“ಬಯಲೆಂಬೊ ಬಯಲು” ಕಾದಂಬರಿ ದಮನಿತರಿಗೆ ಬದಲಾವಣೆಯ ದಾರಿ — ಪ್ರೊ. ಎಚ್.ಟಿ. ಪೋತೆ
“ಬಯಲೆಂಬೊ ಬಯಲು” ಕಾದಂಬರಿ ಸಮಾಜಮುಖಿ ನಿಲುವು — ಪ್ರೊ. ಎಚ್.ಟಿ. ಪೋತೆ
ಕಲಬುರಗಿ:“ಬಯಲೆಂಬೊ ಬಯಲು ಕಾದಂಬರಿಯು ಕುಟುಂಬದ ಅಂತರಂಗದಿಂದ ಹುಟ್ಟಿ ಸಮಾಜಮುಖಿಯಾಗಿ ಬೆಳೆಯುವ ಕೃತಿಯಾಗಿದೆ,” ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಹೇಳಿದರು.
ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದ ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ “ಬಯಲೆಂಬೊ ಬಯಲು” ಕೃತಿಯ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಪ್ರೊ. ಪೋತೆ ಹೇಳಿದರು — “ಈ ಕಾದಂಬರಿ ದಮನಿತರು, ಶೋಷಿತರು ಹಾಗೂ ಎಲ್ಲ ವರ್ಗದ ಮಹಿಳೆಯರಿಗೆ ಬದಲಾವಣೆಯ ಮಾರ್ಗವನ್ನು ತೋರಿಸುತ್ತದೆ. ದಮನಿತರು ಅಕ್ಷರವಂತರಾದಾಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ. ಅಕ್ಷರ ಅಥವಾ ಸಮಾನತೆ ದೊರಕುವಲ್ಲಿ ಸಂವಿಧಾನ ಪ್ರಮುಖ ಪಾತ್ರವಹಿಸುತ್ತದೆ. ಭಾರತದಲ್ಲಿ ಎಲ್ಲರೂ ಭಾತೃತ್ವತೆಯಿಂದ ಬದುಕಬೇಕಾದರೆ ಸಂವಿಧಾನವೇ ಆಧಾರವಾಗಬೇಕು,” ಎಂದರು.
ಹಿರಿಯ ಸಾಹಿತಿಗಳಾದ ಡಾ. ಶ್ರೀಶೈಲ ನಾಗರಾಳ ಅವರು ಮಾತನಾಡಿ, “ಬಯಲೆಂಬೊ ಬಯಲು ಮೇಲ್ಜಾತಿ ಮತ್ತು ಕೆಳಜಾತಿ ನಡುವಿನ ಸಂಘರ್ಷ ಹಾಗೂ ಸಮಾಜದ ಅವ್ಯವಸ್ಥೆಯನ್ನು ಗಂಭೀರವಾಗಿ ವಿಮರ್ಶಿಸುವ ಕಾದಂಬರಿಯಾಗಿದೆ. ಇದು ಕನ್ನಡ ಸಾಹಿತ್ಯದ ಮೊದಲ ಬಯೋಪಿಕ್ ಕಾದಂಬರಿಯೆಂದು ಹೇಳಬಹುದು,” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೆ ಪ್ರಾಂಶುಪಾಲೆ ಡಾ. ಸವಿತಾ ತಿವಾರಿ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ಶಾರದಾ ಜಾಧವ (ಕನ್ನಡ ವಿಭಾಗದ ಮುಖ್ಯಸ್ಥೆ), ಡಾ. ರಾಜಶೇಖರ ಮಡಿವಾಳ (ಐಕ್ಯೂಎಸಿ ಸಂಯೋಜಕ), ಡಾ. ಶ್ರೀಮಂತ ಹೋಳ್ಳರ್ (ವಿದ್ಯಾರ್ಥಿ ಕಲ್ಯಾಣಾಧಿಕಾರಿ), ಡಾ. ಸುರೇಂದ್ರ ಕುಮಾರ ಕೆರಮಗಿ,ಡಾ. ನಾಗಪ್ಪ ಗೋಗಿ ಸೇರಿದಂತೆ ಹಲವು ಪ್ರಾಧ್ಯಾಪಕರು ಹಾಜರಿದ್ದರು.
ಉಪನ್ಯಾಸಕಿ ಡಾ. ಶೈಲಜಾ ಎನ್. ಬಾಗೇವಾಡಿ ಗಣ್ಯರನ್ನು ಪರಿಚಯಿಸಿದರು. ಡಾ. ಶಾಮಲಾ ಸ್ವಾಮಿ ಸ್ವಾಗತಿಸಿದರು, ಶ್ರೀ ನಾಮದೇವ ರಾಠೋಡ ವಂದಿಸಿದರು ಹಾಗೂ ಶ್ರೀದೇವಿ ರಾಠೋಡ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
