ಹೃದಯ ಜೋಪಾನಕ್ಕೆ ಆದ್ಯತೆ ಕೊಡಿ: ಡಾ. ಅರುಣ್ ಹರಿದಾಸ್
ಹೃದಯ ಜೋಪಾನಕ್ಕೆ ಆದ್ಯತೆ ಕೊಡಿ: ಡಾ. ಅರುಣ್ ಹರಿದಾಸ್
ವಿಶ್ವ ಹೃದಯ ದಿನದಂಗವಾಗಿ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ
ಕಲಬುರಗಿ: ಪ್ರಸಕ್ತ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಕಿರಿಯರಿಂದ ಹಿರಿಯರವರೆಗೂ ಹೃದಯಾಘಾತ ಸಂಭವಿಸುತ್ತಿರುವುದರಿಂದ ಹೃದಯದ ಜೋಪಾನ ತುರ್ತು ಅಗತ್ಯ ಎಂದು ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹೃದ್ರೋಗ ವಿಭಾಗದ ಮುಖ್ಯಸ್ಥರಾದ ಖ್ಯಾತ ಹೃದ್ರೋಗ ತಜ್ಞ ಡಾ. ಅರುಣ್ ಕುಮಾರ್ ಹರಿದಾಸ್ ತಿಳಿಸಿದ್ದಾರೆ.
ಕಲಬುರಗಿಯ ಹರಿದಾಸ್ ಹಾರ್ಟ್ ಆಸ್ಪತ್ರೆಯಲ್ಲಿ ಸೆ. 29ರಂದು ಸೋಮವಾರ ವಿಶ್ವ ಹೃದ್ರೋಗ ದಿನದ ಅಂಗವಾಗಿ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ ವಿಶ್ವ ಹೃದಯ ದಿನದಲ್ಲಿ "ಹೃದಯ ಬಡಿತವನ್ನು ತಪ್ಪಿಸದಿರಿ" ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಘೋಷ ವಾಕ್ಯದಂತೆ ಹೃದಯದ ಆರೋಗ್ಯವನ್ನು ಜೋಪಾನವಾಗಿಡಲು ಹೆಚ್ಚಿನ ಕಾಳಜಿ ವಹಿಸಬೇಕು ಅನಿಯಮಿತ ಆಹಾರ ಕ್ರಮ, ಹಾದಿ ತಪ್ಪಿದ ಜೀವನ ಶೈಲಿ, ಚಟುವಟಿಕೆ ರಹಿತ ಬದುಕು, ಧೂಮಪಾನ, ಮದ್ಯಪಾನ ಮಾದಕ ವ್ಯಸನ ,ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮನೆಯ ಊಟ ಸೇವಿಸದಿರುವುದು, ಒತ್ತಡದ ಬದುಕು ಮಾಡುವುದು ಮುಂತಾದ ಕಾರಣಗಳಿಂದಾಗಿ ಜಗತ್ತಿನಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಹೃದಯ ಕಾಯಿಲೆ ಹೆಚ್ಚಾಗುತ್ತಿರುವುದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಪ್ರತಿಯೊಬ್ಬರು ಹೃದಯದ ಪರೀಕ್ಷೆ ಮಾಡಿಸಿ ಮುಂಜಾಗ್ರತಾ ಕ್ರಮ ವಹಿಸಿಕೊಳ್ಳುವುದು ಅತ್ಯಂತ ಒಳ್ಳೆಯದು ಎಂದು ಹೇಳಿದರು.
ಖ್ಯಾತ ಗುತ್ತಿಗೆದಾರರಾದ ಕುಪೇಂದ್ರ ಗುತ್ತೇದಾರ್ ನಾಗೂರ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಹೃದಯ ಕಾಯಿಲೆಯ ಬಗ್ಗೆ ಅತಿಯಾದ ತಪ್ಪು ಕಲ್ಪನೆಗಳಿದ್ದು ಪರಿಣತ ವೈದ್ಯರಿಂದ ನೈಜ ಮಾಹಿತಿ ಪಡೆದು ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವ ತಪ್ಪು ಮಾಹಿತಿಗಳಿಂದ ಜನರು ಮೋಸ ಹೋಗುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಾಗಿರಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮಾತನಾಡಿ ಆರೋಗ್ಯ ಕಾಪಾಡುವ ಹೆಸರಿನಲ್ಲಿ ಅತಿಯಾದ ವ್ಯಾಯಾಮ, ಜಿಮ್ ಮಾಡುವುದು, ತಾಸುಗಟ್ಟಲೆ ನಡಿಗೆ ಮಾಡುವುದರಿಂದ ವ್ಯಾಯಾಮ ಸಾಧ್ಯ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ದೂರವಾಗಿ ಉತ್ತಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಮತ್ತು ಸೂಕ್ತ ವ್ಯಾಯಾಮ ಯೋಗ ಅನುಸರಿಸುವುದರಿಂದ ಹೃದಯದ ಆರೋಗ್ಯ ಕಾಪಾಡಬಹುದು ಎಂದು ಹೇಳಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶ್ವಾಸಕೋಶ ತಜ್ಞರಾದ ಡಾ .ಹರ್ಷ ಮೂರ್ತಿ, ಡಾ. ರೇವಂತ್ ಸರಸಂಬಿ ಶಿಬಿರದಲ್ಲಿ ಭಾಗವಹಿಸಿದವರ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಕೋಮಲೇಶ್ವರಿ ಹರಿದಾಸ್, ಉದ್ಯಮಿಗಳಾದ ವೆಂಕಟೇಶ ಕಡೇಚೂರ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ರಾಜೇಶ್ ದತ್ತು ಗುತ್ತೇದಾರ್, ಸುನಿಲ್ ಕುಮಾರ್ ಶೆಟ್ಟಿ, ಪ್ರಭಾಕರ ಉಪಾಧ್ಯಾಯ, ಸುಜಿತ್ ಶೆಟ್ಟಿ, ಶಿವಯೋಗಿ ಹರಿದಾಸ್, ಡಾ. ಬಸವರಾಜ್, ಪವನ್, ಆರ್ಯನ್ ಶಂಕರ್ ಮತ್ತಿತರು ಭಾಗವಹಿಸಿದ್ದರು. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು200 ಹೆಚ್ಚು ಜನರು ಭಾಗವಹಿಸಿ ತಪಾಸಣೆಗೊಳಗಾದರು.