"ಸಂತೃಪ್ತ" ಆತ್ಮಕಥನ ಅವಲೋಕನ: ಜೀವನ ಪಯಣದ ಸತ್ಯಸಂಧ ಚಿತ್ರಣ

"ಸಂತೃಪ್ತ" ಆತ್ಮಕಥನ ಅವಲೋಕನ: ಜೀವನ ಪಯಣದ ಸತ್ಯಸಂಧ ಚಿತ್ರಣ

"ಸಂತೃಪ್ತ" ಆತ್ಮಕಥನ ಅವಲೋಕನ: ಜೀವನ ಪಯಣದ ಸತ್ಯಸಂಧ ಚಿತ್ರಣ

ಕಲಬುರಗಿ, ಫೆ. 21:ಕಲಬುರ್ಗಿಯ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ವತಿಯಿಂದ ದಿನಾಂಕ 21.02.2026 ರಂದು ಸಾಯಂಕಾಲ 6 ಗಂಟೆಗೆ ಸಂಘದ ಕಾರ್ಯಾಲಯದಲ್ಲಿ ಶ್ರೀ ಅಪ್ಪಾರಾವ ಅಕ್ಕೋಣೆಯವರು ರಚಿಸಿರುವ "ಸಂತೃಪ್ತ" ಆತ್ಮಕಥನ ಕೃತಿಯ ಅವಲೋಕನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಸಂಗನಗೌಡ ಹಿರೇಗೌಡ ಅವರು ಕೃತಿಯ ಕುರಿತು ಸಮಗ್ರ ವಿಮರ್ಶೆ ನೀಡಿದರು. “ಸಂತೃಪ್ತ ಪುಸ್ತಕ ಓದಿದಾಗ ಶ್ರೀ ಅಕ್ಕೋಣೆಯವರ ಜೀವನ ಪಯಣವು ಜ್ಞಾನದ ಹಸಿವು ನೀಗಿಸಲು ಕಲಬುರ್ಗಿಗೆ ಬಂದ ಯುವಕನ ಹೋರಾಟದ ಕಥೆಯಂತೆ ಕಾಣುತ್ತದೆ. ಗುರಿ ಮತ್ತು ಗುರು ಇಲ್ಲದ ಪಯಣವಾಗಿದ್ದರೂ ಅವರು ಗೆಲುವನ್ನು ಬಯಸಿ ಹೋಗಿದವರಲ್ಲ; ಸ್ನೇಹಿತರ ಸಹಕಾರದಿಂದ ಜೀವನದಲ್ಲಿ ಮೇಲೆ ಬಂದವರು. ಅವರ ಯಶಸ್ಸಿನ ಹಿಂದೆ ಅವರ ಪತ್ನಿಯ ತ್ಯಾಗವೂ ಪ್ರಮುಖವಾಗಿದೆ” ಎಂದು ಅವರು ಹೇಳಿದರು.

ಆತ್ಮಕಥನದಲ್ಲಿ ಗಂಭೀರ ವ್ಯಕ್ತಿತ್ವ ಅಡಗಿದ್ದು, ಶ್ರೀ ಅಕ್ಕೋಣೆಯವರ ಶಿಸ್ತು, ಬದ್ಧತೆ ಮತ್ತು ಸಕಾರಾತ್ಮಕತೆ ಎಲ್ಲರ ಮನ ಗೆಲ್ಲುವ ಗುಣಗಳೆಂದು ಅವರು ಅಭಿಪ್ರಾಯಪಟ್ಟರು. ಬದುಕಿನ ಪಯಣದಲ್ಲಿ ಎದುರಾದ ರಕ್ತಸಂಬಂಧಿಗಳ ಸಾವು-ನೋವುಗಳನ್ನು ಧೈರ್ಯದಿಂದ ಅರಗಿಸಿಕೊಂಡು ಮುನ್ನಡೆದಿರುವುದನ್ನು ಕೃತಿ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಯಾವುದೇ ತಂತ್ರವಿಲ್ಲದೆ ಜೀವನದ ಘಟನೆಗಳನ್ನು ಯಥಾವತ್ತಾಗಿ ಹಿಡಿದಿಟ್ಟಿರುವುದು ಕೃತಿಯ ವೈಶಿಷ್ಟ್ಯವೆಂದರು.

ಹಿರಿಯ ಸಾಹಿತಿಗಳಾದ ಡಾ. ಶ್ರೀಶೈಲ ನಾಗರಾಳ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿ, ಆತ್ಮಕಥನಗಳು ವ್ಯಕ್ತಿಯ ಒಳಜಗತ್ತನ್ನು ಅರಿಯುವ ದರ್ಪಣಗಳಾಗಿವೆ ಎಂದು ಹೇಳಿದರು.

ಲೇಖಕರಾದ ಶ್ರೀ ಅಪ್ಪಾರಾವ ಅಕ್ಕೋಣೆಯವರು ಮಾತನಾಡಿ, “ನನ್ನ ಜೀವನದಲ್ಲಿ ನಾನು ಸಮಾಜಸೇವೆ ಮಾಡಿದ್ದರೆ ಅದಕ್ಕೆ ಕಾರಣ ನನ್ನ ತಂದೆ-ತಾಯಿ ಹಾಗೂ ಸಹೋದರ ಅಮೃತ. ನನ್ನ ಗೆಳೆಯರು ಮತ್ತು ಶಿಕ್ಷಕರ ಸಹಕಾರ ನನ್ನನ್ನು ಈ ಹಂತಕ್ಕೆ ತಂದಿದೆ. ನಾನು ಎಂದಿಗೂ ಸ್ವಾಭಿಮಾನ ಬಿಟ್ಟು ನಡೆದವನಲ್ಲ” ಎಂದು ಭಾವಪೂರ್ಣವಾಗಿ ಹೇಳಿದರು.

ಕಾರ್ಯಕ್ರಮವನ್ನು ಡಾ. ವಿಜಯಕುಮಾರ ಪರುತೆಯವರು ನಿರೂಪಿಸಿದರು. ಪ್ರೊ. ಕೆ. ವಿಶ್ವನಾಥ, ಸೂರ್ಯಕಾಂತ ಸೊನ್ನದ, ಪ್ರೊ. ಎಸ್.ಎಲ್. ಪಾಟೀಲ್, ಡಾ. ಶರಣಬಸಪ್ಪ ವಡ್ಡನಕೇರಿ, ಸಿದ್ಧರಾಮ ಸರಸಂಬಿ, ಡಾ. ಎಸ್.ಎಂ. ಮಠ, ಗಂಗಾಧರ ಪಾಟೀಲ್, ಡಾ. ಗವಿಸಿದ್ಧಪ್ಪ ಪಾಟೀಲ್, ರೇವಣಸಿದ್ಧಪ್ಪ ದುಕಾನ, ಸುಭಾಶ್ಚಂದ್ರ ಕಶೆಟ್ಟಿ, ಶಿವಾನಂದ ಕಶೆಟ್ಟಿ, ಎಸ್.ಎಸ್. ಪಾಟೀಲ್, ಡಾ. ರಾಜಕುಮಾರ ಮಾಳಗೆ ಹಾಗೂ ವೀರಭದ್ರಪ್ಪ ಗುರಮಿಠಕಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.