ರೈತಸೇನೆ ಮುಖಂಡ ಕ್ಷಮೆಯಾಚನೆಗೆ ಆಗ್ರಹ

ರೈತಸೇನೆ ಮುಖಂಡ ಕ್ಷಮೆಯಾಚನೆಗೆ ಆಗ್ರಹ
ಕಲಬುರಗಿ: ಚಿಂಚೋಳಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಡಾ. ಆವಿನಾಶ ಜಾಧವ ಅವರ ಭಾವಚಿತ್ರ ಅಂಟಿಸಿ ಅಪಪ್ರಚಾರ ನಡೆಸಿರುವ ರೈತ ಸೇನೆ ಹಾಗೂ ರೈತ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣೆ ಕೂಡಲೇ ಕ್ಷೇತ್ರದ ಜನರಿಗೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಹಕಾರ ಪ್ರಕೋಷ್ಠದ ಜಿಲ್ಲಾ ಉಪಾಧ್ಯಕ್ಷ ಸಿದ್ದು ಮಾನಕರ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿಂಚೋಳಿ-ಕಾಳಗಿ ಕ್ಷೇತ್ರದ ಮತದಾರರ ಸಮಸ್ಯೆಗಳು, ಅಹವಾಲುಗಳಿಗೆ ಸ್ಪಂದಿಸುವ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕ ಡಾ. ಆವಿನಾಶ ಜಾಧವ ತಮ್ಮ ಕುಟುಂಬದ ಸದಸ್ಯರ ಅನಾರೋಗ್ಯವು ಲೆಕ್ಕಿಸದೆ ಸದನದಲ್ಲಿ ಸಕ್ರೀಯರಾಗಿ ಪಾಲ್ಗೊಂಡಿದ್ದಾರೆ. ಕಾಳಗಿ ತಾಲೂಕು ಕೇಂದ್ರಕ್ಕೆ ತಾಲೂಕು ಕಚೇರಿಗಳನ್ನು ತರಲು ಸರ್ಕಾರದ ಮಟ್ಟದಲ್ಲಿ ಹೋರಾಟ ಮುಂದುವರಿದಿದೆ. ಆದರೆ ಈ ಬಗ್ಗೆ ಶಾಸಕರ ಹಿಂದಿನ ಪರಿಶ್ರಮ, ಪ್ರಯತ್ನ ಗಮನಿಸದೆ ಬೇಕಾಬಿಟ್ಟಿಯಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ. ಇನ್ನು ತಾಂತ್ರಿಕ ಕಾರಣಗಳಿಂದ ಮೊಬೈಲ್ ಸಂಪರ್ಕಕ್ಕೆ ಸಿಗದಿರಬಹುದು. ರೈತರ ಸಮಸ್ಯೆಗಳೇನಿದ್ದರೂ ಸದನದ ಹೊರಗೆ ಮತ್ತು ಒಳಗೂ ಪ್ರಾಮಾಣಿಕವಾಗಿ ಹೋರಾಡಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಿರುತ್ತಾರೆ. ಕ್ಷೇತ್ರದ ಮತದಾರರು ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಸಿದ್ದು ಮನವಿ ಮಾಡಿದ್ದಾರೆ.