ಜ್ಞಾನದ ಪರಿಮಳ ಸೂಸಿದ ಶರಣ ಹುಗಾರ ಮಾದಯ್ಯ : ಡಾ ಕೆ ಗಿರಿಮಲ್ಲ
ಜ್ಞಾನದ ಪರಿಮಳ ಸೂಸಿದ ಶರಣ ಹುಗಾರ ಮಾದಯ್ಯ : ಡಾ ಕೆ ಗಿರಿಮಲ್ಲ
ನಗರದ ರಾಜಾಪುರ ಬಡಾವಣೆಯಲ್ಲಿ ಕಾರ್ಯಕ್ರಮ ಆಯೋಜನೆ
ಕಲಬುರಗಿ : ೧೨ನೇ ಆಗಸ್ಟ್,
ಬಸವಾದಿ ಪ್ರಮಥರಲ್ಲಿ ಜ್ಞಾನದ ಪರಿಮಳ ಸೂಸುವ ಮೂಲಕ ಕಾಯಕ ದೊಡ್ಡದು ಕೈಲಾಸವಲ್ಲ ಎಂದು ಸಾರಿದವರು ಶರಣ ಹುಗಾರ ಮಾದಯ್ಯ ಎಂದು ಸಾಹಿತಿ ಡಾ.ಕೆ ಗಿರಿಮಲ್ಲ ಬಣ್ಣಿಸಿದರು.
ಶಿವಬಸವ ಸಾಂಸ್ಕೃತಿಕ ಸೇವಾ ಟ್ರಸ್ಟ್ ಹಾಗೂ ಶರಣ ಹೂಗಾರ ಮಾದಯ್ಯ ಯುವ ಸಂಘ ರಾಜಾಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ರಾಜಾಪುರ ಬಡಾವಣೆಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ಶರಣ ಹುಗಾರ ಮಾದಯ್ಯ ನವರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಸಮಾಜದಲ್ಲಿ ಸಾಮರಸ್ಯದಿಂದ ಬದುಕಲು ಹೂವು ಪೋಣಿಸಿದ ದಾರದಂತೆ ಬಾಳಬೇಕು. ಸಹನೆ, ತಾಳ್ಮೆ ಎಲ್ಲರಲ್ಲೂ ಇರಬೇಕು. ಶರಣ ಹೂಗಾರ ಮಾದಯ್ಯ ನವರು 12 ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಶರಣರಿಗೆ ಹೂವು ಪೂರೈಸುವ ಕಾಯಕ ದೊಂದಿಗೆ ದಾಸೋಹವನ್ನು ಕೈಗೊಂಡಿದ್ದರು’ ಆದ್ದರಿಂದ ಅವರ ಕಾಯಕ ನಿಷ್ಠೆ ಸಾರ್ವಕಾಲಿಕ ಎಂದು ಡಾ ಕೆ ಗಿರಿಮಲ್ಲ ಅಭಿಪ್ರಾಯಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ ಯಶವಂತರಾಯ ಅಷ್ಠಗಿ, ಕಾಯಕದ ಮಹತ್ವವನ್ನು ಸಾರಿದ ಶರಣ ಹುಗಾರ ಮಾದಯ್ಯ ಕಾಯಕಯೋಗಿಯಾಗಿದ್ದರು ಎಂದು ಹೇಳಿದರು.
ಶರಣ ಹೂಗಾರ ಮಾದಯ್ಯನವರು ಕಲ್ಯಾಣದ ಅನುಭವ ಮಂಟಪದ ಮಹಾಮನೆಯ ಏಳು ನೂರಾ ಎಪ್ಪತ್ತು ಅಮರ ಗಣಂಗಳಲ್ಲಿ ಒಬ್ಬರಾಗಿದ್ದರು, ಇವರ ಕುರಿತಾಗಿ ನಮಗೆ ಭೀಮ ಕವಿಯ ಬಸವ ಪುರಾಣ, ಸಿದ್ದಯ್ಯ ಪುರಾಣಿಕರ "ಶರಣರ ಚರಿತಾಮೃತ" ಮತ್ತು ಡಾ ಅನ್ನಪೂರ್ಣ ಅಕ್ಕ ನವರ “ಜಾನಪದದಲ್ಲಿ ಶರಣರು” ಎನ್ನುವ ಸಾಹಿತ್ಯ ಕೃತಿಗಳಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯವಾಗಿವೆ. ಆದಾಗ್ಯೂ ಕಾಯಕಯೋಗಿ ಶರಣ ಹುಗಾರ ಮಾದಯ್ಯ ನವರ ಕುರಿತು ಆಮೂಲಾಗ್ರ ಸಂಶೋಧನೆ ನಡೆಯಬೇಕು ಎಂದು ಪ್ರೊ ಯಶವಂತರಾಯ ಅಷ್ಠಗಿ ಹೇಳಿದ್ದಾರೆ.
ನದಿಸಿನ್ನೂರಿನ ಶರಣ ಹುಗಾರ ಮಾದಯ್ಯ ಶಕ್ತಿ ಪೀಠದ ಪೂಜ್ಯ ಶ್ರೀ ಗುರುರಾಜೇಂದ್ರ ಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಅಖಿಲ ಕರ್ನಾಟಕ ಶರಣ ಹುಗಾರ ಮಾದಯ್ಯ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಹೂಗಾರ ಅಧ್ಯಕ್ಷತೆ ವಹಿಸಿದ್ದರು.
ಕಲಬುರಗಿ ಎಪಿಎಂಸಿ ಯ ಉಪಾಧ್ಯಕ್ಷ ರಾಜಕುಮಾರ್ ಕೋಟೆ, ಪತ್ರಕರ್ತ ಹಾಗೂ ಕಲಬುರಗಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ, ರವಿ ಹಾಗರಗಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ಸಂಚಾಲಕ ಮಲ್ಲಿನಾಥ ಹೂಗಾರ್ ರಾಜಾಪುರ ಸ್ವಾಗತಿಸಿದರು, ಜಾನಪದ ಕಲಾವಿದ ವಿಶ್ವನಾಥ ತೋಟ್ನಳ್ಳಿ ನಿರೂಪಿಸಿದರು. ಗುರುಸಿದ್ದ ಹುಗಾರ ವಂದಿಸಿದರು.
ಹೂಗಾರ ಸಮಾಜದ ಮುಖಂಡರಾದ ಹಣಮಂತರಾವ್ ಹುಗಾರ ಕುರಿಕೋಟಾ, ಶಿವಕುಮಾರ್ ಹುಗಾರ ರಾಜಾಪುರ, ಗುರುಸಿದ್ದ ಹುಗಾರ, ರಾಜೇಂದ್ರ ಹುಗಾರ, ಮಲಕಣ್ಣ ಹುಗಾರ, ಶಂಕರೆಮ್ಮ ಹುಗಾರ,ಮಲಕಮ್ಮ ಹುಗಾರ, ಸಂಗೀತಾ ಹುಗಾರ ಸೇರಿದಂತೆ ಹುಗಾರ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.