ಸಾಹಿತ್ಯ ಲೋಕದ ಸಿದ್ಧರಾಮ ಹೊನ್ಕಲ್ “ಶುಭೋದಯ ಕರ್ನಾಟಕ”ದ ವೇದಿಕೆಯಲ್ಲಿ

*"ಶುಭೋದಯ ಕರ್ನಾಟಕ" ದಲ್ಲಿ ನಿಮ್ಮ ಸಿದ್ಧರಾಮ ಹೊನ್ಕಲ್*
ಕಥೆ,ಕವನ, ಲಲಿತ ಪ್ರಬಂಧ, ಪ್ರವಾಸ ಕಥನ,ಗಜಲ್, ಹೈಕು, ಶಾಯಿರಿ,ಸಂಪಾದನೆ, ಸಂಶೋಧನೆ ಹೀಗೆ ಸಾಹಿತ್ಯದ ಬಹತೇಕ ಎಲ್ಲಾ ಪ್ರಕಾರಗಳಲ್ಲಿ ಇಲ್ಲಿಯವರೆಗೆ ಎಪ್ಪತ್ತಕ್ಕಿಂತ ಹೆಚ್ಚು ಮೌಲ್ವಿಕ ಸಾಹಿತ್ಯ ಕೃತಿಗಳನ್ನು ಕನ್ನಡದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಲೋಕಕ್ಕೆ ನೀಡಿ ನಾಡಿನ ಹೆಸರಾಂತ ಲೇಖಕರಲ್ಲಿ ಒಬ್ಬರಾದ ಡಾ.ಸಿದ್ಧರಾಮ ಹೊನ್ಕಲ್ ಅವರ ಇಲ್ಲಿಯವರೆಗಿನ ಒಟ್ಟು ಸಾಹಿತ್ಯ ಸಾಧನೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ದೂರದರ್ಶನ ಕೇಂದ್ರ ದಿನಾಂಕ ೪-೮-೨೦೨೫ ರಂದು ಸೋಮವಾರ ಬೆಳಿಗ್ಗೆ ಎಂಟು ಗಂಟೆಗೆ ಚಂದನದ *ಶುಭೋದಯ ಕರ್ನಾಟಕ* ದಲ್ಲಿ ಲೈವ್ ಆಗಿ ಸಂದರ್ಶನ ಪ್ರಸಾರ ಮಾಡಲಿದೆ.ಲೇಖಕ ರಾಜಶೇಖರ ರಾಮಸಾಗರ ಅವರು ದೂರದರ್ಶನದ ಪರವಾಗಿ ಸಂದರ್ಶನ ಮಾಡಲಿದ್ದಾರೆ.
ಹೈದರಾಬಾದ್ ಕರ್ನಾಟಕದ ಈಗಿನ ಕ.ಕ.ದ ಗ್ರಾಮೀಣ ಹಿನ್ನೆಲೆಯಿಂದ ಬಂದು ಜನಪದ ಸಾಹಿತ್ಯದ ಓದು ಹಾಗೂ ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದು ಜನಪದ ಜೀವನ ಶೈಲಿಯನ್ನು ಮೈಗೂಡಿಸಿಕೊಂಡು ತಮ್ಮ ಕಥೆ,ಲಲಿತ ಪ್ರಬಂಧ ಮುಂತಾದ ಬರಹಗಳನ್ನು ದಟ್ಟವಾದ ಗ್ರಾಮೀಣ ಜೀವನಾನುಭವದ ಹಿನ್ನೆಲೆಯಲ್ಲಿ ರಚಿಸಿರುವ ಸಿದ್ಧರಾಮ ಹೊನ್ಕಲ್ ಅವರು ದುಡಿಯುವ ಜನರ ಕಷ್ಟ ಕಾರ್ಪಣ್ಯಗಳನ್ನು ,ಗ್ರಾಮೀಣ ರೈತರ ಸಂಕಷ್ಟಗಳನ್ನು, ಅವರ ಮಾನವೀಯ ಮೌಲ್ಯಗಳನ್ನು ತಮ್ಮ ಅನೇಕ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಒಟ್ಟು ನಾಡಿನ ಹಾಗೂ ಹೊರನಾಡಿನ ಎಂಟು ವಿಶ್ವ ವಿದ್ಯಾಲಯಗಳಲ್ಲಿ ಇವರ ಹದಿನೈದು ಕೃತಿಗಳು ಪಠ್ಯ ಆಗಿವೆ. ಇವರ ಕಥೆಗಳ ಮೇಲೆ ಎಂ.ಫಿಲ್ ಅಧ್ಯಯನ, ಒಟ್ಟು ಸಾಹಿತ್ಯ ಬದುಕು ಬರಹದ ಮೇಲೆ ಇತರ ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪಡೆದಿದ್ದಾರೆ. ಅವರಿಗೆ ಪ್ರತಿಷ್ಠಿತ ಕರ್ನಾಟಕದ ಜಾನಪದ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಅವರ ಸಾಹಿತ್ಯ ಸಾಧನೆಗೆ ಗೌರವಿಸಿದ್ದು ಸಹ ಆಗಿದೆ. ಈಗ ದೂರದರ್ಶನದ ಈ ಸಂದರ್ಶನ ತುಂಬಾ ಸಂತೋಷ ದಾಯಕ ಎಂದು ನಾಡಿನ ಅನೇಕ ಲೇಖಕ ಮಿತ್ರರ ಅನಿಸಿಕೆ ಆಗಿದೆ.