ವಿಡಂಬನೆಯ ಕವಿ- ಸಾಹಿತಿ: ಪ್ರೊ.ರವೀಂದ್ರ ಕರ್ಜಗಿ

ವಿಡಂಬನೆಯ ಕವಿ- ಸಾಹಿತಿ: ಪ್ರೊ.ರವೀಂದ್ರ ಕರ್ಜಗಿ

ವಿಡಂಬನೆಯ ಕವಿ- ಸಾಹಿತಿ: ಪ್ರೊ.ರವೀಂದ್ರ ಕರ್ಜಗಿ

       ಕನ್ನಡ ನಾಡಿನ ಸಾಹಿತಿಗಳಲ್ಲಿ ಪ್ರೊ. ರವೀಂದ್ರ ಕರ್ಜಗಿ ಒಬ್ಬರು. ಅವರು ಯಾವುದೇ ರಾಜಕೀಯ ಲಾಬಿಯನ್ನು ಮಾಡದೆ, ಸಾಹಿತ್ಯ- ಸಾಂಸ್ಕೃತಿಕ ರಾಜಕಾರಣದಿಂದ ದೂರವಿದ್ದು ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಸದಾ ಬರವಣಿಗೆ ,ಓದು ಅಧ್ಯಯನ ಪರಿಶ್ರಮ ಜೀವಿಗಳಾಗಿದ್ದು ,ತಮ್ಮ ಕಾಯಕ ವೃತ್ತಿಯನ್ನು ಬಹು ಅಮೂಲ್ಯದಿಂದ ಕಾಪಾಡಿಕೊಂಡು ಬಂದವರು. ಅದರಂತೆ ತಮ್ಮ ಜೀವನವವನ್ನು ಸಹಿತ ನೈತಿಕ -ಜೀವನ ಮೌಲ್ಯಗಳಿಂದ ಕೂಡಿದ ಅವರ ವ್ಯಕ್ತಿತ್ವ ಎಂದು ಕೂಡ ಹರಿದು ಹಂಚಿ ಹೋಗಲ್ಲ. ಅವರೊಬ್ಬ ನಿಸ್ವಾರ್ಥ ಜೀವಿ. ಇವತ್ತಿನ ಸಾಹಿತಿಗಳಲ್ಲಿ, ಲೇಖಕರಲ್ಲಿ ,ಕವಿಗಳಲ್ಲಿ ಒಂದು ಎರಡು ಪುಸ್ತಕಗಳನ್ನು ಪ್ರಕಟಿಸಿ ಏನೆಲ್ಲಾ ಆಗಬೇಕೆಂಬ ತವಕ ತಲ್ಲಣಗಳಲ್ಲಿ ತೇಲಿ ಹೋಗಿಬಿಡುತ್ತಾರೆ. ಆದರೆ ೮೦ ವರ್ಷ ವಸಂತಗಳನ್ನು ಕಂಡ ರವೀಂದ್ರರವರು ಯಾವುದೇ ಆಸೆ-ಅಮಿಷಗಳಿಗೆ ಒಳಗಾಗದೆ ನೇರ,ದಿಟ್ಟ, ಸ್ವಾಭಿಮಾನದಿಂದ ಬದುಕಿ ಬದುಕುತ್ತಿರುವ ಇತರರಿಗೆ ಆದರ್ಶವಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ವಕ್ತಾರರಾಗಿ ನಮಗೆ ಕಂಡುಬರುತ್ತಾರೆ. ಅವರ ಕನ್ನಡ ಪ್ರೇಮ ಇಂದಿನದಲ್ಲ;ಅವರ ರಕ್ತದ ಕಣಕಣಗಳಲ್ಲಿ ಕನ್ನಡ ಉಸಿರಾಡುತ್ತಿದೆ;ಕನ್ನಡವೇ ನಿತ್ಯ; ಕನ್ನಡವೇ ಸತ್ಯ ಎಂಬಂತೆ ಬಾಳು ಬದುಕುತ್ತಿರುವ ಅಪರೂಪದ ಬಹುಮುಖ ಪ್ರತಿಭಾವಂತ ಲೇಖಕರು.ತಮ್ಮ ಮನೆಗೆ "ಕನ್ನಡ" ಎಂದು ಹೆಸರಿಸಿದ್ದಾರೆ. 

     ಇವರ ಪೂರ್ವಜರು ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದವರು. ಅಲ್ಲಿಯ ರಂಗಾಚಾರ ಕರ್ಜಗಿ ಮತ್ತು ಸರಸ್ವತಿಬಾಯಿ ಕರ್ಜಗಿ ಬ್ರಾಹ್ಮಣ ಕುಟುಂ ಬ ಸಂಪ್ರದಾಯತೆ, ಸಂಸ್ಕೃತಿಗೆ ಬದ್ಧವಾಗಿ ಜೀವನವನ್ನು ಸಾಗಿಸಿದರು. ಅದರ ಜೊತೆಗೆ ಪೂಜಾರಿಕೆಯ ಕಾಯಕವ ನ್ನು ನಂಬಿ ತಮ್ಮ ಬಾಳ ನೌಕೆಯನ್ನು ಸಾಗಿಸುತ್ತಿದ್ದರು. ಇವರಿಗೆ ಹೊಲ, ಮನೆ ,ಉದ್ಯೋಗ ರೈತ ಜೀವನವು ಸಹಿತ ಕಂಡು ಬಂತು. ಹೀಗಾಗಿ ಪ್ರಕೃತಿಯ ವಿಕೋಪಕ್ಕೆ ಒಳಗಾದ ಕರ್ಜಗಿ ಗ್ರಾಮ. ಇವರು ಅಲ್ಲಿಂದ ವಲಸೆ ಬಂದು ವರದಾ ನದಿಯ ತಟದಿಂದ ಕೃಷ್ಣ ತೀರದ ಗಲಗಲಿ ಎಂಬ ಚಿಕ್ಕ ಗ್ರಾಮಕ್ಕೆ ಬಂದು ನೆಲೆಸಿದರು. ಹೊಲ ಮನೆ ಆಸ್ತಿಯನ್ನು ಕಳೆದುಕೊಂಡ ದಂಪತಿಗಳು ತಮ್ಮ ವೃತ್ತಿಯಾಗಿ ಇರಿಸಿಕೊಂಡ ಪೂಜಾರಿತನವನ್ನು ಬಿಟ್ಟರೆ ಬೇರೆ ಯಾವ ಕಾಯಕವು ಇವರಿಗೆ ಇರಲಿಲ್ಲ. ಈ ಮನೆತನದ ಕುಲದೇವರಾದ ವಿಠೋಬಾ ದೇವರ ಮೇಲೆ ನಂಬಿಕೆ ಇರಿಸಿ ತಮ್ಮ ಜೀವನವನ್ನು ಸಾಗಿಸಿದ ಇವರು ಬಡತನ ಬೇಗೆಯಲ್ಲಿ ಬೆಂದು ಹೋದವರು. ಹೊಟ್ಟೆಗೆ ಅನ್ನವಿಲ್ಲದೆ ದುಡಿಮೆ ಇಲ್ಲದೆ ಈ ದಂಪತಿಗಳ ಜೀವನ ಅತ್ಯಂತ ಕರಕಷ್ಟವಾಗಿತ್ತು. ಅಂತಹ ಸಂದರ್ಭದಲ್ಲಿ ಕರ್ಜಗಿಯುಂದ ಗಲಗಲಿಗೆ; ಗಲಗಲಿಯಿಂದ ಬಬಲೇಶ್ವರಕ್ಕೆ ಬಂದು ನೆಲೆಸಿದರು. ಈ ಬಬಲೇಶ್ವರಕ್ಕೆ ಬಂದಾಗಲೇ ಗಂಡು ಮಗು ವಿಠಲಾಚಾರ್ಯ ಜನಿಸಿದರು ತಂದೆಯ ವೃತ್ತಿ ಜೀವನವನ್ನು ಇವರು ಆರಂಭಿಸಿದರು .ಇವರ ಪತ್ನಿ ಸುವರ್ಣಾಬಾಯಿ ಕೂಡ ಜೀವನದ ಅನೇಕ ಕಷ್ಟಗಳನ್ನು ಅನುಭವಿಸಿ ನಂತರದಲ್ಲಿ ಇವರಿಗೆ ರವೀಂದ್ರ ಕರ್ಜಗಿ ಎಂಬ ಮಗ ಜನಿಸಿದ.ಆಗ ತಮ್ಮ ತಂದೆಯ ಮೂಲ ಪೂಜಾರಿಕೆ ವೃತ್ತಿ ಬಿಟ್ಟು ಕನ್ನಡ ಮಾಸ್ಟರ್ ಆಗಿ ಕನ್ನಡ ಮಕ್ಕಳಿಗಾಗಿ ಶಿಕ್ಷಕ ವೃತ್ತಿ ಜೀವನವನ್ನು ಸಾಧಿಸಿದವರು. 

    ವಿನಯ, ಭಕ್ತಿ ,ಪ್ರೀತಿ, ತ್ಯಾಗಗಳಿಂದ ಕೂಡಿದ ಸುವರ್ಣ ಬಾಯಿ ಮತ್ತು ಪ್ರಹ್ಲಾದ ಆಚಾರ್ಯರ ಮಗುವಾಗಿ ಜನಿಸಿ ದವರು ರವೀಂದ್ರ ಕರ್ಜಗಿ ಅವರು.ಇವರ ನಂತರ ಮೂರು ವರ್ಷಕ್ಕೊಂದರಂತೆ ಪ್ರಕಾಶ, ಶಶಿಕಾಂತ, ವಿಠಲ ಎಂಬ ಮೂರು ತಮ್ಮಂದಿರು. ಉಷಾ, ಪ್ರತಿಭಾ, ವಿಜಯಲಕ್ಷ್ಮಿ ಎಂಬ ತಂಗಿಯರು ಏಳು ಜನ ಮುದ್ದು ಮಕ್ಕಳೊಂದಿಗೆ ಲಾಲನೆ ಪಾಲನೆ ಮಾಡುತ್ತಾ ಜೀವನವನ್ನು ಕಂಡವರು. ಇವರ ತಂದೆ ತಾಯಿಗಳು. ತಂದೆಯವರ ಶಿಸ್ತಿನ ಸಿಪಾಯಿಗಳು ಶುಚಿತ್ವಕ್ಕೆ ಹೆಸರಾದವರು‌. ಶಿಕ್ಷಕರಾಗಿರುವು ದರಿಂದ ಮಕ್ಕಳಲ್ಲಿ ಸಂಪ್ರದಾಯಕ್ಕೆ ಅನುಗುಣವಾಗಿ ವೇದ ಆಗಮ ,ಹೋಮ,ಹವನ, ಶ್ಲೋಕ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹೇಳಿ ಅದೇ ದಾರಿಯಲ್ಲಿ ಇವರೆಲ್ಲರೂ ಕೂಡಿ ನಡೆದು ತಮ್ಮ ಜೀವನವನ್ನು ಸಾಕಾರಗೊಳಿಸಿಕೊಂಡವರು.

      ರವೀಂದ್ರ ಕರ್ಜಗಿ ಅವರು. ೧೮-೦೬-೧೯೪೯೬ ರಂದು ಇಂದಿನ ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಬಬಲೇಶ್ವರ ಗ್ರಾಮದಲ್ಲಿ ಜನಿಸಿದರು. ಆ ಸಂದರ್ಭದಲ್ಲಿ ೨೫ ಜನರ ವಿಭಕ್ತ ಕುಟುಂಬದಲ್ಲಿ ಎಲ್ಲರ ಪ್ರೀತಿಗೆ ವಾತ್ಸಲ್ಯಕ್ಕೆ ಪಾತ್ರರಾಗಿರುವ ರವೀಂದ್ರ ಕರ್ಜಗಿ ಅವರು ಅದೇ ಸ್ವಾತಂತ್ರ್ಯದ ರವಿ ಉದಯವಾಗುತ್ತಿತ್ತು ಆ ಒಂದು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಹಿನ್ನೆಲೆಯಲ್ಲಿ ಜನಿಸಿದವರು. ಇವರು ಆರನೇ ವಯಸ್ಸಿನಲ್ಲಿ ಬಬಲೇಶ್ವರದ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶವನ್ನು ಪಡೆದರು ಇವರು ಓದುವ ಅಭಿರುಚಿ ಮೌಲ್ಯಯುತ ವ್ಯಕ್ತಿತ್ವದಿಂದ ಅಲ್ಲಿರುವ ಗುರುಗಳಿಗೆ ಪಾತ್ರರಾದರು. ಬಬಲೇಶ್ವರ ಗ್ರಾಮದಲ್ಲಿ ಎರಡನೆಯ ತರಗತಿ ಪಾಸಾಗಿ ವಿಜಯಪುರ ಸುತ್ತಮುತ್ತಲಿನ ಹಳ್ಳಿಯಲ್ಲಿ ಇವರ ತಂದೆ ಮಾಸ್ತರಾಗಿರುವುದರಿಂದ ವರ್ಗಾವಣೆ ಆದಂತೆ ವಿಜಾಪುರದ ಮುಳವಾಡ, ಜುಮುನಾಳ, ಅರ್ಜುಣಗಿ ಮುಂತಾದ ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕಲಿತರು. ಇವರಿಗೆ ಗಣಿತ ವಿಷಯ ಇಷ್ಟವಿರಲಿಲ್ಲ. ತಂದೆ ಶಿಕ್ಷಕರ ಮಗ ಶತದಡ್ಡ ಹೆಸರು ಬರುತ್ತದೆ ಎಂದು ಬೋಧನೆಯಲ್ಲಿ ಆಸಕ್ತಿ ಬಯಸಲಿಲ್ಲ. ಶಾಲೆಯ ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನೋಡಿ ಗೆಳೆಯ ಗೆಳತಿಯರು ಸ್ನೇಹಿತರ ಜೊತೆಗೂಡಿ ಈಜು ಕಲಿಯುವುದು ಮೊದಲಾದ ಕಾರ್ಯವನ್ನು ಮಾಡುತ್ತಿದ್ದರು. ಮಧ್ಯರಾತ್ರಿಯಲ್ಲಿ ಸಂಗ್ಯಾ- ಬಾಳ್ಯಾ, ಬಯಲಾಟ,ಲವಕುಶ ಆಟ,ಪಾರಿಜಾತ ನೋಡಿ ಆ ಪಾತ್ರಗಳನ್ನು ತದೇಕ ಚಿತ್ತದಿಂದ ಆಲಿಸಿ, ಅದರಂತೆ ಇವರು ನಕಲು ಮಾಡುವುದರಲ್ಲಿ ಎತ್ತಿದ ಕೈ.! ಅದರಂತೆ ಮಾತುಗಾರಿಕೆಯಲ್ಲಿ ಮರಳು ಮಾಡುವ, ವ್ಯಂಗ್ಯ, ಕೀಟಲೆ, ವಿಡಂಬನೆಯ ಮೂಲಕ ಅಂದು ಸಹಿತ ಅವರು ನಿರ್ವಹಿಸಿಕೊಂಡು ಬಂದರು.ಇಂದಿಗೂ ಆ ರೀತಿ ರಿವಾಜು ಬಿಟ್ಟಿಲ್ಲ.     

        ವಿಜಯಪುರದ ಪಿ.ಡಿ.ಜೆ ಪ್ರೌಢ ಶಾಲೆಯಲ್ಲಿ ಇವರಿಗೆ ಅಭ್ಯಾಸವನ್ನು ಮಾಡಿ 7ನೇ ತರಗತಿ ಉತ್ತೀರ್ಣರಾದ ಹೈಸ್ಕೂಲ್ ನಲ್ಲಿ ಕನ್ನಡ, ಇತಿಹಾಸ, ಭೂಗೋಳ, ವಿಜ್ಞಾನ ಇಂಗ್ಲಿಷ್ ಅಂದರೆ ಇವರಿಗೆ ಅಚ್ಚು ಮೆಚ್ಚಿನ ವಿಷಯಗಳಾಗಿ ದ್ದವು.ಈ ಬಗ್ಗೆ ಅನೇಕ ಶಿಕ್ಷಕರ ಜೊತೆಗೆ ಸಮಲೋಚನೆಗಳ ನ್ನು ಮಾಡುತ್ತಿದ್ದರು. ಕೇವಲ ಪಾಠ ಪ್ರವಚನಕೆ ಮಾತ್ರ ಈ ಶಾಲೆಯಿರದೆ ನೈತಿಕ ಶಿಕ್ಷಣ ಕೊಡುವಲ್ಲಿಯೂ ಕೂಡ ಪ್ರಸಿದ್ಧವಾಗಿದೆ .ಚುರುಕಾದ ಲವಲವಿಕೆಯಿಂದ ಓಡಾಡುವ ರವೀಂದ್ರರು ಶಾಲೆಯಲ್ಲಿ ಪಾಠ ನೋಡುವ ಸನ್ನಿವೇಶಗಳು ಕರ್ಜಗಿ ಅವರ ಮೇಲೆ ಪ್ರಭಾವ ಬೀರಿದವು. ಮಲ್ಕಿ ಪರೀಕ್ಷೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರಲ್ಲಿ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ. ಆಗಲೇ ಕರ್ಜಗಿ ಅವರು ಕವನ, ಚುಟುಕು, ಪ್ರಬಂಧ ಬರೆಯುವುದರಲ್ಲಿ ಸಿದ್ಧ ಹಸ್ತ ರಾದರು. ಶ್ರೀ ಕಟ್ಟಿಯವರು ಎಂಬ ಮಾಸ್ತರು ಕನ್ನಡ, ಇಂಗ್ಲಿಷ್, ಸಂಸ್ಕೃತ ಮೂರು ಭಾಷೆಗಳ ಪಾಂಡಿತ್ಯವನ್ನು ಪಡೆದಿದ್ದರು. ಅವರ ಸ್ನೇಹ ಒಡನಾಟ ಕರ್ಜಗಿ ಅವರ ಮೇಲೆ ಪ್ರಭಾವ ಬೀರಿತು. ಒಂದು ದಿಕ್ಕು ದೆಸೆಯನ್ನ ಕಾಣುವ ಸಂದರ್ಭದಲ್ಲಿ ಚರ್ಚಾ ಕೂಟಗಳಲ್ಲಿ, ನಾಟಕಗಳಲ್ಲಿ ,ಭಾಗವಹಿಸುತ್ತಿದ್ದರು. ಎಸ್. ಎಸ್. ಎಲ್. ಸಿಯನ್ನು ೧೯೬೨ ರಲ್ಲಿ ಪಾಸಾಗಿ ವಿಜಯಪುರದ ವಿಜಯ ಕಾಲೇಜಿಗೆ ಪಿಯುಸಿಗೆ ಪ್ರವೇಶ ಪಡೆದರು. ಅಲ್ಲಿನ ಪ್ರಾಧ್ಯಾಪಕರು ಡಾ. ಗಣಾಚಾರಿ ಡಾ. ಸಾಸನೂರ ಡಾ. ಕೃಷ್ಣಮೂರ್ತಿ, ಪ್ರೊ. ರಾಮಾಚಾರಿರಂತ ಮಹಾಮಹಿಮ ಗುರುಗಳು ಇವರಿಗೆ ದೊರಕಿದವರು. ಆಗ ಇವರ ಸಾಹಿತ್ಯಕ್ಕೆ ನೀರಿರುವ ಕೆಲಸವನ್ನು ಕೂಡ ಮಾಡಿದರು. ಭವ್ಯವಾದ ಗ್ರಂಥಾಲಯ ಇವರಿಗೆ ಆಕರ್ಷಿಸುತ್ತದೆ. ಬಿ.ಎ. ಪ್ರಥಮ ವರ್ಗದಲ್ಲಿ ಇದ್ದಾಗ ಕನ್ನಡ ಪುಸ್ತಕಗಳನ್ನೆಲ್ಲ ಗ್ರಂಥಾಲಯದಲ್ಲಿ ಓದಿ ಮುಗಿಸಿದವರು. ನಿರಂಜನ, ಕಟ್ಟಿಮನಿ, ಇನಾಮದಾರ್,ಅನಕೃ, ತರಾಸು ಮೊದಲಾದವರ ಕಾದಂಬರಿಗಳನ್ನು ಓದುತ್ತಿದ್ದರು, ಅವರು ಕಾವ್ಯಗಳನ್ನು ಕಂಠಪಾಠ ಮಾಡಿ ತರಗತಿಯಲ್ಲಿ ಹೇಳಿ ಗುರುಗಳಿಂದ ಮೆಚ್ಚುಗೆಯನ್ನು ಪಡೆಯುತ್ತಿದ್ದರು. ಇದನ್ನೆಲ್ಲ ಮನಗಂಡಿರುವ ಅವರ ಗುರುಗಳು ಸದಾ ಪ್ರೋತ್ಸಾಹವನ್ನು ನೀಡಿದರು. ಸ್ನೇಹಿತರೊಂದಿಗೆ ಭಾಗವಹಿಸಿದರು. ದೀಪಾವಳಿ ಸಂಚಿಕೆಯ ಸಂಗ್ರಹವನ್ನು ಮಾಡುವುದು ರವೀಂದ್ರ ಕರ್ಜಗಿ ಅವರ ಅಸಕ್ತಿ.1968ರಲ್ಲಿ ಬಿ.ಎ ಪದವಿಯನ್ನು ಮುಗಿಸಿದರು ಮುಂದೆ , ೧೯೭೦ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂ.ಎ.ಮಾ ಡಲು ಪ್ರವೇಶ ಪಡೆದರು. ಅಲ್ಲಿ ಚನ್ನಣ್ಣ ವಾಲೀಕಾರ ಒಂದು ವರ್ಷ ಮುಂದೆ ಇದ್ದರು.ಗೆಳೆಯರಾದರು.ಆಗ ಇವರಿಗೆ ಡಾ.ಎಂ.ಎಂ. ಕಲಬುರಗಿರಂತ ಗುರುಗಳ ನಿಷ್ಠೆ,ಪ್ರಭಾವಕ್ಕೆ ಒಳಗಾದರು‌.ಸತತ ಅಧ್ಯಯನ,ಕ್ರಿಯಾಶೀ ಲತೆಯಿಂದ ೧೯೭೨ ರಲ್ಲಿ ಎಂ.ಎ.ಕನ್ನಡ ಪದವಿಯನ್ನು ದ್ವಿತೀಯ ದರ್ಜೆಯಲ್ಲಿ ಪಾಸಾದರು.

ವೃತ್ತಿ- ಕಾಯಕ ನಿಷ್ಠೆ ಹೊಂದಿದವರು:

         ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮಿಕ ಶಾಲೆ ಇರುವ ಜತ್ ಪಟ್ಟಣಕ್ಕೆ ಹೋಗಿ ಕನ್ನಡ ಮಾಸ್ತರಾಗಿರು ಎಂದು ಸಂಗಮನಾಥ್ ಹಂಡಿ ಕಳಿಸಿಕೊಟ್ಟರು.ಅವರು ಅಲ್ಲಿ ಕೆಲಸ ಮಾಡಿದರು. ನಂತರ ಮುಳವಾಡದಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿ ಮೊದಲ ವೃತ್ತಿಯನ್ನು ಆರಂಭಿಸಿದರು ನಂತರ ಅವರು ಮಹಾರಾಷ್ಟ್ರದ ರಾಜ್ಯದ ಜತ್ ಪಟ್ಟಣದ ಕನ್ನಡ ಮಾಧ್ಯಮಿಕ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾದರು ಎರಡು ವರ್ಷಗಳ ಕಾಲ ಶ್ರದ್ದೆಯಿಂದ ಕಾರ್ಯವನ್ನು ನಿರ್ವಹಿಸಿದ ರಂತೆ ಅವರ ಪ್ರೇಮ ಎಂಬ ಯುವತಿಯೊಂದಿಗೆ ಇವರು ವಿವಾಹವಾದರೂ ಆ ಸಂದರ್ಭದಲ್ಲಿ ಗುಲ್ಬರ್ಗಾ ನೂತನ ವಿದ್ಯಾಲಯ ಸಂಸ್ಥೆಯ ನೂತನ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ 1973 ರಲ್ಲಿ ಆಯ್ಕೆಗೊಂಡು ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಆ ಸಂಸ್ಥೆಗೆ ನಿಷ್ಠೆಯಿಂದ ಕರ್ತವ್ಯದಿಂದ ದುಡಿಯುವದರ ಜೊತೆಗೆ ಅವರು ಕನ್ನಡ ಬೋಧಕರಾಗಿ ವಿದ್ಯಾರ್ಥಿಗಳಲ್ಲಿ ಹಳಗನ್ನಡ,ವ್ಯಾಕರಣ ,ನಡುಗನ್ನಡ ,ಆಧುನಿಕ ಸಾಹಿತ್ಯ ಹೀಗೆ ಅನೇಕ ಆ ವಿಚಾರಗಳನ್ನು ಹೊಂದಿಸಿ ಕನ್ನಡ ಬೋಧನೆ ಮಾಡುವುದರ ಜೊತೆಗೆ ಅನೇಕ ಸಾವಿರಾರು ಶಿಷ್ಯರನ್ನು ಪಡೆದುಕೊಂಡರು. ಅದರಂತೆ ಇವರ ಸೇವೆಯನ್ನು ಪರಿಶೀಲಿಸಿ 2004ರಲ್ಲಿ ನೂತನ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆಯನ್ನು ಮಾಡಲು ಅವಕಾಶವನ್ನು ನೀಡಿದರು.೨೦೦೪ ರಲ್ಲಿ ನಿವೃತ್ತಿ ಹೊಂದಿದರು. ಆದರೆ ಸಂಸ್ಥೆಯವರು ಇವರ ನಿಷ್ಠೆ, ಪ್ರಮಾಣಿಕತೆಕಂಡು ನೂತನ ವಿದ್ಯಾಲಯ ಸಂಸ್ಥೆಯ ಆಡಳಿತಾಧಿಕಾರಿ ಎಂದು ನೇಮುಸಿದರು. ಉತ್ತಮ ಆಡಳಿತವನ್ನು ಸಹಿತ ನೀಡಿದ ರವೀಂದ್ರ ಕರ್ಜಗಿ ಅವರು ಎನ್.ವಿ.ಕಾಲೇಜ್ ಎಂದರೆ ಕರ್ಜಗಿಯವರು; ಕರ್ಜಗಿಯವರು ಎಂದರೆ ಎನ್.ವಿ.ಕಾಲೇಜು ಎನ್ನುವಷ್ಟರ ಮಟ್ಟಿಗೆ ಅವರು ಆ ಕಾಲೇಜಿಗೆ ಅಂಟಿಕೊಂಡರು ಮತ್ತು ತಮ್ಮ ಜೀವನ ಸಂತೃಪ್ತಿಯನ್ನು ಕಂಡರು.

ಸಾಹಿತ್ಯ ಪರಿಸರ: ಇವರ ಮನೆತನ ಅನೇಕ ವಿದ್ಯಾ ಸಂಪನ್ನ ಹೊಂದಿದ್ದು.ಮನೆಯ ಪರಿಸರ,ಅಜ್ಜ- ಅಜ್ಜಿ,ತಂದೆ ತಾಯಿ ಪ್ರಭಾವ ‌ಹೋಮ,ಹವನ,ಭಕ್ತಿ ಗೀತೆಗಳು. ಗೀಗೀ ಲಾವಣಿ,ಬಯಲಾಟ,ಪದಗಳು ಅಂಬಲಿ ಗುರಿಲಿಂಗಪ್ಪ ಮುತ್ತ್ಯಾ ಪ್ರಭಾವ.ಶಾಲಾ‌ ಕೈ ಬರಹ ಪತ್ರಿಕೆ, ಡಾ.ಸರೋಜಿನಿ ಮಹಿಷಿ ಸಂಪಾದಕತ್ವದಲ್ಲಿ ಮಹಿಳೆಯರ ಪತ್ರಿಕೆಯ ಬಾಲ ವಿಭಾಗದಲ್ಲಿ ಕರ್ಜಗಿ ಅವರ ಶೂರಬಾಲಿಕೆ ಕಥೆ ಪ್ರಕಟವಾಗಿವೆ. ವಿಜಯ ಕಾಲೇಜಿನ ಮ್ಯಾಗಜೀನ್ ದಲ್ಲಿ 'ರೂಮು ಸಿಕ್ಕಿತು' ಹರಟೆ ಪ್ರಕಟ. ಕೋರಿ,ಮುಳಗುಂದ, ಹಂಡಿಯವರಂತ ಗುರುಗಳ ಪ್ರೋತ್ಸಾಹ ಸಾಹಿತ್ಯ ರಚನೆಗೆ ಪ್ರೇರಣೆ ದೊರೆಯಿತು.ಡಾ. ಎಂ.ಎಂ.ಕಲಬುರ್ಗಿ ಸರ್ ಗುರುಗಳ ಸಂಪರ್ಕದಿಂದ ಗದ್ಯ ಬರವಣಿಗೆ ಕಲಿತರು.

ದಾಂಪತ್ಯ ಜೀವನ: 

                    ಕರ್ಜಗಿ ಅವರಿಗೆ ಮದುವೆ ಮಾಡಬೇಕೆಂದು ಮನೆಯವರು ಕನ್ಯಾ ಅನ್ವೇಷಣೆಯಲ್ಲಿ ಇದ್ದಾಗಲೇ ಶ್ರೀಮತಿ ಭವಾನಿ ವೆಂಕಟೇಶ ದೇಶಪಾಂಡೆ ಅವರ ಮಗಳು ಪ್ರೇಮಾ ಅವರನ್ನು ನೋಡಿದಾಗ ಮನೆಗೆ, ಸೊಸೆ,ಮಗನಿಗೆ ತಕ್ಕ ಹೆಂಡತಿಯಾಗಬಲ್ಲಳು ಎಂದು ತೀರ್ಮಾನಕ್ಕೆ ಬಂದು ಸರಳ ವಿವಾಹ ಮಾಡಿಕೊಟ್ಟರು.

ಅದರಂತೆ ಪ್ರೇಮಾ ಎಂಬ ಹೆಸರು ಹೋಗಿ ಸರೋಜಾ ಎಂಬ ಹೆಸರಿನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಂತೋಷ, ಸಂದೇಶ,ಸಂಕೇತ ಮೂವರು ಗಂಡು ಮಕ್ಕಳು

ಅವರೆಲ್ಲರೂ ತಮ್ಮ ವೃತ್ತಿ ಜೀವನ,ಸಾಂಸಾರಿಕ ಜೀವನ ಕಂಡು ಸೊಸೆ,ಮೊಮ್ಮಕ್ಕಳು ಜೊತೆಗೆ ಕನ್ನಡ, ಭವಾನಿ ಮನೆಯ ಸದಾಶಿವನಗರದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ‌.ಇವರ ಪತ್ನಿ ಸರೋಜಾ ಅವರು ೨೭-೦೯- ೧೯೪೬ ರಲ್ಲಿ ಜನಿಸಿದರು. ಮೂರು ತಿಂಗಳ ಕರ್ಜಗಿ ಅವರಿಗಿಂತ ಸಣ್ಣವರು. ಯಾದಗಿರಿಯ ನ್ಯೂ ಕನ್ನಡ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗೆ ಸೇವೆ ಸಲ್ಲಿಸಿದರು. ಅವರು ೭೩ ವರ್ಷ ಬದುಕಿ ಬಾಳಿ,ಎಲ್ಲಾ ಮಕ್ಕಳ ಜವಾಬ್ದಾರಿ ಹೊತ್ತು,ಅವರನ್ನು ತಯಾರು ಮಾಡಿ ಎಲ್ಲಾ ಕೆಲಸ ಕಾರ್ಯ ಮಾಡಿ ಆದರ್ಶ ಗೃಹಿಣಿ. ಆದರ್ಶ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿದಿದರು.ಸದಾ ಹಸನ್ಮುಖಿ. ಮನೆ ಗೆದ್ದು ಮಾರು ಗೆದ್ದ ಒಬ್ಬ ಅಪರೂಪದ ಮಹಿಳೆ.ಪತಿಗೆ ಯಾವುದೇ ತೊಂದರೆ ಕೊಡದೇ ಇಡೀ ಸಂಸಾರ ನಿಭಾಯಿಸಿದವರು. ಕಲಬುರಗಿಯಿಂದ ಯಾದಗಿರಿಗೆ ಕರ್ಜಗಿ ಅವರು ಅಲೆದಾಡಿದವರು.ಪ್ರಮೋಷನ್ ಮಾಡಿ ಕಲಬುರಗಿ ತಂದ ಮೇಲೆ ನಿರಾಳರಾಗಿ,ಮುಂಜಾನೆ ಎದ್ದರೆ ಕಾಲೇಜು, ಬೋಧನೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿ ಎಲ್ಲಾ ಜವಾಬ್ದಾರಿ ಹೊತ್ತು ನಡೆದವರು. ತಮ್ನ ೭೩ ನೆಯ ವಯಸ್ಸಿನಲ್ಲಿ ಮಕ್ಕಳ, ಮೊಮ್ಮಕ್ಕಳು, ಪತಿಯ ಆರೋಗ್ಯ ಕಾಪಾಡಿಕೊಳ್ಳಿರೆಂದು ಹೇಳುತ್ತಲೇ ತಮ್ಮ ಆರೋಗ್ಯದ ಕಡೆ ಗಮನ ಕೊಡದೇ ಸಂತೃಪ್ತದಿಂದ ೧೮-೦೪-೨೦೧೯ ರಂದು ನಿಧನರಾದರು. ಈಗ ನೆನಪು.. ಮಾತ್ರ ...!

ಸಾಹಿತ್ಯ ರಚನೆ: ಪ್ರಾರಂಭದಿಂದ ಅವರು ಕಾವ್ಯ,ಲೇಖನ,ಕಥೆ,ಪ್ರಬಂಧ ಮೊದಲಾದ ಕಡೆಗೆ ಚಿಂತನೆ ಮಾಡುತ್ತ ಬಂದವರು.೧೯೯೦ ರಲ್ಲಿ ಅನುಭವ ಎಂಬ ಕವನ ಸಂಕಲನ ಹೊರತರುವ ಮೂಲಕ ಕವಿಯಾಗಿ ಗುರುತಿಸಿಕೊಂಡರು.ಅಲ್ಲಿಂದ ಅವರ ಕಾವ್ಯಯಾನ ೨೦೧೯ ರವರೆಗೆ ಮೂರು ದಶಕಗಳಲ್ಲಿ ಐದು ಕವನ ಸಂಕಲನ, ಕಥೆ,ಪ್ರಬಂಧ, ಜೀವನ ಚರಿತ್ರೆ, ಚಿಂತನ,ಸಂಪಾದನೆಗಳು ಸೇರಿ ೨೯ ಕೃತಿಗಳನ್ನು ಪ್ರಕಟಿಸಿದ್ದಾರೆ.

ಕಾವ್ಯ: ಅವರ ಜೀವಾಳ. ಕಾವ್ಯದಿಂದಲೇ ಪ್ರಸಿದ್ಧರಾದರು.

ಅನುಭವ (೧೯೯೦),ಅನುನಯ (೧೯೯೭)ಅನುಶೀಲ (೨೦೦೧),ಅನುಕ್ಷಣ(೨೦೦೪),ಅನ್ವಯ ಕಾವ್ಯ(೨೦೧೯),

ಈ ಐದು ಕವನ ಸಂಕಲನ ಬಹು ಮುಖ್ಯವಾಗಿವೆ.ಪ್ರಸ್ತುತ ಸನ್ನಿವೇಶ, ಸಮಕಾಲೀನ ಬದುಕಿನ ಆಯಾಮ ವ್ಯಕ್ತಪಡಿ ಸುವ ಅವರ ಕಾವ್ಯದ ಧೋರಣೆ ಮಾನವಪರವಾದುದು.

ಕವಿಯು ಅಪಾರ ಅಧ್ಯಯನ ಪಡೆದು ತನ್ನದೇ ಆದ ಸ್ವಯಂಪ್ರತಿಭೆಯಿಂದ ಕಾವ್ಯ ಹೊಸೆದಿದ್ದಾರೆ‌.ಅವರ ಕಾವ್ಯ ವನ್ನು ನಾವು

೧.ಪ್ರೀತಿ- ಪ್ರೇಮ- ಪ್ರಣಯ

೨.ಸಾಮಾಜಿಕ ಚಿಂತನೆ

೩.ವಿಡಂಬನೆ

೪.ಗುರು- ಶಿಷ್ಯರ ಸಂಬಂಧ

೫.ನಾಡು- ನುಡಿ- ದೇಶ ಪ್ರೇಮ

೬.ವ್ಯಕ್ತಿಗತವಾದ ಕವನಗಳು ಎಂದು ಅಧ್ಯಯನ, ಓದಿನ ದೃಷ್ಟಿಯಿಂದ ವರ್ಗೀಕರಣ ಮಾಡಬಹುದು.

ಪ್ರೀತಿಯ ಕುರಿತು ಹಲವು ಕವನಗಳಿವೆ.ತನ್ನ ಸಂಗಾತಿ ಇತರರಿಗಿಂತ ಭಿನ್ನವೆಂದು ಅವಳ ಒಲವು,ನಲಿವು, ಪ್ರೀತಿ ಹೃದಯಂಗಮವಾಗಿ ಬಿತ್ತರಿಸಿದ್ದಾರೆ.

ಕನ್ನಡ ಕೋಗಿಲೆಯು ತಾನೇ ಎಂದವಳು

ನನ್ನ ಹೃದಯವನೆ ಕದ್ದ ಕಳ್ಳಿಯವಳು

ಸತ್ಯ ನೀತಿಯನೇ ಬಹು ಮೆಚ್ಚಿದವಳು

ನನ್ನನೇ ಹುಡುಕಿ ಬೆಂಬತ್ತಿ ಬಂದವಳು-( ಅನುಭವ ಪು:೩೬) ಎಲ್ಲರಂಥವಳಲ್ಲ ನನ್ನವಳು ಎಂಬ ಕವನ ವಿಶ್ವಾಸದ ಮೂಲಕ ಕವಿ ಮನಸ್ಸು ಗೆದ್ದವಳು.

ಸಂಗಾತಿಯ ಮನಸ್ಥಿತಿ ಅರಿತು ಬಾಳಿದವರು.ಅವರಲ್ಲಿ ಭಕ್ತಿ ಪ್ರೀತಿ,ಆಧ್ಯಾತ್ಮ ಪ್ರೀತಿ ಜೊತೆಗೆ ಸತಿಯ ಪ್ರೀತಿ ಅನುರುಣಿಸಿದೆ.

ಮೊದಲ ದಿನ ಬಂದಾಗ ನೂರು ಕಾರಂಜಿ

ಚಿಲ್ಲನೇ ಚಿಮ್ನಿದಂತೆ

ಒಂದು ಒಯ್ಯಾರದ ಒನಪು ಬೀತಿದಾಗ

ಸಾವಿರ ಬಲ್ಬು ಬೆಳಗಿದಂತೆ-( ಅನುಭವ :ಪು:೩೪) ಈ ರೀತಿಯ ಪ್ರೀತಿ ಅನುಭವ ನೂರು ಕಾರಂಜಿ ಚಿಮ್ಮಿದಂತೆ;

ಪ್ರೀತಿಯ ನಗು ಬೆಳಗುವ ಸಾವಿರ ಬಲ್ಬುದಂತೆ ಜ್ಯೋತಿ ಬೆಳಗಿದ ಮನ,ಮನೆ, ಸಂಸಾರ,ಬೆಳಗಿದವಳು ಎಂಬ ಶುದ್ಧಾಂಗ ಪ್ರೀತಿಗೆ ಕವಿ ಹೇಳಿ ಮಾಡಿಸಿದ ಕವನಗಳು ಹಲವು.ಬಳಕಬೇಡ,ಅನುಭವ,ಗಲ್ಲದ ಗುಳಿ,ಹಳ್ಳಿಯ ಸೊಬಗು,ಮಾತು ಕೇಳದ ಹುಡುಗಿ, ಪ್ರಳಯ ಸಂದೇಶ, ಮೊದಲಾದ ಕವನಗಳು ನಮಗೆ ಸಿಗುತ್ತವೆ.ಪ್ರೀತಿ ಹಾಲು- ಜೇನು ಸುಮಧುರದಂತೆ,ಪ್ರಕೃತಿ ಸೊಬಗಿನ ನೈಜ ಪ್ರೀತಿ ಇಲ್ಲಿ ಅಭಿವ್ಯಕ್ತಿ ಆಗಿವೆ‌.

ಸಾಮಾಜಿಕ ಚಿಂತನೆ: ಸಾಮಾಜಿಕ ಚಿಂತನೆಯ ಅನೇಕ ಕವಿತೆಗಳನ್ನು ಅವರು ಬರೆದು ಜನಸಾಮಾನ್ಯರ ಮನಸ್ಸನ್ನು ಗೆದ್ದಿದ್ದಾರೆ ಇಲ್ಲಿ ಜಾತಿ ಧರ್ಮ ಮೂಢನಂಬಿಕೆ ಸಂಪ್ರದಾಯ ಮೌಡ್ಯತೆ ಅಂಧಕಾರ ಅನೀತಿ ಇವುಗಳನ್ನು ಕುರಿತು ಪರಿಣಾಮಕಾರಿಯಾದ ಕವನಗಳನ್ನು ರಕ್ಷಿಸಿದ್ದಾರೆ ಸಾಮಾಜಿಕ ಚಿಂತನೆಯ ಈ ಕವಿತೆಗಳು ಹೋದಗರಿಗೆ ಹಿತವನ್ನು ಉಂಟುಮಾಡುತ್ತವೆ ಬರಗಾಲದಿಂದ ಆಗುವ ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುತ್ತಾರೆ. ಅದರಂತೆ ಜಾತಿ ವ್ಯವಸ್ಥೆ ವಿರುದ್ಧ ತಮ್ಮ ರಣ ಕಹಳೆಯನ್ನು ಬೀಸುತ್ತಾರೆ. ಸಮಾಜ ಸುಧಾರಣೆಯ ಅನೇಕ ಅಂಶಗಳನ್ನು ರಾಜಕೀಯ ನೀತಿಗಳ ಹಿನ್ನೆಲೆಯಲ್ಲಿ ವಿವರಿಸಿದ್ದಾರೆ ವರದಕ್ಷಿಣೆ ಪದ್ಧತಿ ಜಾತಿಯತೆ ಇವತ್ತಿನ ಸಾಮಾಜಿಕ ತಲ್ಲಣಗಳು ಬಡತನ ಸಹಾಯ್್ಸೇಕತೆ ದಾರುಣ್ಯದ ಸ್ಥಿತಿಯನ್ನು ತಮ್ಮ ಕಾವ್ಯದ ಮೂಲಕ ಹೆಣದಿದ್ದಾರೆ ಅದಕ್ಕಾಗಿ ಅವರ ಭಾವೈಕ್ಯ ಎನ್ನುವ ಕವಿತೆ ಅತ್ಯಂತ ಮಹತ್ವವಾಗಿದೆ 

ಗೌಡರ ಶೆಟ್ಟರ ಆಮಂತ್ರಣದಲ್ಲಿ 

ದುರ್ಗಪ್ಪನ ಶಿಷ್ಟ ಉಸ್ತುವಾರಿಯಲ್ಲಿ

 ಮದ್ವಾಚಾರ್ಯರ ಅಡಿಗೆ ಮನೆಯಲ್ಲಿ 

ರಶೀದ್ ಖಾನ್ ಸ್ವತಃ ಪಲಾವ್ ಮಾಡಿ 

ಜೋಶೆಪ್ಪನ ಕೈಯಿಂದ ಉಣ್ಣುವದೇ ಭಾವೈಕ್ಯತೆ -

ಅಂದರೆ ಅನೇಕ ಧರ್ಮಗಳು ಒಂದೇ ಆಗಿವೆ. ದೇವನೊಬ್ಬ ನಾಮ ಹಲವು ಎಂಬ ಚಿಂತನೆಯನ್ನು ಹೇಳುತ್ತಾ, ಸಕಲ ಜೀವಾತ್ಮರಿಗೆ ಲೇಸನ್ನು ಬಯಸಬೇಕೆಂಬ ಅವರ ಸಾಮಾಜಿಕ ಕಳಕಳಿ ಇದೆ, ಸೋದರತ್ವ, ಮಾನವೀಯತೆ ಭ್ರಾತೃತ್ವ, ಇವುಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿದ್ದಾರೆ. ಸಮಾಜದಲ್ಲಿ ಶೋಷಣೆಯನ್ನು ಅವರು ವಿರೋಧಿಸುತ್ತಾರೆ.ನಾಗರಿಕತೆಯ ಸಮಾಜದ ಪ್ರತಿಬಿಂಬ ಎಂಬುದು ಗೊತ್ತಿದ್ದರೂ ಸಹ ತೊಂದರೆಗಳನ್ನು ಅವರು ತಮ್ಮ ಕಾವ್ಯದಲ್ಲಿ ಎತ್ತಿ ಹೇಳಿದ್ದಾರೆ.ವಿವಿಧತೆಯಲ್ಲಿ ಏಕತೆ ಕಂಡವರು.ಕೇಳಿರಿ ನಮ್ಯ ಮಾತು,ವರದಕ್ಷಿಣೆ ಹಾಯಿಕುಗಳು,ನಾನು ನನ್ನವರು ಮೊದಲಾದ ಕವನ ಗಮನಸೆಳೆತುತ್ತವೆ.

೩.ವಿಡಂಬನೆ: ಕರ್ಜಗಿ ಅವರು ಹಾಸ್ಯ, ವ್ಯಂಗ್ಯ,ವಿಡಂಬನೆ,

ಬಹು ಮುಖದಲಿ ಅವರ ವ್ಯಕ್ತಿತ್ವವೂ ಹಾಗೆ,ವಿಡಂಬನೆ ಶೈಲಿ, ಮಾತಿನ ರೀತಿ ಬಹು ಅನನ್ಯ.ಸ್ಥಿತಿ ಬಂಧುಗಳು,ಕುಡಿಯಲಾರದವನ ಪಾಡು,ಬಾ,ಬಂಧು, ಬೆತ್ತಲೆಯ ಸಮರ,ಮುದಕಿಯ ಹಾಡು,ಭಿಕ್ಷುಕರ ಹಾಡಯ,ತೂಕದ ಮನುಷ್ಯರು, ಮುಂತಾದ ಕವನಗಳು ರಾಜಕೀಯ, ಸಾಮಾಜಿಕ,ವ್ಯವಸ್ಥೆ ವಿಡಂಬನೆ ಹಾಸು ಹೊಕ್ಕಾಗಿವೆ.

ನಾನು ಕುಡಿಯಲಾರೆ ಎಂದರೆ

ಮಿಕಿ ಮಿಕಿ ನೋಡುತ್ತಾರೆ

ಕುಡಿಯುವುದೇ ಇಲ್ಲ ಎಂದರೆ

ನೀನು ಗಂಡಸರೇ? ಅನ್ನುತ್ತಾರೆ‌. ಕುಡಿಯಲಾರದವನ ಸ್ಥಿತಿ ಇಲ್ಲಿ ಅನಾವರಣ ಮಾಡುವರು.

೪.ಗುರು- ಶಿಷ್ಯ ಬಾಂಧವ್ಯ: ಗುರು ಶಿಷ್ಯರ ಸಂಬಂಧವನ್ನು ಬಹು ಪ್ರಾಚೀನ. ವೇದ,ಆಗಮದಿಂದ ಹಿಡಿದು ಗುರುಕುಲ, 

ಶಿಕ್ಷಣ ಪದ್ಧತಿ, ಅಗ್ರಹಾರ, ಘಟಿಕಾಸ್ಥಾನ,ಮೊದಲಾದ ಗುರು ಶಿಷ್ಯ ಪರಂಪರೆ ಅಗಾಧವಾಗಿದೆ.ಅವರ ಶಿಷ್ಯರನ್ನು 

ದೇವರೆಂದು ತಿಳಿದು ಕಾವ್ಯದಲ್ಲಿ ಹೀಗೆ ಹೇಳುವರು‌

ನನ್ನ ಶುಷ್ಯರು,ಇವರೆ ನನ್ನ ಗುರುಗಳು

ಕಲಿಯಲೆಂದು ಬಂದ ಎಳೆಯತು

ನನ್ನ ಹಳೆಯ ದೇವರು-(ಅನುನಯ-ಪು:೩೩) ಇಂದು ಗುರು ಶಿಷ್ಯರ ಸಂಬಂಧ ಹಳಸಿದೆ.ಗುರುವೇ ಶಿಷ್ಯ ನಿಗೆ ದೇವರಾದರೆ; ಕವಿ ತನ್ನ ಗುರುವನ್ನು 

ವಿದ್ಯಾರ್ಥಿಗಳು ಹೇಳಿದಂತೆ ಕೇಳು

ಸಾಹೇಬರ ನುಡಿಯೇ ನಿನಗೆ ವೇದವಾಕ್ಯವಾಗಲಿ

ಹಿರಿ ಗುರುಗಳ ಪಾದ ಧೂಳಿ ನಿನಗೆ ಪ್ರಸಾದವಾಗಲಿ

ಮುಂದಾಳುಗಳುಗಳ ತಲೆ ಹಿಡುಕನಾಗು

ನಿನ್ನ ಮಕ್ಕಳು ಹಾಳಾಗಿ ಹೋಗಲಿ

ಎಲ್ಲರ ಮಕ್ಕಳಿಗೆ ಟ್ಯೂಶನ್ ಹೇಳು-(ಅನುಭವ-ಪು:೨೩) ಶಿಕ್ಷಕ ಮನೆ ಪಾಠ ಹೇಳುವ ಪದ್ಧತಿ ಬಗ್ಗೆ ವಿರೋಧ ವ್ಯಕ್ತಪ ಡಿಸುವ ಅನ್ಯಾಯ,ಅನೀತಿ, ವಿರುದ್ಧ ಒಳ್ಳೆಯ ಕಾವ್ಯ ಬರೆದವರು.ಮಗುವನೆಬ್ಬಿಸಬೇಡ,ಮಾಸ್ತರ ಅಂತಾನೆ,

೫.ನಾಡು- ನುಡಿ- ದೇಶ ಪ್ರೇಮ: ಕನ್ನಡ ನಾಡು,ನುಡಿ ಪ್ರೇಮ ಭಾವ ಉಂಟಾಗಿವೆ.ನಾಡು ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು‌.ಅವರ ಕಕ್ಕುಲಾತಿ ಕನ್ನಡ ಭಾಷೆ,ಈ ಪ್ರದೇಶದ ಬಗ್ಗೆ ಅಭಿಮಾನ.ಕಲಬುರಗಿ ಜಿಲ್ಲೆಯ ಮಹತ್ವ, ಬಿಸಿಲ ನಾಡು,ತೊಗರಿ ಕಣಜ,ಸೂರ್ಯ ನಗರಿ ವೈವಿಧ್ಯ ನಾಡಾದ ಬಗ್ಗೆ

ಬಿಸಿಲನುಂಡು ಬೆಳದಿಂಗಳ ಬೀರುವ ನಾಡಿಗೆ

ತೊನೆ ತಿನೆಯಂತಿರುವ ಬಿತ್ತದ ಗದ್ದೆಗೆ

ಬನ್ನಿ ಓ ನಾಡವರೆ ತೊಗರಿಯಾ ಕಣಜಕೆ

ಮಾಲದಂಡಿಯ ಹಸನು ಬಿಡದೆ ಕಾಣಲಿಕೆ- (ಅನುಶೀಲ: ಪು:೧) ನಾವೆಲ್ಲರೂ ಒಂದೇ,ಕನ್ನಡದ ಅನುಭವ ಮಂಟಪ, ಬನ್ನಿ ಕಲಬುರಗಿ ನಾಡಿಗೆ,ಕನ್ನಡ ರಾಜ್ಯೋತ್ಸವ ಬಗ್ಗೆ ಅಪಾರ ಅಭಿಮಾನ ಗೌರವ ಹೊಂದಿದ ನಾಡು.ಕನ್ನಡ ಅವರಿಗೆ ಪ್ರೇರಣೆ!. ಕನ್ನಡ ಹೆಸರು ಮೊಳಗಲಿ..

ಕನ್ನಡವೆಂದರೆ ಸಳು ದುಃಖ,ನೋವು,ಅಲ್ಲ

ಹರ್ಷ,ಉತ್ಸಾಹ, ನಗೆ ಅಭಿಮಾನವಯ್ಯಾ

ಕನ್ನಡವೆಂದರೆ ಕಂಎ ಕಂಡವರ ಮುಂದೆ

ಕೈ ಚಾಚಿ ಭಿಕ್ಷೆ ಬೇಡಿ ಭಕ್ಷಿಸುವುದಲ್ಲವಯ್ಯ-( ಅನುಶೀಲ-

ಪು:೯)ನಿತ್ಯೋತ್ದವ ಆಗಲಿ ಎಂದು ಹಾಡಿದರು. ಸ್ಮರಣೆಗೊಳ್ಳಲಿ ನಿನ್ನ ಬಸಹು,ಉರುಳುವ ಗಾಲಿ, ಕವನಗಳು ಸ್ವಾರಸ್ಯದಿಂದ ರಚಿಸಿದ್ದಾರೆ.

೬.ವ್ಯಕ್ತಿಗತ ಕವನಗಳು: ಕರ್ಜಗಿ ಯವರು ವ್ಯಕ್ತಿ ಗತ ಕವನ ಬರೆಯುವುದರಲ್ಲಿ ಸಿದ್ಧಹಸ್ತರು.ಗಾಂಧೀ ಮಹಾರಾಜ ಕೀ ಜೈ,ವರಕವಿ ಬೇಂದ್ರೆ ಸ್ವಾಗತ,ರಾಮಾನಂದ ತೀರ್ಥ, ವಿ.ಪಿ.ದೇವುಳಗಾಂವಕರ್,ಆಳಂದಕರ ಸದಂಜರ,ಸಗರ ಕೃಷ್ಣಾಚಾರ,ರಾಮೇಶ್ವರ,ಸ್ವಾಮಿರಾವ್ ಕುಲಕರ್ಣಿ, ಅಂದಾನಿ,ಜಯಶೆಟ್ಡಿ ಮೊದಲಾದ ವ್ಯಕ್ತಿ ಗಳ ಅವರ ಜೀವನ ಸಾಧನೆಯ ಹೊಳವು ಕಾವ್ಯಗಳಲ್ಲಿ ದಾಖಲಿಸಿದ್ದಾರೆ. ಅವರ ವ್ಯಕ್ತಿಯ ಜಿಗ್ ಜಾಗ್ ಮಾಡಿ ಬರೆಯುವಲ್ಲಿ ಸಹ ಸಿದ್ಧ ಹಸ್ತರು.

ಸ್ವಾಮಿರಾವ್ ಕುಲಕರ್ಣಿ ಅವರ ಕುರಿತು ಎರಡು ಕವನಗಳಿವೆ.

ರಾಮದಾಸೃಂಬ ನಿಧಿಯ ಕಂಡು ಹಿಡಿದು

ದಾಸ ಸಾಹಿತ್ಯ ದ ಹುಚ್ಚು ಹಚ್ಚಿಕೊಂಡು

ನಾ.ನಾ. ಮಹಾಮಹಿಮರ ಪ್ರಶಸ್ತಿ ರೇಸಿನಲಿ ಹಿಂದಿಕ್ಕಿ

ಕನಕಶ್ರೀ ಎಂಬ ಜಾಕ್ಪಾಡ್ ಸಂಪಾದನೆ -( ಅನ್ವಯ ಕಾವ್ಯ- 

ಪು:೨೬೬)

ನಿಜ ನಾಯಕ ಕವನದಲ್ಲಿ

ಕಾಗದದ ಹುಲಿಯಲ್ಲ ಈ ಧೀಮಂತ ಶೂರ

ನಿಜ ನಾಯಕ ಚಂದ್ರಶೇಖರ ಪಾಟೀಲ ರೇವೂರ- (ಪು:೨೬೭) ತಾನಾ ಮಾಸ್ತರ,ಅನಂತರಾವ್ ದೇಶಮುಖ

ಮೊದಲಾದ ಪದ್ಯ ಗಮನ ಸೆಳೆದಿವೆ.ಚುಟುಕುಗಳನ್ನು ಬರೆದ ಇವರ ಹಲವು.

ಗುಂಡು

ಕಂಡ ಕಂಡಲ್ಲಿ

ಗುಂಡು ಹಾಕುತ್ತಾರೆ

ಪೋಲೀಸರಲ್ಲ!

ಪ್ರೊಫೆಸರಗಳು !!

ಗದ್ಯ ಸಾಹಿತ್ಯ: ಪ್ರೊ.ರವೀಂದ್ರ ಕರ್ಜಗಿ ಅವರು ಕಥೆಗಾರ.

ಕಥನ ಶೈಲಿಯಲ್ಲಿ ಪಳಗಿದ್ದಾರೆ‌.ವಸ್ತು- ವಿಷಯ ಆಯ್ಕೆಯೂ ಗಮನ ಸೆಳೆಯುವರು.ಸಾಮಾನ್ಯ ,ಮಧ್ಯಮ ನೆಲೆಯ ಕಥೆಗಳು ಬರೆದು ಸಾಮಾಜಿಕ ವ್ಯವಸ್ಥೆಗೆ ಸ್ಪಂದಿಸುವ ಗುಣ 

ಅನುಬಿಂಬ ಕಥಾ ಸಂಕಲನ ೧೯೮೦ ರಲ್ಲಿ ಪ್ರಕಟವಾಗಿದೆ.ವಿಷ ಚಕ್ರ, ಒಂದ್ಹೋಗಿ ಒಂದಾತು,ನೆನಹು, ಲಿಂಗಣ್ಣ,ಉತ್ಸವ, ಸಿದ್ಧರಾಯಿಯ ನಗೆ ,ಕಾಲಾಪಸನಿ, ಮಲಗಲಣ್ಣನ ಬಾಬ್ಬಿ,ಏಳು ಹೆಡೆಯ ಸರ್ಪ,ಹೇಡಿ, ಮೊದಲಾದ ಹನ್ನೆರಡು ಕಥೆಗಳ ಗುಚ್ಛವಿದಾಗಿದೆ‌.ಇಲ್ಲಿ ಮೌಢ್ಯತೆ,ಮಹಿಳೆ ಸದೋಷಣೆ,ಅಸಹಸಯಕತೆ, ನಪುಂಸಕ ಚಿತ್ರಣ,ಮಧ್ಯಮ ವರ್ಗದ ಜನ ಜೀವನದ ಮೇಲೆ ಬೆಳಕು ಚೆಲ್ಲುವ ಕಥೆಗಳಾಗಿವೆ‌

ಗದ್ಯ ಗಂಧ, ಗದ್ಯ ಗರಿ,ಅನುರಣ ಈ ಮೂರು ಕೃತಿಗಳು

ಅವರ ಗದ್ಯ ಸಾಮರ್ಥ್ಯದ ಬರವಣಿಗೆ ಕಾಣುತ್ತೇವೆ. ಪತ್ರಿಕೆಗಳಲ್ಲಿ, ಪುಸ್ತಕ, ಅಭಿನಂದನ ಗ್ರಂಥ , ಮುನ್ನುಡಿ ಮೊದಲಾದ ಬಗೆಯಲ್ಲಿ ಬರೆದ ಬರಹಗಳ ಕಟ್ಟು ಗಳಾಗಿವೆ.

ಎಂಟು ಭಾಗದಲ್ಲಿ ಮೊದಲ ಭಾಗದಲ್ಲಿ ೨೪ ಲೇಖನಗಳು,

ಮೋತಂಪಲ್ಲಿ ಮಹಾತ್ಮೆ,ಹಾಸ್ಯ ಲೆರಖನ,ವ್ಯಕ್ತಿ ಪರಿಚಯ, ಪುಸ್ತಕ ಪರಿಚಯ, ಚಿಂತನಗಳು, ಒಳಗೊಂಡಿವೆ.

ನಾಟಕಗಳು:ಮೂರು ಮೌಲಿಕ ನಾಟಕ ರಚಿಸಿದ್ದಾರೆ. ದೇವರ ದೈವ ಅನುವಾದ ನಾಟಕ,ವಿಠ್ಠಲ ದೇವ ಮತ್ತು ಆತನ ಭಕ್ತಗಣ ಕುರಿತಾಗಿದೆಬ.ಲೇಡಿಜ್ ರೂಮ್ ನಾಟಕ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿ ನಿಯರ ಮಾತು, ಚೇಷ್ಠೆ,ಅವರ ಬೈಗುಳ,ಮಾತಿನ ರಹಸ್ಯ ಎತ್ತಿ ಹೇಳುತ್ತವೆ. ಸುತ್ತಮುತ್ತಲಿನ ಘಟನೆಗೆ ಹೆದರಿ, ಲೇಖನ ಒಳ ಮನಸ್ಸು ತುಡಿಯುವ ಬಗೆಯೇ ನಾಟಕ ಬರೆಂಗಿಲ್ಲ.ಈ ಮೂರು ನಾಟಕ ಬಹು ಮುಖ್ಯವಾಗಿ ಓದಿಸಿಕೊಂಡು,ಜನರಲ್ಲಿ ಹಾಸ್ಯ,ನೀತಿ,ಪ್ರಚಲಿತ ವಿಷಯದ ಮೇಲೆ ಬೆಳಕು ಚೆಲ್ಲಿವೆ.

ಚಿಂತನ:ವಿಚಾರ ವಾಣಿ ಈ ಪುಸ್ತಕ ಬಹು ಮೌಲಿಕ.ಆಕಾಶವಾಣಿ ಚಿಂತನ ಬರಹಗಳು.ಮೂರೇ ನಿಮಿಷಗಳಲ್ಲಿ ನೂರಾರು ವಿಚಾರ ಹಂಚುವ ಬರಹ.ಚಿಕ್ಕ ಚೊಕ್ಕ ಬರಹದ ಲೆರಖನ ಓದುಗರ ಮೇಲೆ ಪ್ರಭಾವ ಬೀರಿ ಮನಸ್ಸು ಅರಳಿಸುವ ಗುಣ,ಚಿಂತನ ಮಾಡುವ‌ ಲೇಖನಗಳು.ಜೀವನ,ಸತ್ಯ,ಅಹಿಂಸೆ,ನೀತಿ,ಮೊದಲಾದ ವಿಷಯಗಳು ತುಂಬಾ ಅರ್ಥಪೂರ್ಣ ವಾಗಿ ನಿರೂಪಿಸಿದ್ದಾರೆ.

ಜೀವನ ಚರಿತ್ರೆ: ಕರ್ಜಗಿ ಅವರ ಬರಹ ವ್ಯಕ್ತಿ ಬರಹಗಳನ್ನು ಸುಲಲಿತವಾಗಿ ಬತೆಯುತ್ತಾರೆ.ವಚನಕಾರ ಅಲ್ಲಮಪ್ರಭು ಹನ್ನೆರಡನೆಯ ಶತಮಾನದ ಸದರಣ.ಅನುಭವ ಮಂಟಪ ಅಧ್ಯಕ್ಷ. ಅಸತನ ಜೀವನ ವಿವರ,ವಚನ,ಸಾಧ್ಯಾಸಾಧ್ಯತೆ ತುಂಬಾ ವಿವರವಾಗಿ ದಾಖಲಿಸಿದ್ದಾರೆ. ಇಬ್ಬರು ರಾಷ್ಟ್ರದ ಮುತ್ಸದ್ಧಿ ನಾಯಕರಾದ ಲಾಲಬಹಾದ್ದೂರ ಶಾಸ್ತ್ರೀ,ಅಟಲ ಬಿಹಾರಿ ವಾಜಪೇಯಿ ಅವರ ಬಾಲ್ಯದಿಂದ ರಾಜಕೀಯ, ಜೀವನ ಸಾಧನೆ ವಿವರಿಸಿದ್ದಾರೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಕಟ್ಡಿದ ದತ್ತಾತ್ರೇಯ ರಾವ್ ಹೇರೂರ ಅವರ ಜೀವನ ಹೋರಾಟ,ಕನ್ನಡ ಮಯ ವಾತಾವರಣ ದೊಂದಿಗೆ ಸಾಹಿತ್ಯ ರಚನೆಯ ಮೈಲುಗಳು ಪರಿಚಯಿಸಿದ್ದಾರೆ.ಕನ್ನಡ ಉಸಿರೆಂದ ಚುಟುಕು ಬ್ರಹ್ಮ ದಿನಕರ ದೇಸಾಯಿ, ಕನ್ನಡ ಕಥೆ- ಕಾದಂಬರಿ ರಚಿಸಿದ ಗೆಳೆಯರ ಬಳಗದ ಆನಂದಕಂದ,ಬೇಂದ್ರೆ, ಅಂಬಿಕಾತನಯದತ್ತ,ನಾಟಕಕಾರ ಗಿರೀಶ್ ಕಾರ್ನಾಡ್ ಹೀಗೆ ಒಂಬತ್ತು ಜೀವನ ಚರಿತ್ರೆ ರಚಿಸಿದ್ದಾರೆ. ಅವು ಅವರ ಸಮಗ್ರ ಜೀವನ ಸಾಧನೆ,ಹೋರಾಟ,ಸಾಹಿತ್ಯ ಹಲವು ಮಗ್ಗುಲುಗಳನ್ನು ತುಂಬಾ ಪರಿಣಾಮಕಾರಿಯಾಗಿ ಅವರ ಸಮಗ್ರ ಪರಿಚಯ ಮಾಡಿಕೊಡಲಿವೆ.

ಸಂಪಾದಿತ ಕೃತಿಗಳು;

೧. ಜಗನ್ನಾಥ,೨. ಸಮೂಹ,೩. ಮಿಡಿ ಗೊಂಚಲು,

೪. ಶಬ್ದ ಸೋಪಾನ,೫. ಸಿದ್ದಯ್ಯ ಪುರಾಣಿಕರ ಮಕ್ಕಳ ಸಾಹಿತ್ಯ,೬. ಕಾವ್ಯತೀರ್ಥ,೭. ಕಾಗಿಣಾ,೮. ಸಂತೃಪ್ತಿ

೯. ಬಿಸಿಲ ನಾಡಿನ ಬುಗ್ಗೆಗಳು,೧೦. ಕಾಲೇಜು ಪತ್ರಿಕೆ ಹೀಗೆ ಹಲವು ಸಂಪಾದನೆಯನ್ನು ಮಾಡಿ ತಮ್ಮ ಸಾಮಥ್ರ್ಯ ತೋರಿದ್ದಾರೆ‌

ಸಂದ ಪ್ರಶಸ್ತಿ ಗೌರವ ಮತ್ತು ಕನ್ನಡ ಸೇವೆ;

ಅಂತರಾರಾಷ್ಟ್ರೀಯ ಪ್ರಶಸ್ತಿ : ಇಂಗ್ಲೆಂಡಿನ ವಾಚನಾಲಯದಿಂದ ,ಸಾಹಿತ್ಯ ವಿಮರ್ಶಾ ಪ್ರಶಸ್ತಿ : ಕರ್ನಾಟಕ ಸಾಹಿತ್ಯ ಅಕೆಡಮಿ, ಬೆಂಗಳೂರು

ಕಾಯಕ ಸಮ್ಮಾನ ಪ್ರಶಸ್ತಿ : ಉದಯೋನ್ಮುಖ ಲೇಖಕರ ಬಳಗ, ಕಲಬುರಗಿ,ಅಕ್ಷರಲೋಕದ ನಕ್ಷತ್ರ : ಸಿರಿಗನ್ನಡ ಪ್ರಕಾಶನ ಗುರುಮಠಕಲ್,ಸಂಕ್ರಮಣ ಸಾಹಿತ್ಯ ಸ್ಪರ್ಧೆ : ಬಹುಮಾನ, ಕಲಬುರ್ಗಿ ಆಕಾಶವಾಣಿಯಿಂದ ಕವನ, ಭಾಷಣ, ಚಿಂತನ, ಪ್ರಸಾರವಾಗುತ್ತಲೇ ಇವೆ. ದೂರದರ್ಶನದಿಂದಲೂ ಸಂದರ್ಶನ ಪ್ರಸಾರವಾಗಿವೆ. ನಾಡಿನ ಎಲ್ಲ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ಕಮ್ಮಟ, ಶಿಬಿರ, ಸಮ್ಮೇಳನ, ಸಂವಾದಗಳಲ್ಲಿ ಪಾಲುಗೊಂಡಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಸಂಘದ ಆಜೀವ ಸದಸ್ಯತ್ವ ಪಡೆದಿದ್ದಾರೆ. ಒಂಬತ್ತು ವರ್ಷ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮತ್ತು ಕನ್ನಡ ಅಧ್ಯಯನ ವಿಚಾರ ವೇದಿಕೆ ಕಾರ್ಯದರ್ಶಿ ಆಗಿ‌ ಕೆಲಸ ನಿರ್ವಹಣೆ.

     ಶೀಲ,ಚಾರಿತ್ರ್ಯ,ಸುಸಂಸ್ಕೃತದಿಂದ ಇತರರಿಗೆ ಕೆಟ್ಟದ್ದನ್ನು ಬಯಸದೇ ಸದಾ ಒಳ್ಳೆಯ ಗುಣ ರೂಢಿಸಿಕೊಂಡು ಬಂದವರು.ಯಾವ ದ್ವೇಷ,ಅಸೂಯೆ ಇಲ್ಲದೇ ತಮ್ಮದೇ ಆದ ಲೋಕದಲ್ಲಿ ಇರುವವರು.ಯಾವ ಪ್ರಶಸ್ತಿ, ಪುರಸ್ಕಾರ, ಆ ಖುರ್ಚಿ; ಈ ಖುರ್ಚಿಗೆ ಬಡಿದಾಡದೇ ಯಾರಿಗೂ ಏನನ್ನು ಬೇಡದೇ; ಸಾಧ್ಯವಾದ ಷ್ಟು ಸಹಾಯ ಮಾಡುವ ಗುಣ ಅವರಲ್ಲಿದೆ.ಅವರು ಮೊದಮೊದಲು ಎಲ್ಲರನ್ನು ಟೀಕಿಸುವ,ವ್ಯಂಗ್ಯ, ವಿಡಂಬನೆ ಮೂಲಕ ತಿವಿಯುವುದು ಒಳ್ಳೆಯ ಕಾರ್ಯಕ್ಕೆ; ಎಂದೂ ಕೆಟ್ಟದ್ದನ್ನು ಮಾಡ ಬಯಸದ ಮನುಷ್ಯ.

ಇಂದಿನ ಜಾತಿಯತೆ,ರಾಜಕೀಯ, ಅಸಮಾನತೆ,ಶೋಷಣೆ, ಅರಾಜಕತೆ,ಭ್ರಷ್ಟಾಚಾರ, ಅನೀತಿ,ಧರ್ಮ-ಧರ್ಮದ ನಡು ವಿನ ಬಿರಕು,ಯಾವುದಕ್ಕೂ ತಾಳ್ಮೆ, ಸಹನೆ ಇಲ್ಲದ ಇವರಿಂದ ಅವರಿಂದ ಏನು ಲಾಭ ಎಂಬ ಲೆಖ್ಖಾಚಾರದಲ್ಲಿ ಮುಳುಗಿದ ಸಾಹಿತಿ,ಪ್ರಾಧ್ಯಾಪಕರು ತಮ್ಮತನ ಕಳೆದುಕೊಂಡು ಜೀವಿಸುತ್ತಿರುವವರ ಕಂಡು ಗಾವುದ ಗಾವುದ ದೂರ ಉಳಿದು ತಮ್ಮತನದ ವಿಶಿಷ್ಟವಾದ ವ್ಯಕ್ತಿತ್ವ ರೂಪಿಸಿಕೊಂಡ ಅನನ್ಯ ಸಾಧಕ ಸಾಹಿತಿ.

ಲೇಖಕರು: ಡಾ.ಗವಿಸಿದ್ಧಪ್ಪ ಎಚ್.ಪಾಟೀಲ, ಸಾಹಿತಿ,ಕಲಬುರಗಿ

(ದಿನಾಂಕ: ೨೬-೧೦- ೨೦೨೫ ರಂದು ಸಾಹಿತಿ ಪ್ರೊ.ರವೀಂದ್ರ ಕರ್ಜಗಿ ಬದುಕು- ಬರಹ ವಿಚಾರ ಸಂಕಿರಣ ನಿಮಿತ್ಯ ಲೇಖನ)