ಬಸವನ ಗೌಡ ಯತ್ನಾಳ್ ನೇತೃತ್ವದ ನಾಯಕರ ದಂಡು ಕಡೇ ಚೂರ್ ಮನೆಗೆ ಭೇಟಿ
ಬಸವನ ಗೌಡ ಯತ್ನಾಳ್ ನೇತೃತ್ವದ ನಾಯಕರ ದಂಡು ಕಡೇ ಚೂರ್ ಮನೆಗೆ ಭೇಟಿ
ಕಲಬುರಗಿ : ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಮಹಾದೇವಪ್ಪ ಕಡೇಚೂರ್ ಅವರನ್ನು ಕಲ್ಬುರ್ಗಿಯ ನಿವಾಸದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಪ್ರಮುಖ ನಾಯಕರು ಭೇಟಿಯಾಗಿ ಸುಧೀರ್ಘ ಮಾತುಕತೆ ನಡೆಸಿದರು.
ಕಲಬುರಗಿಯ ಜಗತ್ ವೃತ್ತದಲ್ಲಿರುವ ಮಹಾದೇವಪ್ಪ ಕಡೇಚೂರ್ ಅವರನ್ನು ನವೆಂಬರ್ 26ರಂದು ವಕ್ಫ್ ವಿರೋಧಿ ಹೋರಾಟಕ್ಕೆ ಕಲಬುರಗಿಗೆ ಆಗಮಿಸಿದ ಬಿಜೆಪಿಯ ಹಿರಿಯ ನಾಯಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಲೋಕಸಭಾ ಸದಸ್ಯ ಜಿ.ಎಂ ಸಿದ್ದೇಶ್ವರ, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಶಾಸಕರಾದ ಬಿ.ಪಿ. ಹರೀಶ್, ರಾಜಕುಮಾರ್ ಪಾಟೀಲ್ ತೆಲ್ಕೂರ್, ರೈತ ಹೋರಾಟ ಸಮಿತಿಯ ದಯಾನಂದ ಪಾಟೀಲ್ ಮುಂತಾದವರು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು.
ಪಕ್ಷದ ಮಹಾನ್ ಹಿರಿಯ ನಾಯಕರ ಆಶೀರ್ವಾದ ವಕ್ಫ್ ಹೋರಾಟಕ್ಕೂ ಇರಲಿ : ಯತ್ನಾಳ್
ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಪಕ್ಷವು ಇಂದು ಇಷ್ಟು ಎತ್ತರಕ್ಕೆ ನಿಲ್ಲಲು ಕಡೇಚೂರ್ ಅವರಂತಹ ಮಹನೀಯರ ತ್ಯಾಗ ಕೊಡುಗೆ ಅಪಾರವಾಗಿದ್ದು ತಮ್ಮಂತಹ ನಾಯಕರು ಬುನಾದಿ ಹಾಕಿದ ಪಕ್ಷದ ಪ್ರಾಮಾಣಿಕತೆ, ನಿಷ್ಠೆ ಮತ್ತು ತತ್ವಾದರ್ಶಗಳು ನಮ್ಮಂತಹ ನಾಯಕರಿಗೆ ಪ್ರೇರಣೆ ಆಗಿದೆ. ಅದಕ್ಕಾಗಿ ನೇರ ನಿಷ್ಠುರವಾಗಿ ಪಕ್ಷದಲ್ಲಿ ಪ್ರತಿಕ್ರಿಯೆ ನೀಡಿ ಜನಪರ ಹೋರಾಟಗಳಲ್ಲಿ ಧುಮಕಿ ಸಕ್ರಿಯರಾಗಿದ್ದೇವೆ ಎಂದು ಬಸವನಗೌಡ ಪಾಟೀಲ ಯತ್ನಾಳ್ ಅವರು ಮಹಾದೇವಪ್ಪ ಕಡೇಚೂರ್ ಅವರಿಗೆ ಸನ್ಮಾನಿಸಿದ ನಂತರ ಹೇಳಿದರು.
ವಕ್ಫ್ ಹೋರಾಟಕ್ಕೂ ನಟ್ಮ್ಮ ಆಶೀರ್ವಾದ ಸದಾ ಇರಲಿ. ಈ ಹೋರಾಟದಲ್ಲಿ ಜಯ ಸಿಗುವವರೆಗೆ ವಿರಮಿಸುವುದಿಲ್ಲ ಎಂದು ಭರವಸೆ ನೀಡಿದರು. ಅರವಿಂದ ಲಿಂಬಾವಳಿ ಮತ್ತು ಕುಮಾರ ಬಂಗಾರಪ್ಪ ಕೂಡ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಾ ತಮ್ಮಂತ ಹಿರಿಯ ನಾಯಕರ ಮಾರ್ಗದರ್ಶನ ಸದಾ ಇರಲಿ. ರಾಜ್ಯದ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸಿ ಎಂದು ಆಶೀರ್ವಾದ ಬೇಡಿದರು.
ವಕ್ಫ್ ಭೂ ಕಬಳಿಕೆ ಹೋರಾಟದಿಂದ ಹಿಂದೆ ಸರಿಯದಿರಿ: ಕಡೇಚೂರ್
ವಕ್ಫ್ ಕುರಿತಾಗಿ ರಾಷ್ಟ್ರದಲ್ಲಿ ಎದ್ದಿರುವ ಗದ್ದಲ ನಿಜಕ್ಕೂ ದುಃಖಕರ. ಯಾವುದೇ ಕಾರಣಕ್ಕೂ ಯಾವೊಬ್ಬ ರೈತನ ಭೂಮಿಯು ಹಾಗೂ ಮಠ ಮಂದಿರಗಳು ವಕ್ಫ್ ಕೈವಶ ಆಗದಂತೆ ಪ್ರಬಲ ಹೋರಾಟವನ್ನು ಮಾಡಿ ನ್ಯಾಯ ಒದಗಿಸಿಕೊಡುವಲ್ಲಿ ಯತ್ನಾಳ್ ನೇತೃತ್ವದ ನಾಯಕರಿಗೆ ರಾಜ್ಯದ ಎಲ್ಲರ ಬೆಂಬಲ ಇರಲಿ. ಜನಪರ ಹೋರಾಟದಲ್ಲಿ ಕ್ಷುಲ್ಲಕ ರಾಜಕಾರಣ ಮಾಡದೆ ದೇಶದ ಹಿತವನ್ನು ಕಾಯಲು ನಾಯಕರು ಐಕ್ಯತೆಯಿಂದ ಹೋರಾಟವನ್ನು ಮುಂದುವರಿಸಿ, ಜಯ ಪಡೆಯುವ ವರೆಗೆ ಹೋರಾಟದಿಂದ ವಿರಮಿಸಬಾರದು ಎಂದು ಹಿರಿಯ ನಾಯಕ ಮಹಾದೇವಪ್ಪ ಕಡೇಚೂರ್ ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದರು.
ಬಿಜೆಪಿಯ ಹಿರಿಯ ನಾಯಕರನ್ನು ವೆಂಕಟೇಶ ಕಡೇಚೂರ್, ಡಾ. ರಾಜೇಶ್ ಕಡೇಚೂರ್, ಮಹೇಶ್ ಕಡೇ ಚೂರ್ ಮತ್ತು ದಿನೇಶ್ ಕಡೇ ಚೂರ್ ಸ್ವಾಗತಿಸಿದರು. ನಾಯಕರಿಗೆ ಮಹಾದೇವಪ್ಪ ಕಡೇಚೂರ್ ಅಭಿನಂದನಾ ಗ್ರಂಥ "ಅನನ್ಯ ಮಹಾದೇವ" ಕೃತಿಯನ್ನು ನೀಡಿ ಗೌರವಿಸಲಾಯಿತು.
*ಕಡೇಚೂರ್ ಕುಟುಂಬ ಆದರ್ಶಕೊಂದು ಮಾದರಿ* ಮಹಾದೇವಪ್ಪ ಕಡೇಚೂರ್ ಮನೆಯಲ್ಲಿ ಒಟ್ಟು 23 ಜನರು ಒಟ್ಟಿಗೆ ಇದ್ದುಕೊಂಡು ಒಂದೇ ಅಡುಗೆ ಮನೆಯ ಊಟೋ ಪಚಾರವನ್ನು ಮಾಡುತ್ತಿರುವುದು ಭಾರತೀಯ ಕುಟುಂಬ ಸಂಸ್ಕೃತಿಗೆ ಆದರ್ಶ ಮತ್ತು ಮಾದರಿ ಎಂದು ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು. ಆರ್ ಎಸ್ ಎಸ್ ಮತ್ತು ಬಿಜೆಪಿಯ ಸಂಸ್ಕೃತಿಯನ್ನು ಸದಾ ಉಸಿರಾಡುತ್ತಿರುವ ಕಡೇಚೂರ್ ಮನೆ ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದರು.