ಸಿಯುಕೆ 9ನೇ ಘಟಿಕೋತ್ಸವ ನವೆಂಬರ್ 8ರಂದು ಮುಖ್ಯ ಅತಿಥಿಯಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ
ಸಿಯುಕೆ 9ನೇ ಘಟಿಕೋತ್ಸವ ನವೆಂಬರ್ 8ರಂದು,ಮುಖ್ಯ ಅತಿಥಿಯಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) 9ನೇ ಘಟಿಕೋತ್ಸವ ನವೆಂಬರ್ 8ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಭಾರತದ ಕಾನೂನು ಆಯೋಗದ ಅಧ್ಯಕ್ಷರಾದ ದಿನೇಶ್ ಮಹೇಶ್ವರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡುವರು ಎಂದು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 27 ಪದವಿ ಕೋರ್ಸುಗಳಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದಾಗಿ ಹೇಳಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿದ್ಯಾರ್ಥಿ ಶಿವಾ ಶಾಹಿತಿ ಸೋಮಿಶೆಟ್ಟಿ ಅವರಿಗೆ ಪ್ರೊ. ಎ.ಎಂ. ಪಠಾಣ ಚಿನ್ನದ ಪದಕ ಲಭಿಸಲಿದೆಯೆಂದು ಹೇಳಿದರು.
ಒಟ್ಟು 756 ವಿದ್ಯಾರ್ಥಿಗಳು ಪದವಿಗೆ ಅರ್ಹರಾಗಿದ್ದು, 628 ಮಂದಿ ಪದವಿ ಸ್ವೀಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 487 ಮಂದಿ ಭೌತಿಕವಾಗಿ ಹಾಗೂ 141 ಮಂದಿ ಅನುಪಸ್ಥಿತಿಯಲ್ಲಿ ಪ್ರಮಾಣಪತ್ರ ಪಡೆಯಲಿದ್ದಾರೆ.
ಕುಲಪತಿ ಅವರು ಮುಂದುವರೆದು, “ವಿಶ್ವವಿದ್ಯಾಲಯದಲ್ಲಿ 176 ಖಾಯಂ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಇನ್ನು 29 ಶಿಕ್ಷಕರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. 7 ಹೊಸ ವಿಭಾಗಗಳಿಗೆ (ಗ್ರಂಥಾಲಯ ವಿಜ್ಞಾನ, ಜೀವಶಾಸ್ತ್ರ, ಪ್ರಾಣಿಶಾಸ್ತ್ರ, ಸಂಖ್ಯಾಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಜನೇಟಿಕ್ಸ್ ಮತ್ತು ಜಿನೋಮ್, ಹಾಗೂ ಬಿಎಎಲ್‌ಎಲ್‌ಬಿ) ಅನುಮೋದನೆ ದೊರೆತಿದೆ. ಇವು 2026–27 ನೇ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿವೆ” ಎಂದರು.
ಅವರು ಸಂಶೋಧನಾ ಪ್ರಗತಿಯನ್ನು ಉಲ್ಲೇಖಿಸಿ, ವಿಶ್ವವಿದ್ಯಾಲಯವು ಎಎನ್‌ಆರ್‌ಎಫ್ ಪೇರ್ಡ್ ಪ್ರಾಜೆಕ್ಟ್ ಗೆ ₹12.1 ಕೋಟಿ, ಸುಸ್ಥಿರ ಕ್ಯಾಂಪಸ್ ಅಭಿವೃದ್ಧಿಗೆ ₹1.2 ಕೋಟಿ, ವಿಶ್ವೇಶ್ವರಯ್ಯ ಸಂಶೋಧನಾ ಯೋಜನೆಗೆ ₹3 ಕೋಟಿ, ಸಿರಿಧಾನ್ಯ ಸಂಶೋಧನೆಗೆ ₹30 ಲಕ್ಷ ಮತ್ತು ಐಸಿಎಸ್ಎಸ್ಆರ್ ಯೋಜನೆಗಳಿಗೆ ₹1.05 ಕೋಟಿ ಅನುದಾನ ಪಡೆದಿದೆ ಎಂದರು.
ಮೂಲಸೌಕರ್ಯ ವಿಸ್ತರಣೆ ಕುರಿತು ಅವರು “ಶೈಕ್ಷಣಿಕ ಸಮುಚ್ಚಯ, ಶಿಕ್ಷಕರ ವಸತಿ ಹಾಗೂ 1000 ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣಕ್ಕೆ ₹201 ಕೋಟಿ ಬಿಡುಗಡೆ ಆಗಿದ್ದು, ಮುಂದಿನ 15 ತಿಂಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ” ಎಂದರು.
ವಿಶ್ವವಿದ್ಯಾಲಯದ ಗುಣಮಟ್ಟ ವೃದ್ಧಿಗಾಗಿ ಭಾರತೀಯ ಭೂಗೋಳ ಸಂಸ್ಥೆ, ಅಪ್ರೆಂಟಿಶಿಪ್ ಬೋರ್ಡ್, ಕೀಸೈಟ್ ಟೆಕ್ನಾಲಜಿ,ಲಾಟ್ವಿಯಾ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಒಡಂಬಡಿಕೆ ಮಾಡಲಾಗಿದೆ ಎಂದರು.
“ಸಂಶೋಧನೆಗೆ ಉತ್ತೇಜನ ನೀಡಲು ಬೆಂಗಳೂರಿನಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಈಗ ಸಿಯುಕೆ ಕ್ಯಾಂಪಸ್ನಲ್ಲಿಯೇ ಪ್ರಾರಂಭಿಸಲಾಗುತ್ತಿದೆ. ಜೊತೆಗೆ ಪಿಸಿಬಿ ಲ್ಯಾಬ್ ಮತ್ತು ಇನ್‌ಸ್ಟ್ರುಮೆಂಟೇಶನ್ ಲ್ಯಾಬ್ ಪ್ರಾರಂಭಿಸಲಾಗಿದೆ” ಎಂದರು.
ಈ ಎಲ್ಲಾ ಕ್ರಮಗಳ ಪರಿಣಾಮವಾಗಿ ಸಿಯುಕೆ ರಾಷ್ಟ್ರ ಮಟ್ಟದ ಎನ್‌ಐಆರ್‌ಎಫ್ ರ್ಯಾಂಕಿಂಗ್‌ನಲ್ಲಿ 150–200 ರ್ಯಾಂಕ್ ನಡುವೆ ಸ್ಥಾನ ಪಡೆದಿದೆ ಎಂದು ಹೇಳಿದರು.
ಆದರೆ ಅವರು, “ಕರ್ನಾಟಕದ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಕಡಿಮೆ ಇದೆ. ಕಳೆದ ವರ್ಷ ರಾಜ್ಯದಾದ್ಯಂತ 10 ಸುದ್ದಿಗೋಷ್ಠಿ ನಡೆಸಿದರೂ ಸಂಖ್ಯೆಯಲ್ಲಿ ನಿರೀಕ್ಷಿತ ಪ್ರಮಾಣದ ಏರಿಕೆ ಆಗಿಲ್ಲ. ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಸೇರಿಕೊಳ್ಳಲು ಎಲ್ಲರ ಸಹಕಾರ ಅಗತ್ಯವಿದೆ” ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಭಾರ ಕುಲಸಚಿವ ಡಾ. ಚನ್ನವೀರ ಆರ್.ಎಂ., ಪರೀಕ್ಷಾ ನಿಯಂತ್ರಕ ಕೋಟಾ ಸಾಯಿಕೃಷ್ಣ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಗಣಪತಿ ಬಿ. ಸಿನ್ನೂರ, ಘಟಿಕೋತ್ಸವ ಮಾಧ್ಯಮ ಉಸ್ತುವಾರಿ ಡಾ. ಜೋಹೆರ್ ಹಾಗೂ ಸಹಾಯಕ ಪಿಆರ್‌ಒ ಡಾ. ಪ್ರಕಾಶ ಬಾಳಿಕಾಯಿ ಉಪಸ್ಥಿತರಿದ್ದರು.
