ಅಫಘಾತ ಪ್ರಮಾಣವನ್ನು ಶೇ. 15ರಷ್ಟು ಇಳಿಸುವ ಗುರಿ: ಪೊಲೀಷ್ ಕಮೀಷನರ್

ಅಫಘಾತ ಪ್ರಮಾಣವನ್ನು ಶೇ. 15ರಷ್ಟು ಇಳಿಸುವ ಗುರಿ: ಪೊಲೀಷ್ ಕಮೀಷನರ್
ಕಲಬುರಗಿ: ರಸ್ತೆ ಅಫಘಾತಗಳಲ್ಲಿ ಅಮೂಲ್ಯ ಜೀವಗಳು ಬಲಿಯಾಗುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕಲಬುರಗಿ ಪೊಲೀಸ್ ಕಮೀಷನರ್ ಶರಣಪ್ಪ ಎಸ್. ಡಿ, ನಗರದಲ್ಲಿ ಅಪಘಾತ ಪ್ರಮಾಣವನ್ನು ಕನಿಷ್ಠ ಶೇ.15ರಷ್ಟು ಕಡಿಮೆಗೊಳಿಸುವ ಗುರಿಯಿಟ್ಟುಕೊಂಡು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದರು.
ಗುರುವಾರ ನಗರದಲ್ಲಿ ಯುನೈಟೆಡ್ ಆಸ್ಪತ್ರೆಯ ಸಹಯೋಗದಲ್ಲಿ ಪೊಲೀಸ್ ಇಲಾಖೆಯು ಆಯೋಜಿಸಿದ್ದ 'ರಸ್ತೆ ಸುರಕ್ಷತಾ ನಡಿಗೆ'ಯ ನಂತರ ನಗರದ ಸರ್ದಾರ್ ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು 2024ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಫಘಾತಗಳ ಪ್ರಮಾಣ ಶೇಕಡ 5ರಷ್ಟು ಕಡಿಮೆಯಾಗಿದೆ ಎಂದರು.
“ಹಿಂದಿನ ವರ್ಷಕ್ಕೆ ಹೋಲಿಸಿದರೆ 2024ರಲ್ಲಿ ಅಫಘಾತಗಳ ಪ್ರಮಾಣ ಶೇಕಡ 5ರಷ್ಟು ಕಡಿಮೆಯಾಗಿದೆ. 2024ಕ್ಕೆ ಹೋಲಿಸಿದರೆ ಈ ವರ್ಷ ಅಫಘಾತಗಳ ಪ್ರಮಾಣವನ್ನು ಶೇಕಡ 15ರಷ್ಟು ಕಡಿಮೆ ಮಾಡುವ ಗುರಿಯಿಟ್ಟುಕೊಂಡಿದ್ದೇವೆ. ಇದು ಕೇವಲ ಪೊಲೀಸರಿಂದ ಮಾತ್ರವೇ ಆಗುವ ಕೆಲಸವಲ್ಲ. ಮುಖ್ಯವಾಗಿ ಸಾರ್ವಜನಿಕರು, ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಮಾತ್ರ ಅದು ಸಾಧ್ಯವಾಗುತ್ತದೆ,” ಎಂದು ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಬಗ್ಗೆ ಒತ್ತಿ ಹೇಳಿದರು.
ಅಫಘಾತ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ ಕಮೀಷನರ್ ನಗರದ ಪ್ರಮುಖ ಹಾಟ್ಸ್ಪಾ ಟ್ಗಗಳಲ್ಲಿ ಪೊಲೀಸ್ ಕಣ್ಗಾವಲನ್ನು ಹೆಚ್ಚಿಸಿ ವಾಹನ ಚಾಲಕರು, ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪರಿಪಾಲಿಸುವಂತೆ ಮಾಡಲಾಗುತ್ತಿದೆ ಎಂದರು.
“ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಯಾವ ಮುಲಾಜೂ ಇಲ್ಲದೇ ದಂಡವನ್ನು ವಿಧಿಸುತ್ತಿದ್ದೇವೆ. ಇತ್ತೀಚೆಗೆ ಇ-ಚಲನ್ ವ್ಯವಸ್ಥೆಯನ್ನೂ ಕೂಡ ಜಾರಿಗೊಳಿಸಿದ್ದು ಇದರ ಮೂಲಕವೇ ಕಳೆದ ಎರಡು ತಿಂಗಳಿನಲ್ಲಿ 7000 ಜನರಿಗೆ ದಂಡ ವಿಧಿಸಿದ್ದೇವೆ. ಕಳೆದ ಎರಡು ತಿಂಗಳಿನಲ್ಲಿ ಸುಮಾರು 10,000 ಸಂಚಾರ ನಿಯಮ ಉಲ್ಲಂಘನೆಯಾಗಿದ್ದು ಉಲ್ಲಂಘಿಸಿದ ವಾಹನ ಚಾಲಕರಿಂದ ಸುಮಾರು ರೂ. 55,00,000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರು ವಾಹನ ಚಲಾಯಿಸುವುದನ್ನು ತಡೆಯುವುದಕ್ಕಾಗಿ ವಿಶೇಷ ಅಭಿಯಾನವನ್ನೂ ನಡೆಸಿದ್ದೇವೆ,” ಎಂದು ಅವರು ಹೇಳಿದರು.
ಸಂಚಾರ ನಿಯಮ ಪಾಲನೆ ಮಹತ್ವವನ್ನು ತಿಳಿಸಿ ಹೇಳಿದ ಕಮೀಷನರ್ ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ಅಮೂಲ್ಯ ಜೀವಗಳು ಉಳಿಯುವುದು ಮಾತ್ರವಲ್ಲದೇ ಆ ಜೀವಗಳನ್ನು ನಂಬಿಕೊAಡು ಬದುಕುತ್ತಿರುವ ಕುಟುಂಬಳೂ ನೆಮ್ಮದಿಯಿಂದ ಬದುಕುತ್ತವೆ ಎಂದರು.
“ಕಲಬುರಗಿ ನಗರದಲ್ಲಿ ಈ ವರ್ಷ 25 ಮಾರಣಾಂತಿಕ ಅಫಘಾತಗಳು ಸಂಬವಿಸಿವೆ. ಅವುಗಳಲ್ಲಿ 10 ಅಫಘಾತಗಳು ಬೇಕಾಬಿಟ್ಟಿಯಾಗಿ ವಾಹನ ಚಲಾವಣೆ ಮಾಡಿದ್ದರಿಂದ ಆಗಿವೆ. ಸಂಚಾರ ನಿಯಮಗಳನ್ನು ಪಾಲಿಸಿದ್ದರೆ ಅಷ್ಟೂ ಜನರು ಬದುಕುಳಿಯುತ್ತಿದ್ದವು. ಅವರ ಕುಟುಂಬಗಳೂ ನೆಮ್ಮದಿಯಾಗಿ ಇರುತ್ತಿದ್ದವು. ಸಂಚಾರ ನಿಯಮಗಳನ್ನು ಪಾಲಿಸಿ ಎಂದು ನಾವೆಲ್ಲರೂ ಹೇಳುತ್ತೇವೆ. ಹೇಳುವುದು ಸುಲಭ. ಆದರೆ ನಾವು ಇತರರಿಗೆ ಹೇಳಿದ್ದನ್ನು ನಾವೂ ಪಾಲಿಸುವುದು ಮುಖ್ಯ. ಆಗ ಮಾತ್ರವೇ ನಮ್ಮ ಮಾತಿಗೆ ಬೆಲೆಯಿರುತ್ತದೆ. ಇತರರಿಗೆ ಬುದ್ದಿವಾದ ಹೇಳುವ ನೈತಿಕತೆ ಬರುತ್ತದೆ. ಬುದ್ದಿಹೇಳುವ ನಾವೇ ನಿಯಮ ಪಾಲನೆ ಮಾಡದೆ ಅಫಘಾತ ಮಾಡಿದರೆ ನಾವು ಇತರರಿಗೆ ಕೆಟ್ಟ ಉದಾಹರಣೆಗಳಾಗುತ್ತವೆ,” ಎಂದು ಅವರು ತಿಳಿಸಿದರು.
ಯುನೈಟೆಡ್ ಆಸ್ಪತ್ರೆಯ ಹಿರಿಯ ನರರೋಗತಜ್ಞ ಡಾ.ವಿನಯ್ ಸಾಗರ್ ಶರ್ಮ ಮಾತನಾಡಿ ಅಫಗಾತಗಳಲ್ಲಿ ಗಾಯಗೊಂಡು ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಿದ ಅನುಭವದ ಆಧಾರದಲ್ಲಿ ವಾಹನ ಚಾಲಕರಿಗೆ ಸಂಚಾರ ನಿಯಮ ಪಾಲನೆಯ ಕಿವಿಮಾತು ಹೇಳಿದರು.
“ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುವುದರಿಂದ ತಲೆಗೆ ಬಲವಾದ ಏಟು ಬಿದ್ದ ಗಾಯವಾಗುತ್ತದೆ. ಅಂತಹವರು ಬದುಕುಳಿಯುವುದು ಕಷ್ಟ. ಬದುಕಿದರೂ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸೀಟ್ ಬೆಲ್ಟ್ ಹಾಕಿಕೊಳ್ಳದೇ ಕಾರು ಚಾಲನೆ ಮಾಡುವುದಿರಿಂದ ಅಫಘಾತದ ಸಮಯದಲ್ಲಿ ಬೆನ್ನುಮೂಳೆಗೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಅಫಘಾತದಲ್ಲಿ ಗಾಯಗೊಂಡವರು ಅಥವಾ ಸತ್ತವರು ತಮ್ಮ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಿಬಿಡುತ್ತಾರೆ. ಹಾಗಾಗಿ ಎಲ್ಲರೂ ತಪ್ಪದೇ ಸಂಚಾರ ನಿಯಮಗಳನ್ನು ಪಾಲಿಸಿ,” ಎಂದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಯಾವುದೆ ಅಫಘಾತ ಮಾಡದೆ ಬಸ್ ಚಾಲನೆ ಮಾಡಿದ ಜಲಂದರ್ ಸುಲ್ತಾನಪುರ, ರಾಜಶೇಖರ ಕಲಶೆಟ್ಟಿ ಮತ್ತು ಈರಣ್ಣ ಅವರಿಗೆ ಪೊಲೀಸ್ ಕಮೀಷನರ್ ಪದಕ ವಿತರಣೆ ಮಾಡಿ ಗೌರವಿಸಿದರು.
ಅದೇ ರೀತಿಯಲ್ಲಿ ಸಾರ್ವಜನಿಕರ ದೂರುಗಳನ್ನು ನಿಭಾಯಿಸುವಲ್ಲಿ ಪ್ರಮಖ ಪಾತ್ರ ವಹಿಸಿದ ಪೊಲೀಸ್ ಕಾನ್ಸಟೇಬಲ್ಗವಳಾದ ದತ್ತಾತ್ರೆಯ, ಸಂತೋಷ್ ಕುಮಾರ್ ಮತ್ತು ಅಕ್ಬರ್ ಪಾಶ ಅವರಿಗೆ, ನಿಸ್ವಾರ್ಥವಾ ಸೇವೆಗೈದ ಪೌರಕಾರ್ಮಿಕರಾದ ಶರಣಪ್ಪ, ಅಂಬರೀಷ್, ಮತ್ತು ಮಾಪಣ್ಣ ಅವರಿಗೆ, ಅಂಬುಲೆನ್ಸ್ ಚಾಲಕರಾದ ಮಹೇಶ್ ಸರಡಗಿ, ನಾಗರಾಜ ಮತ್ತು ಪವನ್ ಕುಮಾರ್ ಅವರಿಗೆ, ಅಗ್ನಿಶಾಮಕ ಸಿಬ್ಬಂದಿಯಾದ ಅಂಕುಶ, ಲಕ್ಷ್ಮಣ ಮತ್ತು ರಮೇಶ್ ಅವರಿಗೆ, ಯುನೈಟೆಡ್ ಆಸ್ಪತ್ರೆಯ ಸಿಬ್ಬಂದಿಯಾದ ನಾಗೇಶ್, ರವಿ ಮತ್ತಿತರಿಗೆ ಪದಕ ವಿತರಣೆ ಮಾಡಿ ಗೌರವಿಸಲಾಯಿತು.
ಯುನೈಟೆಡ್ ಆಸ್ಪತ್ರೆಯ ವತಿಯಿಂದ ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸಾ ಕಿಟ್ಟುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎನ್ ಸಿ ಸಿ ಅಧಿಕಾರಿ ವಿಜಯಕುಮಾರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಪ್ರವೀಣ್ ನಾಯಕ್, ಎಸಿಪಿ (ಟ್ರಾಫಿಕ್) ಷರೀಫ್, ಯುನೈಟೆಡ್ ಆಸ್ಪತ್ರೆಯ ಆಡಳಿತಾಧಿಕಾರಿ ದಾವೂದ್ ಅಲಿ ಮತ್ತಿತರರು ಉಪಸ್ಥಿತರಿದ್ದರು. ಆರ್.ಜೇ.ಮಂಜು ಹಿರೋಳಿ ಕಾರ್ಯಕ್ರಮ ನಿರೂಪಿಸಿದರು.