ಸೋಲು - ಗೆಲುವು ತಾತ್ಕಾಲಿಕ — ನಿಷ್ಠೆ ಮತ್ತು ಬದ್ಧತೆ ಶಾಶ್ವತ - ಡಾ. ರಾಜೇಂದ್ರ ಕೊಂಡಾ

ಸೋಲು - ಗೆಲುವು ತಾತ್ಕಾಲಿಕ — ನಿಷ್ಠೆ ಮತ್ತು ಬದ್ಧತೆ ಶಾಶ್ವತ - ಡಾ. ರಾಜೇಂದ್ರ ಕೊಂಡಾ
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಇಂದು ೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯ ಉದ್ಘಾಟನಾ ಸಮಾರಂಭ ಮಹಾವಿದ್ಯಾಲಯದ ಆವರಣದಲ್ಲಿ÷ಆಯೋಜಿಸಲಾಗಿತ್ತು.
ಈ ಸಮಾರಂಭಕ್ಕೆ ಉದ್ಘಾಟಕರಾಗಿ ಆಗಮಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಿಳಾ ಮಹಾವಿದ್ಯಾಲಯ, ಕಲಬುರಗಿಯ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ಸಸಿಗೆ ನೀರುಣಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಚುನಾವಣೆಗೆ ಚಾಲನೆ ನೀಡಿ ಎಲ್ಲಾ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ, ೧೯೬೫ ರಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕಲ್ಯಾಣ ಕರ್ನಾಟಕ ಪ್ರದೇಶದ ಅನೇಕ ವಿದ್ಯಾರ್ಥಿನಿಯರ ಸಾಧನೆಯ ಮೆಟ್ಟಿಲಾಗಿದೆ ಎಂದು ಮಾತನಾಡಿದರು. ಈ ಕಾಲೇಜು ವಿದ್ಯಾಭ್ಯಾಸ ನೀಡುವುದರ ಜೊತೆಗೆ ವಿದ್ಯಾರ್ಥಿ ಪ್ರಜಾಪ್ರಭುತ್ವ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸೂಕ್ತವಾದ ವೇದಿಕೆಯಾಗಿದೆ. ಇದರ ಸದುಪಯೋಗವನ್ನು ನೀವುಗಳೆಲ್ಲರು ಪಡೆದುಕೊಳ್ಳಬೇಕು. ಮುಂದುವರೆದು ಮಾತನಾಡುತ್ತಾ ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತದೆ. ಅದು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ನಡುವಿನ ಸಂಪರ್ಕ ಸೇತುವೆಯಾಗುತ್ತದೆ. ಈ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ನಾಯಕತ್ವ, ತಂಡದಲ್ಲಿ ಕೆಲಸ ಮಾಡುವ ಶಕ್ತಿ ಹಾಗೂ ಜವಾಬ್ದಾರಿಯ ಅರಿವು ಮೂಡುತ್ತದೆ. ಸ್ಪರ್ಧೆಯಲ್ಲಿ ನಿಲ್ಲುತ್ತಿರುವ ಎಲ್ಲ ಅಭ್ಯರ್ಥಿಗಳಿಗೂ ನಾನು ಹೇಳುವುದೆನೆಂದರೆ ನೈತಿಕತೆಯೊಂದಿಗೆ ಸ್ಪರ್ಧಿಸಿ, ಸೇವೆಯ ಗುರಿಯನ್ನು ಹೊಂದಿ, ನಿಮ್ಮ ನಡೆ-ನಡತೆಯಿಂದ ಇತರರಿಗೆ ಸ್ಪೂರ್ತಿಯಾಗಿರಿ. ಗೆಲುವು ಅಥವಾ ಸೋಲು ಎರಡೂ ತಾತ್ಕಾಲಿಕ—ಆದರೆ ನಿಮ್ಮ ನಿಷ್ಠೆ ಮತ್ತು ಬದ್ಧತೆ ಶಾಶ್ವತ. ಸೋಲು ಎನ್ನುವುದು ಯಶಸ್ಸಿಗೆ ದಾರಿ. ವೈಫಲ್ಯಕ್ಕೆ ಅಂಜಬಾರದು. ಜಗತ್ತಿನಲ್ಲಿ ಸೋಲಿನಿಂದ ಯಶಸ್ಸಿನತ್ತ ತಿರುಗಿದ ಹಲವಾರು ಪ್ರಮುಖ ವ್ಯಕ್ತಿಗಳನ್ನು ನಾವೆಲ್ಲರೂ ಇಂದಿನ ಯುಗದಲ್ಲಿ ನಾವು ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಮೋಹನರಾಜ ಪತ್ತಾರ ಅವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ೨೦೨೫–೨೬ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಕೇವಲ ಒಂದು ಚುನಾವಣೆ ಅಲ್ಲ ಡಾ. ಕೊಂಡಾ ಅವರು ಹೇಳಿರುವ ಹಾಗೆ ಇದು ವಿದ್ಯಾರ್ಥಿ ಪ್ರಜಾಪ್ರಭುತ್ವ, ನಾಯಕತ್ವ ಮತ್ತು ಜವಾಬ್ದಾರಿಯ ಹಬ್ಬವಾಗಿದೆ. ಪ್ರೀತಿಯ ವಿದ್ಯಾರ್ಥಿನಿಯರೆ — ನಿಮ್ಮ ಮತವನ್ನು ಜಾಣತನದಿಂದ ಉಪಯೋಗಿಸಿಕೊಳ್ಳಿ. ನಿಮ್ಮ ಮತವೇ ನಿಮ್ಮ ಧ್ವನಿ. ನೈತಿಕತೆಯುಳ್ಳ, ವಿದ್ಯಾರ್ಥಿಗಳ ಕಾಳಜಿಯ ವಿಷಯಗಳನ್ನು ಮುಂದಿಟ್ಟುಕೊಳ್ಳುವ, ಮಹಾವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸುವ ಅಭ್ಯರ್ಥಿಗಳನ್ನು ಆಯ್ಕೆಮಾಡಿ. ಈ ವರ್ಷದ ಚುನಾವಣೆ ನಿಷ್ಪಕ್ಷಪಾತ, ಪಾರದರ್ಶಕ ಮತ್ತು ಶಾಂತಿಯುತವಾಗಿರಲಿ. ಎಲ್ಲ ಅಭ್ಯರ್ಥಿಗಳಿಗೂ ನನ್ನ ಹಾರ್ದಿಕ ಶುಭಾಶಯಗಳು. ೨೦೨೫–೨೬ನೇ ಸಾಲಿನ ವಿದ್ಯಾರ್ಥಿ ಸಂಘವು ನಮ್ಮ ಸಂಸ್ಥೆಗೆ ಗೌರವ, ಐಕ್ಯತೆ ಮತ್ತು ಪ್ರಗತಿಯ ನಾಂದಿಯಾಗಲಿ ಎಂದು ಮಾತನಾಡಿದರು.
ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಗೋಣಿ ಬಸವರಾಜ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಚುನಾವಣೆಯ ಮುಖ್ಯ ಆಯುಕ್ತರಾದ ಡಾ. ನಯ£ತಾರ ಆಸ್ಪಲ್ಲಿ ಅವರು ಚುನಾವಣಾ ನಿಯಮಗಳನ್ನು ವಿದ್ಯಾರ್ಥಿನಿಯರಿಗೆ ತಿಳಿಸಿಕೊಟ್ಟು ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಜ್ಯೋತಿ ಪಾಟೀಲ, ಶ್ರೀಮತಿ ಅನಿತಾ ಪಾಟೀಲ, ಶ್ರೀಮತಿ ಸರೋಜಾ ಪಾಟೀಲ, ಶ್ರೀಮತಿ ಸಂತೋಷಿ ಕೆ, ಶ್ರೀಮತಿ ಪ್ರೀಯಾ ನಿಗ್ಗುಡಗಿ, ಶ್ರೀಮತಿ ಅಸ್ಮಿತಾ, ಶ್ರೀಮತಿ ಸುಮನ ಯಳವಾರ, ಕುಮಾರಿ. ಅನ್ನಪೂರ್ಣ, ಕುಮಾರಿ ಗಂಗಶ್ರೀ ಉಡಚಣ, ಶ್ರೀ ಕಿರಣಕುಮಾರ, ಬೋಧಕೇತರ ಸಿಬ್ಬಂದಿಗಳಾದ ಶ್ರೀಮತಿ ಜ್ಯೋತಿ ಕಲ್ಲೂರ, ಶ್ರೀಮತಿ. ಸುಚಿತಾ ಪಾಟೀಲ, ಶ್ರೀಮತಿ ಭಾಗ್ಯವತಿ, ಶ್ರೀಮತಿ ಜಯಶ್ರೀ ಎನ್, ಶ್ರೀಮತಿ ಅಂಬಿಕಾ, ಕುಮಾರಿ. ಸುನೀತಾ ಸ್ವಾಮಿ ಮತ್ತಿತರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು ಎಂದು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.