ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ಇನ್ನಿಲ್ಲ . ನಾಳೆ ಒಂದು ದಿನ ಸರ್ಕಾರಿ ರಜೆ ಘೋಷಣೆ
ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ಇನ್ನಿಲ್ಲ . ನಾಳೆ ಒಂದು ದಿನ ಸರ್ಕಾರಿ ರಜೆ ಘೋಷಣೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ಅವರು ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಘೋಷಣೆ ಮಾಡಿದ್ದಾರೆ. ನಾಳೆ ಒಂದು ದಿನ ಸರ್ಕಾರಿ ರಜೆಯನ್ನು ಘೋಷಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ.
ಕರ್ನಾಟಕ ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ, ಶಿಸ್ತು ಹಾಗೂ ಪ್ರಬುದ್ಧ ಆಡಳಿತಕ್ಕೆ ಮಾದರಿಯಾಗಿದ್ದ ನಾಡಿನ ಇತಿಹಾಸದಲ್ಲಿ ತಮ್ಮ ಸಜ್ಜನಿಕೆ ಹಾಗೂ ಘನತೆಯ ನಡವಳಿಕೆಯಿಂದ ವಿಶೇಷ ಚಾಪು ಮೂಡಿಸಿದ್ದ ಎಸ್.ಎಂ ಕೃಷ್ಣ ಅವರು
ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿ ಇತಿಹಾಸದಲ್ಲಿ ತಮ್ಮ ಶಾಶ್ವತ ಹೆಜ್ಜೆ ಗುರುತು ಮೂಡಿಸಿರುವ ಹೆಮ್ಮೆಯ ಕನ್ನಡಿಗ ಎಸ್.ಎಂ ಕೃಷ್ಣರವರು ಮುಖ್ಯಮಂತ್ರಿಗಳಾಗಿ ಕರ್ನಾಟಕದ ಅಭಿವೃದ್ಧಿಗೆ, ಬೆಂಗಳೂರನ್ನು ಸಿಲಿಕಾನ್ ಸಿಟಿ ಎನಿಸಿಕೊಳ್ಳಲು ಕೊಟ್ಟ ಕೊಡುಗೆ ಎಂದೆಂದಿಗೂ ಮರೆಯುವಂತಿಲ್ಲ.
ಕೇಂದ್ರ ಸಚಿವ ಸಂಪುಟದಲ್ಲಿ ವಿವಿಧ ಹುದ್ದೆಗಳೊಂದಿಗೆ ಮಹತ್ವದ ವಿದೇಶಾಂಗ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಮಾನ್ಯ ಕೃಷ್ಣರವರು ನಾಲ್ಕು ತಲೆಮಾರಿನ ರಾಜಕಾರಣದ ಬಹುದೊಡ್ಡ ಕೊಂಡಿಯಾಗಿದ್ದರು. ಆರೋಗ್ಯಕರ ಮನಸ್ಸು ಕ್ರಿಯಾಶೀಲತೆಯ ಸಂಕೇತ ಎನ್ನುವ ನಿಟ್ಟಿನಲ್ಲಿ ತಮ್ಮ ಬದುಕಿನ ಕೊನೆಯ ಉಸಿರಿರುವವರೆಗೂ ಸಂಸ್ಕಾರ ಹಾಗೂ ಸುಸಂಸ್ಕೃತ ನಡವಳಿಕೆಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದರು. ತಮ್ಮ ಇಡೀ ರಾಜಕಾರಣದ ಜೀವನದಲ್ಲಿ ಕಪ್ಪು ಕಲೆಯನ್ನು ಎಂದೂ ಅಂಟಿಸಿಕೊಳ್ಳದ ಕೃಷ್ಣರವರು ಪರಿಶುಭ್ರತೆಗೆ ಮಾದರಿಯಾಗಿದ್ದರು.
ಯುವ ಪೀಳಿಗೆಯ ರಾಜಕಾರಣಿಗಳಿಗೆ ಅವರು ಆದರ್ಶದ ದಾರಿದೀಪ, ಅವರು ಇಹಲೋಕವನ್ನು ತ್ಯಜಿಸಿದರೂ ಅವರ ನಡೆ-ನುಡಿ ನಿತ್ಯವೂ ಜೀವಂತವಾಗಿ ರಾಜಕಾರಣದ ಆಗಸದಲ್ಲಿ ಮಿನುಗುತ್ತಿರುತ್ತದೆ.
ಕರ್ನಾಟಕದ ಇತಿಹಾಸ ಇರುವವರೆಗೂ ಎಸ್ ಎಂ ಕೃಷ್ಣರು ಅಜರಾಮರ. ಎಸ್ಎಂ ಕೃಷ್ಣ ರವರ ರಾಜಕೀಯದ ಕೊನೆಯ ದಿನದ ನಿಲುವುಗಳು ಭಾರತದ ಸುಭದ್ರತೆಗೆ ಪ್ರೇರಣೆಯ ಶಕ್ತಿಯಾಗಿತ್ತು.
.