ಕರ್ತವ್ಯ ನಿರತ ಸರಕಾರಿ ನೌಕರಸ್ಥನ ಮೇಲೆ ಹಲ್ಲೆ : ಪ್ರಕರಣ ದಾಖಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಪ್ರತಿಭಟನೆ ಮೇರೆವಣಿಗೆ

ಕರ್ತವ್ಯ ನಿರತ ಸರಕಾರಿ ನೌಕರಸ್ಥನ ಮೇಲೆ ಹಲ್ಲೆ : ಪ್ರಕರಣ ದಾಖಲು 

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಪ್ರತಿಭಟನೆ ಮೇರೆವಣಿಗೆ 

ಚಿಂಚೋಳಿ : ತಾಲೂಕಿನ ಶಾದಿಪೂರ ಗ್ರಾಮ ಪಂಚಾಯತಿಯ ಕರ್ತವ್ಯನಿರತ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಆಗಿರುವ ಹಲ್ಲೆಯನ್ನು ಖಂಡಿಸಿ, ತಾಲೂಕ ಪಂಚಾಯತ್ ಕಾರ್ಯಾಲಯದಿಂದ ತಹಸೀಲ್ ಕಛೇರಿ ವರಗೆ ಪ್ರತಿಭಟನೆ ಮೆರವಣಿಗೆ ನಡೆಸಿ, ತಹಸೀಲ್ದಾರ್ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿದರು. 

ಬಳಿಕ ಮಾತನಾಡಿದ ನೌಕರಸ್ಥರು, ಅಭಿವೃದ್ಧಿ ಅಧಿಕಾರಿ ಶ್ರೀಧರ ಜವರೇಗೌಡ ಅವರಿಗೆ ಆರೋಪಿ ವಾಲೋಜಿ ಅಣದು ರಾಠೋಡ್ ಫೋನ್ ಕರೆ ಮಾಡಿ ಅಸಂವಿಧಾನಿಕ ಪದ ಬಳಕೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಶಾದಿಪೂರ ಪಂಚಾಯತ್ ಪಿಡಿಓ ಮೇಲೆ ಹಲ್ಲೆ ನಡೆಸುತ್ತಿದ್ದೇನೆಂದು ಪೊಲೀಸರಿಗೆ ಕರೆ ಮಾಡಿ ಪಂಚಾಯತಿಗೆ ನುಗ್ಗಿ, ಪಂಚಾಯತ್ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರಕಾರಿ ನೌಕರ ಪಿಡಿಓ ಶ್ರೀಧರ ರವರ ಮೇಲೆ ಚಾಪ್ಲಾ ನಾಯಕ ತಾಂಡದ ಆರೋಪಿ ವಾಲೋಜಿ ಅಣದು ರಾಠೋಡ್ ಪಂಚಾಯತ್ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಕುರಿತು ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಿ, ಗುಂಡಾ ಕಾಯ್ದೆಗೆ ಒಳಪಡಿಸಿ, ಜಾರಿಗೊಳಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಿ ನೌಕರಸ್ಥರಿಗೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚಿಂಚೋಳಿ ತಾಲೂಕ ಶಾಖೆಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ್ ಪಾಲಾಮೂರ, ಅಧ್ಯಕ್ಷ ದೇವೀಂದ್ರಪ್ಪ ಹೋಳ್ಕರ್ ಅವರು ಸರಕಾರಕ್ಕೆ ಆಗ್ರಹಿಸಿದರಲ್ಲದೆ, ಕರ್ತವ್ಯನಿರತ ಸರಕಾರಿ ನೌಕರರ ಮೇಲಿನ ಹಲ್ಲೆಗೆ ಸೂಕ್ತ ರಕ್ಷಣೆಗೆ ಕಾಯ್ದೆ ರೂಪಿಸಿ ಜಾರಿಗೆ ತಂದು ಜೀವದ ಭಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರಸ್ಥರಿಗೆ ಧೈರ್ಯ ತುಂಬಬೇಕೆಂದು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ, ಆಗ್ರಹಿಸಿ, ಒತ್ತಾಯಿಸಿದರು. ನರೇಗಾ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ಅವರು ಮನವಿ ಪತ್ರ ಓದಿದರು. 

ಪ್ರತಿಭಟನೆಗೆ ಬೆಂಬಲಿಸಿ, ಅಖಿಲ ಭಾರತ ವೀರಶೈವ ಲಿಂಗಾಯತ ಸಭಾದ ತಾಲೂಕು ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ, ಸಂಘಟಕ ಗೋಪಾಲ ಗಾರಂಪಳ್ಳಿ, ಆರ್ ಡಿಪಿಆರ್ ನೌಕರ ಸಂಘದ ಅಧ್ಯಕ್ಷ ಪವನ ಮೇತ್ರಿ, ನಿರ್ದೇಶಕ ಜಗನ್ನಾಥರೆಡ್ಡಿ, ಪಿಡಿಓ ಮಲ್ಲಿಕಾರ್ಜುನ್ ಗಿರಿ ಅವರು ಮಾತನಾಡಿದರು. 

ಈ ಸಂಧರ್ಭದಲ್ಲಿ ಚಿಂಚೋಳಿ ತಾಲೂಕಿನ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ಪಿಡಿಓ, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಪಂಪ್ ಆಪರೇಟರಗಳು, ವಾಟರ್ ಮ್ಯಾನ್, ಕಂಪ್ಯೂಟರ್ ಆಪರೇಟರಗಳು ಪ್ರತಿಭಟನೆಯಲ್ಲಿ ಭಾಗವಹಿಸಿ, ಉಪಸ್ಥಿತರಿದ್ದರು.