ಗೋಮಾತೆ ಹಸುಗಳ ಕೆಚ್ಚಲು ಕತ್ತರಿಸಿರುವುದು ಪೈಶಾಚಿಕ ಕೃತ್ಯ : ಡಾ ಅಂಬಾರಾಯ ಅಷ್ಠಗಿ
ಕಲಬುರಗಿ : ಗೋಮಾತೆ ಎಂದು ಪೂಜಿಸಲ್ಪಡುವ ಹಸುಗಳ ಕೆಚ್ಚಲನ್ನು ಕತ್ತರಿಸಿರುವುದು ಪೈಶಾಚಿಕ, ಹೇಯ ಮತ್ತು ಅಮಾನುಷ ಕೃತ್ಯ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ. ಅಂಬಾರಾಯ ಅಷ್ಠಗಿ ಖಂಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ಬಗ್ಗೆ ತಾತ್ಸಾರ ಧೋರಣೆ ಅನುಸರಿಸುತ್ತಿದೆ. ಮೊನ್ನೆಯಷ್ಟೇ ಗೋಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಪ್ರಕಟಿಸಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ.
ಇರಿಯುವುದು, ಕತ್ತರಿಸುವುದನ್ನು ಕೇಳಿದ್ದೇವೆ, ಆದರೆ ಮಾತೃ ಕೊರತೆ ನೀಗಿಸಲು ಕ್ಷೀರಧಾರೆ ಹರಿಸುವ ಕೆಚ್ಚಲನ್ನೇ ಕತ್ತರಿಸುವಷ್ಟು ಪರಮ ನೀಚ ಕೃತ್ಯಕ್ಕೆ ಇಳಿದಿರುವ ಘಟನೆ ಕರ್ನಾಟಕದ ರಾಜಧಾನಿಯಲ್ಲೇ ನಡೆಯುತ್ತಿದೆ ಎಂದರೆ ಇದರ ಹಿಂದಿರುವ ಕುಮ್ಮಕ್ಕಿನ ಶಕ್ತಿ ಯಾವುದು ಎನ್ನುವುದು ಊಹಿಸಿಕೊಳ್ಳದಷ್ಟು ಕರುನಾಡಿನ ಜನತೆ ಮುಗ್ಧರಲ್ಲ, ಈ ರಾಜ್ಯ ಆಳುತ್ತಿರುವವರ ಮನಸ್ಥಿತಿ ಯಾರ ಪರವಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ ಎಂದು ಡಾ ಅಂಬಾರಾಯ ಅಷ್ಠಗಿ ಕುಟುಕಿದ್ದಾರೆ.
ದಿನದಿಂದ ದಿನಕ್ಕೆ ಜನರ ಮೇಲೆ ಇದೀಗಪ್ರಾಣಿ ಸಂಕುಲದ ಮೇಲೆ ನಡೆಯುತ್ತಿರುವ ಅಟ್ಟಹಾಸ ಮೇರೆ ಮೀರುತ್ತಿದೆ. ಜನರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸರ್ಕಾರ ಎಚ್ಚೆತ್ತುಕೊಂಡು ಇಂತಹ ಪೈಶಾಚಿಕ ಕೃತ್ಯಗಳ ಹಿಂದಿರುವ ಶಕ್ತಿಯನ್ನು ಬಗ್ಗು ಬಡಿದು ಈ ರೀತಿಯ ಅಮಾನುಷ ಕೃತ್ಯಗಳಿಗೆ ಕಡಿವಾಣ ಹಾಕಬೇಕೇಂದು ಡಾ ಅಂಬಾರಾಯ ಅಷ್ಠಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.