ಜಮ್ಮು ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ದಾಳಿ ಒಬ್ಬ ಸೇನಾಧಿಕಾರಿ ಹುತಾತ್ಮ ಹಲವರ ಸ್ಥಿತಿ ಗಂಭೀರ

ಜಮ್ಮು ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ದಾಳಿ ಒಬ್ಬ ಸೇನಾಧಿಕಾರಿ ಹುತಾತ್ಮ ಹಲವರ ಸ್ಥಿತಿ ಗಂಭೀರ

ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಕಿಶ್ತ್ವಾರ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಭಾನುವಾರ ಭಯೋತ್ಪಾದಕರೊಂದಿಗೆ ನಡೆಯುತ್ತಿರುವ ಎನ್‌ಕೌಂಟರ್‌ ದಾಳಿಯಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಗಳ ಕಿರಿಯ ಶ್ರೇಣಿ ಆಯುಕ್ತ (ಜೆಸಿಒ) ಹುತಾತ್ಮರಾಗಿದ್ದಾರೆಂದು ಸೇನಾ ಮೂಲಗಳು ತಿಳಿಸಿವೆ.

ಈ ಗುಂಡಿನ ದಾಳಿಯಿಂದಾಗಿ ಇತರೆ ಮೂವರು ಸೈನಿಕರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

 ಗುಂಡಿನ ಚಕಮಕಿಯಲ್ಲಿ ನಾಲ್ವರು ಸೇನಾ ಸಿಬ್ಬಂದಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಆದರೆ ಅಲ್ಲಿ ಒಬ್ಬ ಅಧಿಕಾರಿ ತೀವ್ರ ಗಾಯದ ಕಾರಣ ಹುತಾತ್ಮರಾಗಿದ್ದಾರೆ, ಮೂವರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ದೃಶ್ಯ ಮನಕಲಕುವಂತಿದೆ ಎನ್ನುವ ಮಾತು ಕೇಳಿ ಬರುತ್ತಿವೆ. ಹುತಾತ್ಮ ಯೋಧನನ್ನು 2 ಪ್ಯಾರಾ ವಿಶೇಷ ಪಡೆಗಳ ನೈಬ್ ಸುಬೇದಾರ್ ರಾಕೇಶ್ ಕುಮಾರ್ ಎಂದು ಹೇಳಲಾಗಿದೆ. 

ಇತ್ತೀಚೆಗೆ ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿಗಳು ಭಯೋತ್ಪಾದಕರ ಗುಂಡಿಗೆ ಬಲಿಯಾದ (ವಿಡಿಜಿ) ನಂತರ ಕಿಶ್ತ್ವಾರ್‌ನ ಭಾರ್ ರಿಡ್ಜ್‌ನಲ್ಲಿ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಆರಂಭಿಸಿದ್ದರು. 

ಸೇನೆ ಮತ್ತು ಸ್ಥಳೀಯ ಪೊಲೀಸ ಜಂಟಿ ಶೋಧ ಪಡೆಗಳು ಮುಂಜಾನೆ 11 ಗಂಟೆ ಸುಮಾರಿಗೆ ಆ ಪ್ರದೇಶದಲ್ಲಿ ಅಡಗಿಕೊಂಡು ಕುಳಿತಿದ್ದ ಭಯೋತ್ಪಾದಕರನ್ನು ತಡೆದಾಗ ಎನ್‌ಕೌಂಟರ್ ನಡೆದಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. 

ಕುಂಟ್ವಾರಾ ಮತ್ತು ಕೇಶ್ವಾನ್ ಅರಣ್ಯಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಕೇಶ್ವಾನ್ ಅರಣ್ಯದಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಯ ವೇಳೆ ಗುರುವಾರ ಸಂಜೆ ವಿಡಿಜಿಗಳೆಂದು ಗುರುತಿಸಲಾದ ಸೇನೆಯ ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಅವರ ಮೃತದೇಹಗಳು ಗುಂಡಿನ ಗಾಯಗಳೊಂದಿಗೆ ಪತ್ತೆಯಾಗಿವೆ.

ಅಹ್ಮದ್ ಮತ್ತು ಕುಮಾರ್ ಹತ್ಯೆಯ ಹಿಂದೆ ಭದ್ರತಾ ಪಡೆಗಳಿಂದ ತಡೆಯಲ್ಪಟ್ಟಿದ್ದ ಭಯೋತ್ಪಾದಕರ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.

 ಭಯೋತ್ಪಾದಕರ ನಿಖರವಾದ ಸ್ಥಳವನ್ನು ಗುರುತಿಸಲು ಪ್ರದೇಶದಲ್ಲಿ ಇನ್ನೂ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

 ಈ ನಡುವೆ ಶ್ರೀನಗರ ಪ್ರದೇಶದ ಹೊರವಲಯದಲ್ಲಿರುವ ಇಶ್ಬರ್ - ನಿಶಾತ್ ಅರಣ್ಯ ಪ್ರದೇಶದಲ್ಲಿ ಭಾನುವಾರ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ಮಧ್ಯೆ ಪ್ರತ್ಯೇಕ ಎನ್‌ಕೌಂಟರ್ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಈ ಕಾರ್ಯಾಚರಣೆ ಕುರಿತು ಸೇನೆ ಮತ್ತು ಪೊಲೀಸರು ಭಯೋತ್ಪಾದಕರ ತಾಣಗಳನ್ನು ಪತ್ತೆ ಹಚ್ಚಲು ಪ್ರಯತ್ನ ಮುಂದುವರಿಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.