ದಕ್ಷಿಣ ಭಾರತವನ್ನು ಸ್ವಾತಂತ್ರ್ಯಗೊಳಿಸಿದ ಬಹಮನಿ ಸಾಮ್ರಾಜ್ಯ

ದಕ್ಷಿಣ ಭಾರತವನ್ನು ಸ್ವಾತಂತ್ರ್ಯಗೊಳಿಸಿದ ಬಹಮನಿ ಸಾಮ್ರಾಜ್ಯ
ಕಲಬುರಗಿ: '1347 ಆಗಸ್ಟ್ 3 ರಲ್ಲಿ ಅಲ್ಲಾವುದ್ದೀನ್ ಹಸನ್ ಗಂಗೂ ಉತ್ತರದ ದೆಹಲಿ ಸುಲ್ತಾನರಿಂದ ಸ್ವತಂತ್ರ್ಯವಾಗಿ ಬಹಮನಿ ಸಾಮ್ರಾಜ್ಯವನ್ನು ಡೆಕ್ಕನ್ ನ (ದಕ್ಷಿಣ ಭಾರತದ ನೆಲೆಯಲ್ಲಿ) ಸ್ವತಂತ್ರ್ಯ ರಾಜ್ಯವಾಗಿಸಿದ್ದು ಒಂದರ್ಥದಲ್ಲಿ ಇದು ದಕ್ಷಿಣದ ಸ್ವಾತಂತ್ರ್ಯ ದಿನ, ಬಹಮನಿ ಸಾಮ್ರಾಜ್ಯ ಸ್ಥಾಪನೆಯಾದ ಈ ದಿನವನ್ನು ದಕ್ಷಿಣ ಭಾರತದ ಸ್ವಾತಂತ್ರ್ಯ ದಿನ ಎಂದು ಆಚರಿಸಬೇಕು' ಎಂದು ಲೇಖಕ, ಡಾ.ಅಂಬೇಡ್ಕರ್ ಕಾಲೇಜಿನ ಪ್ರಾಧ್ಯಾಪಕರಾದ ಅರುಣ್ ಜೋಳದಕೂಡ್ಲಿಗಿ ಅಭಿಪ್ರಾಯ ಪಟ್ಟರು.
ಕಲಬುರಗಿಯ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಮತ್ತು ಕಲಬುರಗಿಯ ವಿಭಾಗೀಯ ಪತ್ರಾಗಾರ ಕಛೇರಿ ಜಂಟಿಯಾಗಿ ಆಯೋಜಿಸಿದ್ದ 'ಬಹಮನಿ ಸಾಮ್ರಾಜ್ಯ: ಚರಿತ್ರೆ ಮತ್ತು ಸಂಸ್ಕೃತಿ' ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ.ಅರುಣ್ ಅವರು ಬಹಮನಿಗಳ ಕಾಲದ ಸೂಫಿಜಂ ಕುರಿತಂತೆ ಮಾತನಾಡಿದರು.
ಭಾರತದ ವಿಶ್ವವಿದ್ಯಾಲಯಗಳಲ್ಲಿ 1992 ರಲ್ಲಿ ಬಾಬರಿ ಮಸೀದಿ ದ್ವಂಸದ ನಂತರ ಸೂಫಿಗಳು ಮತ್ತು ಸೂಫಿಜಂ ಬಗ್ಗೆ ಅಧ್ಯಯನ ಸಂಶೋಧನೆಗಳು ಹೆಚ್ಚಾಗಿವೆ.
ಇದೊಂದು ಕುತೂಹಲಕಾರಿ ವಿಷಯ. ಕೋಮುದ್ವೇಶ ಹೆಚ್ಚುತ್ತಿರುವಾಗ ಕೋಮು ಸಾಮರಸ್ಯದ ಅದರಲ್ಲೂ ಪ್ರೇಮತತ್ವದ ಸೂಫಿಜಂ ಬಗೆಗಿನ ಅಧ್ಯಯನಗಳು ಹೆಚ್ಚುತ್ತಿರುವುದು ಸೂಫಿತತ್ವದ ಸಮಕಾಲೀನ ಮಹತ್ವವನ್ನು ಮನಗಾಣಿಸುತ್ತಿದೆ. ಯುಜಿಸಿಯ ಶೋಧಗಂಗಾ ಅಂತರ್ಜಾಲ ತಾಣದಲ್ಲಿ ಸಿಗುವಂತೆ ಒಂದು ಸಾವಿರಕ್ಕಿಂತ ಹೆಚ್ಚು ಸೂಫಿಗಳ ಬಗ್ಗೆ ಸಂಶೋಧನೆಗಳು ನಡೆದಿವೆ' ಎಂದು ಸೂಫಿಜಂ ಅಧ್ಯಯನದ ಮಹತ್ವವನ್ನು ವಿವರಿಸಿದರು.
ಇದೀಗ ಉತ್ತರ ಭಾರತದವರ ಜತೆ ದಕ್ಷಿಣದವರ ಸಂಘರ್ಷ ಚೂರು ದೊಡ್ಡ ದನಿಯಲ್ಲಿ ನಡೆಯುತ್ತಿದೆ. ಈ ಬಗೆಯ ಉತ್ತರ-ದಕ್ಷಿಣದ ಸಂಘರ್ಷದ ಬಹು ಹಳೆಯ/ಹಿಂದಿನ ಕುರುಹೆಂದರೆ ಬಹಮನಿ ಸಾಮ್ರಾಜ್ಯದ ಸ್ಥಾಪನೆ. ಸ್ವತಃ ಹಸನ್ ಗಂಗೂ ಸೂಫಿ ದೀಕ್ಷೆ ಪಡೆದಿದ್ದು, ಸೂಫಿ ಸಂತ ಷೇಕ್ ಶಿರಾಜುದ್ದೀನ್ ಅವರ ಮಾರ್ಗದರ್ಶನದಲ್ಲಿ ಬಹಮನಿ ಸಾಮ್ರಾಜ್ಯವನ್ನು ಸ್ಥಾಪಿಸಿದ. ಬಹಮನಿಗಳು ಆಳಿದ 1347 ರಿಂದ 1527 ರ ತನಕದ 200 ವರ್ಷದ ಆಳ್ವಿಕೆಯನ್ನು ಸೂಫಿ ಸಂತರು ಗಾಢವಾಗಿ ಪ್ರಭಾವಿಸಿದ್ದಾರೆ. ಅಂತೆಯೇ ಸೂಫಿಗಳ ಮಾರ್ಗದರ್ಶನದಂತೆ ನೂತನ ದೊರೆಗಳ ಪಟ್ಟಾಭಿಷೇಕವೂ ಆಗುತ್ತಿತ್ತು. ಹೆಚ್.ಕೆ.ಶೇರ್ವಾನಿ ಎನ್ನುವ ಇತಿಹಾಸ ತಜ್ಞರು ಬಹಮನಿಗೆ ಇರಾನ್ ಮೂಲದ ನೆಲೆಯನ್ನೂ ಗುರುತಿಸುತ್ತಾರೆ. ಹೀಗೆ ಬಹಮನಿ ಕಾಲದ ಸೂಫಿಗಳ ಬಗ್ಗೆ ಈಗಾಗಲೆ ಸಾಕಷ್ಟು ಅಧ್ಯಯನಗಳು ನಡೆದಿದ್ದರೂ ಸ್ಥಳೀಯ ಕೊಡುಕೊಳೆಗಳ ಬಗೆಗೆ ರಹಮತ್ ತರೀಕೆರೆಯವರು ಕರ್ನಾಟಕದ ಸೂಫಿಗಳು ಕೃತಿಯಲ್ಲಿ ಶೋಧಿಸಿದಂತೆ ಮತ್ತಷ್ಟು ಕೆಲಸ ಮಾಡುವ ಅಗತ್ಯವಿದೆ' ಎಂದು ವಿವರಿಸಿದರು.