ಪಿಡಬ್ಲ್ಯೂಡಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ: ಬಿಳವಾರ ಶಾಲೆ ಕಟ್ಟಡದ ಕಳಪೆ ಕಾಮಗಾರಿಗೆ ಕೆಆರ್‌ಎಸ್ ವಿರೋಧ

ಪಿಡಬ್ಲ್ಯೂಡಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ: ಬಿಳವಾರ ಶಾಲೆ ಕಟ್ಟಡದ ಕಳಪೆ ಕಾಮಗಾರಿಗೆ ಕೆಆರ್‌ಎಸ್ ವಿರೋಧ
ಬಿಳವಾರ, ಯಡ್ರಾಮಿ ತಾಲೂಕ: ಬಿಳವಾರ ಗ್ರಾಮದ ಹೊಸ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣವಾಗಿ ಕಳಪೆ ಮಟ್ಟದ ಕಾಮಗಾರಿಯಿಂದ ನಿರ್ಮಾಣಗೊಂಡಿದ್ದು, ಇದರಿಂದ ಶಾಲಾ ಮಕ್ಕಳ ಭದ್ರತೆಗೆ ಅಪಾಯವಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೂಡಲೇ ಸಂಬಂಧಪಟ್ಟ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿ ಗುಣಮಟ್ಟದ ಕಾಮಗಾರಿಯನ್ನು ನಡೆಸಬೇಕೆಂದು ಕೆಆರ್‌ಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ರಿಯಾಜ್ ಕೆ ಬಿಳವಾರ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಜೇವರ್ಗಿ ಪಿಡಬ್ಲ್ಯೂಡಿ ಕಚೇರಿಗೆ ಸಲ್ಲಿಸಲಾದ ಮನವಿ ಪತ್ರದಲ್ಲಿ, ಕಾಮಗಾರಿಯ ಗುಣಮಟ್ಟ ಪರಿಶೀಲಿಸದೇ ನಿರ್ಲಕ್ಷ್ಯ ಮಾಡಿದರೆ, ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಕಚೇರಿ ಮುಂದೆ ಮುತ್ತಿಗೆ ಹೂಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯದರ್ಶಿ ಸಿದ್ದು ಎಸ್ ಬಿಳವಾರ್ ಸಹ ಉಪಸ್ಥಿತರಿದ್ದರು.
"ಜನತೆಗಾಗಿ ಸರಕಾರಿ ಹಣವನ್ನು ಖರ್ಚು ಮಾಡಲಾಗುತ್ತಿದೆ. ಇಂತಹ ಕಳಪೆ ಕಾಮಗಾರಿಗಳಿಗೆ ಅನುಮತಿ ನೀಡುವುದು ಖಂಡನೀಯ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿ ಮಾಡಿಸಬೇಕು" ಎಂದು ರಿಯಾಜ್ ಕೆ ಬಿಳವಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದರು.
ವರದಿ: ಜೇಟ್ಟೆಪ್ಪ ಎಸ್ ಪೂಜಾರಿ