ಕಾಖಂಡಕಿ ಯಲ್ಲಿ ಜಾತ್ರಾ ಸಂಭ್ರಮ. ತನಾರತಿ ಹರಕೆ ತೀರಿಸಿದ ಸಹಸ್ರಾರು ಭಕ್ತರು.

ಕಾಖಂಡಕಿ ಯಲ್ಲಿ ಜಾತ್ರಾ ಸಂಭ್ರಮ.  ತನಾರತಿ ಹರಕೆ ತೀರಿಸಿದ ಸಹಸ್ರಾರು ಭಕ್ತರು.

ಕಾಖಂಡಕಿ ಯಲ್ಲಿ ಜಾತ್ರಾ ಸಂಭ್ರಮ.

ತನಾರತಿ ಹರಕೆ ತೀರಿಸಿದ ಸಹಸ್ರಾರು ಭಕ್ತರು.

ನಾಡಿನ ವಿಶಿಷ್ಟ ಉತ್ಸವಗಳಲ್ಲಿ ಒಂದಾದ ತನಾರತಿ ಉತ್ಸವವು ಬಾದಮಿ ಅಮಾವಾಸ್ಯೆಯ ದಿನದಂದು ಯಡ್ರಾಮಿ ತಾಲ್ಲೂಕಿನ ಕಾಖಂಡಕಿ ಕ್ಷೇತ್ರದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಅತ್ಯಂತ ಭಕ್ತಿಭಾವದಿಂದ ನೆರವೇರಿತು.

ಸದ್ಗುರು ಮಲ್ಲಾರಾಧ್ಯರ ಹಾಗೂ ಕೋರಿಸಿದ್ಧೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಾಲವಾರ ಹಾಗೂ ಕಾಖಂಡಕಿ ಮಠಗಳ ಒಡೆಯರಾದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಉತ್ಸವದಲ್ಲಿ ನಾಡಿನ-ಪರನಾಡಿನ ಸಹಸ್ರಾರು ಸದ್ಭಕ್ತರು ಇಷ್ಟಾರ್ಥ ಪೂರೈಸಿದ ಮಹಾಗುರುವಿಗೆ ತನಾರತಿ ಹರಕೆ ತೀರಿಸಿ ಭಕ್ತಿ ಭಾವ ಮೆರೆದರು.

ಬುಧವಾರ ನಸುಕಿನ ಜಾವ ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಪಾರಂಪರಿಕ ವಿಶೇಷ ಪೋಷಾಕು ಧರಿಸಿ,ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಉತ್ಸವದ ನೇತೃತ್ವ ವಹಿಸಿ ಮುನ್ನಡೆಯುತ್ತಿದ್ದರೆ,ಹಿಂದೆ ಸಹಸ್ರಾರು ಭಕ್ತರು ವಿಶೇಷವಾಗಿ ತಯಾರಿಸಿದ ಪ್ರಣತೆಗಳಲ್ಲಿ ಜ್ಯೋತಿ ಪ್ರಜ್ವಲಿಸಿ ತಲೆಯ ಮೇಲೆ ಹೊತ್ತು ಶ್ರೀಮಠದ ಸುತ್ತಲೂ ಐದು ಪ್ರದಕ್ಷಿಣೆ ಹಾಕಿದರು.

ಉತ್ಸವದಲ್ಲಿ ವೇದಮಂತ್ರಗಳ ಪಠಣದ ಮಧ್ಯೆ ಪುರವಂತರ ಪುರುವಂತಿಕೆ,ಅಕ್ಕನ ಬಳಗ ಸೇರಿದಂತೆ ವಿವಿಧ ಭಜನಾ ಮೇಳಗಳು,ಭಾಜಾ - ಭಜಂತ್ರಿಗಳು ಪಾಲ್ಗೊಂಡು ತನಾರತಿಯ ವೈಭವ ಹಾಗೂ ಸಂಭ್ರಮವನ್ನು ಇಮ್ಮಡಿಗೊಳಿಸಿದವು. 

ತನಾರತಿ ಮಹೋತ್ಸವವು ನಾಲವಾರ ಮತ್ತುಅವರ ಕಾಖಂಡಕಿ ಮಠದ ಪಾರಂಪರಿಕ ಉತ್ಸವವಾಗಿದ್ದು,ಸುಮಾರು ಮುನ್ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ.

ನಾಲವಾರ ಶ್ರೀಮಠದಲ್ಲಿ ಅವರಾತ್ರಿ ಅಮಾವಾಸ್ಯೆ, ಅಕ್ಷಯತದಿಗೆ ಅಮಾವಾಸ್ಯೆ, ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ತನಾರತಿ ಉತ್ಸವ ನಡೆದರೆ,ಕಾಖಂಡಕಿ ಮಲ್ಲಾರಾಧ್ಯರ ಸುಕ್ಷೇತ್ರದಲ್ಲಿ ಬದಾಮಿ ಅಮಾವಾಸ್ಯೆ ಹಾಗೂ ಶಿವರಾತ್ರಿ ಅಮಾವಾಸ್ಯೆಯಂದು ನೆರವೇರುತ್ತದೆ.

ಮಠಕ್ಕೆ ಆಗಮಿಸುವ ಭಕ್ತರು ತಮ್ಮ ಕೋರಿಕೆಗಳ ಈಡೇರಿಕೆಗೆ ಸದ್ಗುರುವಿನ ಕರ್ತೃ ಗದ್ದುಗೆಯ ಮುಂದೆ ಹರಕೆ ಕಟ್ಟಿಕೊಳ್ಳುತ್ತಾರೆ.

ಗುರುಕೃಪೆಯಿಂದ ಅವರ ಇಷ್ಟಾರ್ಥಗಳು,ಕೋರಿಕೆಗಳು ಈಡೇರಿದ ನಂತರ ಭಕ್ತರು ತನಾರತಿ ಸೇವೆ ಸಲ್ಲಿಸಿ ಹರಕೆ ತೀರಿಸುವ ವಿಶಿಷ್ಟ ಸಂಪ್ರದಾಯವಿದೆ.

ಸದ್ಗುರು ಶ್ರೀ ಕೋರಿಸಿದ್ಧೇಶ್ವರರು ಹಾಗೂ ಸದ್ಗುರು ಮಲ್ಲಾರಾಧ್ಯರ ಕೃಪೆಯಿಂದ ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ದೊರೆತಿದ್ದು,ವಿವಾಹವಾಗದೇ ಇರುವವರಿಗೆ ಕಂಕಣ ಭಾಗ್ಯ ದೊರೆತಿದ್ದು,ಆಶ್ಚರ್ಯಕರ ರೀತಿಯಲ್ಲಿ ಮಹಾರೋಗಗಳ ನಿವಾರಣೆಯಾಗಿದ್ದು,ಆರ್ಥಿಕ ಸ್ವಾವಲಂಬನೆ ಹೊಂದಿದ್ದು,ಮಾನಸಿಕ ರೋಗದಿಂದ ವಿಮುಕ್ತಿ ಹೊಂದಿ ನೆಮ್ಮದಿ ಪಡೆದಿದ್ದು,ಕೌಟುಂಬಿಕ ಪ್ರಗತಿ ಸಾಧಿಸಿದ್ದು ಹೀಗೆ ಒಬ್ಬೊಬ್ಬ ಭಕ್ತರ ಬಾಳಲ್ಲಿ ಒಂದೊಂದು ರೋಚಕ ಘಟನೆಗಳು ನಡೆದಿರುವುದನ್ನು ತನಾರತಿ ಸಂದರ್ಭದಲ್ಲಿ ನಾವು ಪ್ರತ್ಯಕ್ಷವಾಗಿ ನೋಡಬಹುದು ಹಾಗೂ ಕೇಳಬಹುದಾಗಿದೆ.