ನಿಜಗುರು ನಿರಾಲಂಬಪ್ರಭುವೆ ಅನಾಮಿಕ ಶರಣ

ನಿಜಗುರು ನಿರಾಲಂಬಪ್ರಭುವೆ ಅನಾಮಿಕ ಶರಣ
ಗುರುಕರುಣದಿಂದಾದ ಬಾಲ್ಯತ್ವ ಯೌವನ ವೃದ್ಧತ್ವವನ್ನು ಕಾಲ ಕಾಲಾಂತರದಲ್ಲಿ ಶೀಲ ವ್ರತನೇಮವಿಲ್ಲದೆ ಆದಿಬೀಜಾಕ್ಷರ ಮೂಲ ಮಂತ್ರಮಂ ಕೇವಲ ಪರಬ್ರಹ್ಮವಸ್ತುವೆಂದು ನಂಬುಗೆಯಿಲ್ಲದ ಕಾರಣ, ಆದಿ ವ್ಯಾಧಿ ವಿಪತ್ತು ರೋಗರುಜಿನಾದಿಗಳಿಂದ ಶಿವಧೋ ಶಿವಧೋ ಎಂದು ಮೊರೆಯಿಡಲು,
ಕಾಲಾಂತರನೆಂಬ ಯಮಧರ್ಮನ ಹಲವು ದುರ್ಗುಣವೆಲ್ಲ ಹೊಲಗೇರಿಯಲ್ಲಿ ಬಲೆಯನ್ನು ಹಾಕಿಹೆನೆಂದು ಹೆಸರಿಟ್ಟು ಕರೆಯಲು,
ಆ ಕಲಿ ಗಣನಾಥನ ಲೀಲಾಮೋದದಿಂದ
ಐಶ್ವರ್ಯಮಂಬಟ್ಟು ಶೂಲಪಾಣಿಗೆ ತ್ರಿವಿಧಾ ವಸ್ಥೆಗಳನ್ನು ಮೇಲಣ ಪರಿಣಾರ್ಥಮಂ ತಿಳಿಸಿಕೊಟ್ಟ, ಆಮೇಲೆ ನಾಲ್ವರು ಗೆಳೆಯ ಬಾಂಧವರು ಬಯಲುಭಾವ ಚಿತ್‍ಸ್ವರೂಪರಾಗಿ ಧರ್ಮದ ಮಾರ್ಗದ ಲೀಲೆ,
ಅಧರ್ಮವೆ ಕುಟಿಲ, ಸ್ವಧರ್ಮವೆ ಛಲ. ಸದಾ ಧರ್ಮದ ಮೂಲಮಂತ್ರವೆ ಅನುಕೂಲ. ಅನುಸಾರ ಅತಿಚಮತ್ಕಾರದಿಂದ ಕಾಲ ಭೈರವಿ ಯೆಂಬ ಶಕ್ತಿಸಾವನ ಕೂಡಿ, ನಲಿನಲಿದಾಡುತ ಕೀಲು ಮೇಲಾಗಿ ಬಾಲಭಾಷೆಗಳಿಂದ ನಾಲ್ಕರ ಅರ್ಥ ಪ್ರಾಣ ಅಭಿಮಾನಮಂ ಕಳೆದುಕೊಂಡಾತ ನೀನಲ್ಲ (ವೆ), ನಿಜಗುರು ನಿರಾಲಂಬಪ್ರಭುವೆ.
ನಿಜಗುರು ನಿರಾಲಂಬಪ್ರಭುವೆ ಅನಾಮಿಕ ಶರಣ
ವಚನ ಅನುಸಂಧಾನ
ಅಪ್ಪಬಸವಾದಿ ಶರಣರ ಅರಿವು ಆಚರಣೆಯ ಅನುಭಾವದ ಪರಿಣಾಮದಿಂದಾಗಿ ಸಮಾಜೋ ಧಾರ್ಮಿಕ ನೆಲೆಯಲ್ಲಿ ಆದಂತಹ ಕ್ರಾಂತಿಕಾರಿ ಬದಲಾವಣೆಯು ಲೌಕಿಕ ಮತ್ತು ಪಾರಮಾರ್ಥಿಕ ಬದುಕಿನಲ್ಲಿ ತಂದಂಥಾ ಹೊಸತನದ ಚಿಂತನೆಗಳ ಜೊತೆಗೆ ಸಾಹಿತ್ಯಿಕ ಮೌಲ್ಯದ ಸಂವೇದನೆ ಜೊತೆ ಗೂಡಿ, ಬದುಕಿನ ಅನೇಕ ರಂಗಗಳಲ್ಲೂ ಹೊಸ ಚಿಂತನೆಯ ಗಾಳಿ ಬೀಸಿ ಬೆಳಕು ಮೂಡಿಬಂದು ಆ ಕಾಲಘಟ್ಟದ ಜನರ ಜೀವನ ಕ್ರಮದಲ್ಲೊಂದು ಬದಲಾವಣೆ ಬಂದು, ಅಪ್ಪ ಬಸವಾದಿ ಶರಣರ ಬಗ್ಗೆ ಒಟ್ಟಾರೆ ಆಗಿನ ಜನಮಾನಸದಲ್ಲೊಂದು ನವೀನ ಪರ್ಯಾಯ ವ್ಯವಸ್ಥೆಯನ್ನು ಕೊಟ್ಟಂಥ ಕಾರಣಕ್ಕೆ ಶರಣರ ಕುರಿತು ಗೌರವಾದರದ ಅಭಿ ಮಾನ ಇಮ್ಮಡಿ ಮುಮ್ಮಡಿಯಾಗಿ ನೂರ್ಮಡಿಸಿ ದ್ದರಿಂದ ಪಟ್ಟಭದ್ರರು ಅದರಲ್ಲೂ ವಿಶೇಷವಾಗಿ ಶ್ರೇಷ್ಠತೆಯ ವ್ಯಸನಿಗಳು ಮೇಲರಿಮೆಯ ಕುಟಿಲ ಕಾರಸ್ಥಾನಿಗಳೂ ಆಗಿದ್ದ(ಹಾರ)ವರು ಮುಖ್ಯತಃ ರಾಜನನ್ನೂ ತಮ್ಮ ನುಡಿ ಅಡಿಯಾಳಾಗಿಸಿ ಮೆರೆ ಯುತ್ತಿದ್ದ ಕರ್ಮಠರು ಅಪ್ಪ ಬಸವಣ್ಣನ ಕಾರ್ಯ ಸಾಧನೆಗಳನ್ನು ವಿರೋಧಿಸಿ, ರಾಜನನ್ನೂ ತಮ್ಮ ಭಾವ ವಲಯದಲ್ಲಿ ಕಟ್ಟಿಹಾಕಿ ಶರಣರು ಕಟ್ಟಿದ ಕಲ್ಯಾಣಕ್ಕೇ ಕೊಳ್ಳಿ ಇಡುವ ಮೂಲಕ ಶರಣರನ್ನು ಮತ್ತು ಅವರು ರಚಿಸಿದ ವಚನ ಸಾಹಿತ್ಯವನ್ನೂ ಸುಟ್ಟು ನಾಶಮಾಡಲು ಪಣತೊಟ್ಟು ಕಂಡಾಪಟಿ ಯಶಸ್ಸು ಸಾಧಿಸಿದ ಕಾರಣದಿಂದ ಬಹುಪಾಲು ವಚನಗಳನ್ನು ಸುಟ್ಟು ಬಹಳಷ್ಟು ಶರಣರನ್ನೂ ಕೊಲ್ಲಿಸಿ, ಅಪ್ಪ ಬಸವಣ್ಣ ಕಟ್ಟಿದ ಲಿಂಗಾಯತ ಧರ್ಮದ ಸರ್ವನಾಶವನ್ನ ಮಾಡಿದ ಖುಷಿಯನ್ನು ಆನಂದಿಸಿದ್ದು ಆ ಕರಾಳ ಚರಿತ್ರೆಯ ಕ್ರೌರ್ಯದ ಕಥೆಯೇ ಆಗಿದೆ. ಹೀಗೆ ಶತ ಶತಮಾನಗಳ ಕಾಲ ಕಾಲಗರ್ಭದಲ್ಲಿದ್ದೂ ತನ್ನ ಅಸ್ತಿತ್ವವ ಅಳಿಯದೇ ಉಳಿಸಿಕೊಂಡು ಬಂದಿರುವ ಶರಣರ ಚಾರಿತ್ರಿಕ ವಚನಗಳು ಚಿಚ್ಯಾರಿತ್ರ್ಯದ ಅತ್ಯದ್ಭುತ ಚರಿತ್ರೆಯ ಚಿತ್ರಗಳಾಗಿವೆ.
ಹದಿನೈದನೇ ಶತಮಾನದಲ್ಲಿ ವಿರಕ್ತಮಠಮಾನ್ಯ ಗಳು ವಚನಗಳ ಪ್ರಭಾವಕ್ಕೆ ಒಳಗಾಗಿ, ಅವುಗಳ ನ್ನು ಉಳಿಸುವುದರ ಜೊತೆಗೆ ವಚನಗಳನ್ನೂ ರಚಿಸಿ ತಮ್ಮ ಅನುಭಾವಿಕ ಅನುಭೂತಿಯ ಅಭಿ ವ್ಯಕ್ತಿಯನ್ನ ಸಾಧಿಸಿದ್ರು. ಇಲ್ಲಿ ಅಂಥಹ ವಚನಗ ಳಲ್ಲಿ ಈ ಮೇಲಿನ ವಚನವೂ ಒಂದಾಗಿದೆ. ಇದರ ರಚನೆಕಾರ ಸ್ಪಷ್ಟವಾಗಿ ಇಂಥವರೇ ಎಂದು ತಿಳಿ ದು ಬಂದಿಲ್ಲ. ಈ ಅಂಕಿತದಲ್ಲಿನ ೪೧ ವಚನಗಳು ಲಭ್ಯವಾಗಿವೆ.
ಬಹುತೇಕ ಅಪ್ಪ ಬಸವಾದಿ ಶರಣರ ವಚನಗಳ ಸಂಕ್ಷಿಪ್ತತೆಯ ಶಕ್ತಿ ಪ್ರಸ್ತುತ ಈ ವಚನಕ್ಕೆ ಇಲ್ಲದೆ ಇದ್ರೂ ಸಹಿತ ಅವರ ವಚನಗಳ ಆಶಯವನ್ನು ಪ್ರಸ್ತುತ ಈ ವಚನದಲ್ಲಿ ಕಾಣಬಹುದಾಗಿದೆ.ಇದು ಒಂದು ಗುರು ಶಿಷ್ಯರ ನಡುವಿನ ಸಂವಾದ ರೂಪ ವಾಗಿದೆ. ಅರ್ಥಮಾಡಿಕೊಳ್ಳಲು ಇದನ್ನು ಇಲ್ಲಿ ಮೂರು ಭಾಗದಲ್ಲಿ ವಿಂಗಡನೆ ಮಾಡಿಕೊಂಡು ನೋಡಲಾಗಿದೆ.
*ಮೊದಲನೇ ಭಾಗದಲ್ಲಿ;* ಗುರು ಕಾರುಣ್ಯದಿಂದ ಜನ್ಮಪಡೆದು, ಬಾಲ್ಯ ಯೌವನ ಮುಪ್ಪು ಈ ಮೂರು ಅವಸ್ಥೆಗಳಲ್ಲಿ ಬದುಕಿದ ವ್ಯಕ್ತಿಯು ತನ್ನ ಜನ್ಮವು; ಓಂಕಾರ ಬೀಜ ಮಂತ್ರದ ನೆಲೆಯಲ್ಲಿ ಆದ ಬಗ್ಗೆ ಅರಿಯಲಾರದೆ, ಈ ಜನ್ಮದ ಜೊತೆಗೆ ಬಂದಂಥ ಮಲಗಳನ್ನು ಕಳೆದುಕೊಳ್ಳದೇ ರೋಗ ರುಜಿನದ ತುತ್ತಾದ ಮೇಲೆ; ಶಿವ ಶಿವಾ ಎಂದು ಮೊರೆಯನ್ನು ಇಡುವ ಒಂದು ಚಿತ್ರಣವಿದೆ.
*ಎರಡನೆ ಭಾಗದಲ್ಲಿ;* ಮಾನವ ಜನ್ಮದಲ್ಲಿ ಬಂದ ಕಾರಣ ತಿಳಿಸಿದ ಗುರುವಿನ ಉಪದೇಶ ಮಾರ್ಗ ದರ್ಶನದಲ್ಲಿ, ಕಾಲಾಂತರದಲ್ಲಿ ಮುತ್ತಿಗೆ ಹಾಕಿದ ಮಾಯಾಮಲಗಳನ್ನು ಶಿವಮಂತ್ರದ ಮೂಲಕ ಕಳೆದುಕೊಂಡಾಗ್ಯೂ ಚಿತ್ತಕ್ಕೆ ಮುತ್ತಿಗೆ ಹಾಕಿರುವ ಮನಸ್ಸು ಬುದ್ಧಿ ಭಾವ ಅಹಂಕಾರೆಂಬ ನಾಲ್ವರು ಗೆಳೆಯರನ್ನು ಹದ್ದುಬಸ್ತಿನಲ್ಲಿಟ್ಟುಕೊಂಡಿರುವಂಥ ಚಿತ್ರಣದ ಶರಣಮಾರ್ಗವಿಲ್ಲಿ ನಿರೂಪಗೊಂಡಿದೆ.
*ಮೂರನೆಯ* ಹಾಗೂ ಕೊನೆಯ ಭಾಗದಲ್ಲಿ; ಈ ನಾಲ್ವರೂ ಗೆಳೆಯರ ನಡೆ ನುಡಿಯ ಬಾಲ ಭಾಷೆ ಯನ್ನ ಕಡೆಗಣಿಸಿ, ಅವರಿಂದಲೂ ಶರಣಮಾರ್ಗಿ ಮುಕ್ತನಾಗಿ ಕೊನೆಗೆ *"ಆ ಜೀವನು ತಾನುತಾನಾಗಿ ಶಿವನಾಗೇ ಹೋದನು"* ಎನ್ನುವುದನ್ನು ಪ್ರಸ್ತುತ ವಚನವು ಇಲ್ಲಿ; *"ಅರಿದೊಡೆ ಶರಣ ಮರೆದೊಡೆ ಮಾನವ"* ಎಂಬ ಶರಣ ವಾಣಿಯ ಸತ್ಯವನ್ನೇ ಇಲ್ಲಿ ವ್ಯಕ್ತಿಯ ಬದುಕಿನ ಮೂರು ಮುಖ್ಯ ಹಂತ ದಲ್ಲಿನ ಬೆಳವಣಿಗೆಯ ಜೊತೆಗೆ ಶರಣ ಸಾಧನೆ ಯು ಸಾಧ್ಯವಾದಲ್ಲಿ *'ಇದೇ ಜನ್ಮ ಕಡೆ'* ಎನ್ನುವ ಶರಣರ ನಿಖರ ನುಡಿಗೆ ಸಾಕ್ಷಿಯಾಗಿ ಬೆಳಗುತ್ತಿದೆ ಈ ಅನಾಮಿಕ ಶರಣರ ವಚನ ಎಂದು ಪರಿಭಾವಿ ಸಿಕೊಂಡು ಹೇಳಬಹುದಾಗಿದೆ.
ಅಳಗುಂಡಿ ಅಂದಾನಯ್ಯ