ಜಾತಿ ಗಣತಿಯಲ್ಲಿ ಮಾದಿಗ ಎಂದೇ ನಮೂದಿಸಿ: ಕಟ್ಟಿಮನಿ ಸಲಹೆ

ಜಾತಿ ಗಣತಿಯಲ್ಲಿ ಮಾದಿಗ ಎಂದೇ ನಮೂದಿಸಿ: ಕಟ್ಟಿಮನಿ ಸಲಹೆ
ಕಲಬುರಗಿ: ‘ಸಮುದಾಯದ ಕೆಲವರಿಗೆ ಒಳ ಮೀಸಲಾತಿ ಬೇಕು, ಸೌಲಭ್ಯ ಬೇಕು. ಆದರೆ ಜಾತಿ ಹೆಸರು ಹೇಳಲು ಆಗಲ್ಲ. ಉಪಜಾತಿಗಳ ಗಣತಿಗೆ ಬಂದಾಗ ಮಾದಿಗ ಎಂದು ಜಾತಿ ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸಿದ್ದಲಿಂಗ ಸಿ ಕಟ್ಟಿಮನಿ ಹೇಳಿದರು.
ಕಾಳಗಿ ತಾಲೂಕಿನ ವಚ್ಚಾ ಗ್ರಾಮದಲ್ಲಿ 2025 ರ ಸಾಮಾಜಿಕ ಶೈಕ್ಷಣಿಕ ಜಾತಿ ಸಮೀಕ್ಷೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮಾದಿಗರ ಸಂಖ್ಯೆ ಹೆಚ್ಚಿದೆ. ನಮ್ಮ ಮಕ್ಕಳಿಗೆ ಮೂಲಭೂತ ಸೌಲಭ್ಯ, ಅವಕಾಶ ಸಿಗಲು ನಾವು ಹೋರಾಟ ನಡೆಸಬೇಕು. ಜಾತಿಗಣತಿ ವರದಿಯಲ್ಲಿ ಮಾದಿಗರ ಜನಸಂಖ್ಯೆ ಕೇವಲ ೧೯ ಲಕ್ಷ ಎಂದಿದೆ. ಈ ಬಗ್ಗೆ ಸಮುದಾಯದ ಮುಖಂಡರಿಗೆ ಮಾತನಾಡಲು ಧೈರ್ಯವಿಲ್ಲದಾಗಿದೆ ಎಂದರು.
ಹಿಂದೂಳಿದ ವರ್ಗಗಳ ಆಯೋಗ 2025ರ ಸಾಮಾಜಿಕ ಶೈಕ್ಷಣಿಕ ಜಾತಿ ಸಮೀಕ್ಷೆ ಗಣತಿಗಾಗಿ ಮನೆ ಮನೆಗಳಿಗೆ ಭೇಟಿ ನೀಡಿದಾಗ ಮೂಲ ಜಾತಿ ಮಾದಿಗ ಎಂದು ಬರೆಸುವ ಮೂಲಕ ಸರಿಯಾದ ಮಾಹಿತಿ ನೀಡಬೇಕೆಂದು ಹೇಳಿದರು.ಉಪ ಜಾತಿ ಹೆಸರು ಬರೆಸಬೇಡಿ ಎಂದರು.ರಾಜ್ಯದ ೧೫ ಜಿಲ್ಲೆಗಳಲ್ಲಿ ಈ ರೀತಿಯ ಗೊಂದಲಗಳು ಇರುವುದರಿಂದಾಗಿ ಮುಂದಿನ ಎರಡು ತಿಂಗಳು ಸಂಬಂಧಿಸಿದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಮೂಲಕ ಮಾದಿಗ ಎಂದೇ ಬರೆಸಲು ಜನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಉಪ ಜಾತಿಗಳನ್ನು ಬರೆಸಬಾರದು. ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಮೀಸಲಾತಿ ಸೌಲಭ್ಯವನ್ನು ಕೊಡಿಸಿ ಉತ್ತಮ ಭವಿಷ್ಯ ಕಲ್ಪಿಸಬೇಕು ಎಂದು ಅವರು ತಿಳಿಸಿದರು.
ವಚ್ಚಾ ಗ್ರಾಮದ ಮಾದಿಗ ಸಮಾಜದ ಬಡಾವಣೆಗೆ ಭೇಟಿ ನೀಡಿದ ಸಮೀಕ್ಷೆದಾರರಾದ ಸಹ ಶಿಕ್ಷಕಿ ಶ್ರೀಮತಿ ಜಯಶ್ರೀ ದೇವಿ ಅವರು ಮಾದಿಗ ಸಮಾಜದ ಮನೆ, ಮನೆಗೆ ತೆರಳಿ ಸಮೀಕ್ಷೆ ನಡೆಸಿದರು.ಈ ವೇಳೆ ಕರ್ನಾಟಕ ರಾಜ್ಯ ಮಾದಿಗ ಸಮಾಜ ಸಂಘಟನೆಯ ಸಾರಥ್ಯದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಜಾತಿ ಕಾಲಂನಲ್ಲಿ, ಹಿಂದೂ ಮಾದಿಗ ಎಂದು ಬರೆಸಲಾಯಿತು. ಈ ಸಂದರ್ಭದಲ್ಲಿ ಮಾದಿಗ ಸಮಾಜದ ಯುವ ಮುಖಂಡರಾದ ಸಾಗರ ಶೆಳ್ಳಗಿ, ಚನ್ನಪ್ಪ ಕಟ್ಟಿಮನಿ,ಹುಸನಪ್ಪ ಕಟ್ಟಿಮನಿ ಹಾಗೂ ಮಾದಿಗ ಸಮಾಜದರು ಉಪಸ್ಥಿತರಿದ್ದರು .