟಕದ ನಾಯಕರಿಂದ ಎಚ್ಚರಿಕೆಯಿಂದ ಇರಬೇಕಾಗಿದೆ. ಉತ್ತರ ಕರ್ನಾಟಕದ ಹೆಸರಿನ ಮೇಲೆ ಇನ್ನು ಮುಂದೆ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಬಿಟ್ಟು ನಮ್ಮ ತಂಟೆಗೆ ಬಾರದೆ ತಮ್ಮ ಪಾಡಿಗೆ ತಾವು ಕಿತ್ತೂರು ಕರ್ನಾಟಕಕ್ಕೆ ಸೀಮಿತವಾಗಿ ಮಾತನಾಡಬೇಕು ಎಂದು ಸಮಿತಿ ಎಚ್ಚರಿಕೆ ನೀಡಿದೆ. ಸಮಿತಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಯ ಕೂಗಿನ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಆದಷ್ಟು ಶೀಘ್ರ ಸಭೆ ನಡೆಸಿ ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ ಮತ್ತು ರಾಜ್ಯದ ಮುಖ್ಯ ಮಂತ್ರಿಗಳಿಗೆ ನಮ್ಮ ಸ್ಪಷ್ಟ ನಿಲುವಿನ ಬಗ್ಗೆ ಪತ್ರ ಬರೆಯಲಾಗುವುದು. ಅದರಂತೆ ಮುಂದಿನ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.