ಕನ್ನಡ ಸಿನಿ ಜಗತ್ತಿನ ಹಿರಿಯ ನಟ ಟಿ. ತಿಮ್ಮಯ್ಯ ನಿಧನ : ಕನ್ನಡ ಚಿತ್ರರಂಗದಲ್ಲಿ ನೀರವ ಮೌನ
ಕನ್ನಡ ಸಿನಿ ಜಗತ್ತಿನ ಹಿರಿಯ ನಟ ಟಿ. ತಿಮ್ಮಯ್ಯ ನಿಧನ : ಕನ್ನಡ ಚಿತ್ರರಂಗದಲ್ಲಿ ನೀರವ ಮೌನ
ಬೆಂಗಳೂರು : ಕನ್ನಡ ಸಿನಿ ಜಗತ್ತಿನ ಹಿರಿಯ ನಟ ಟಿ. ತಿಮ್ಮಯ್ಯ ಅವರು ತಿವ್ರ ಹೃದಯಾಘಾತದಿಂದ ನಿಧನರಾದರು.
ವರನಟ ಡಾ.ರಾಜ್‌ಕುಮಾರ್, ಸಾಹಸ ಸಿಂಹ ಡಾ.ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಕನ್ನಡ ಚಿತ್ರರಂಗದ ಚಿರಯುವಕ ಖ್ಯಾತಿಯ ನಟ ಅನಂತ್ ನಾಗ್ ಸೇರಿದಂತೆ ಅನೇಕ ದಿಗ್ಗಜ ನಟರೊಂದಿಗೆ ಅಭಿನಯಿಸಿ ಜನ ಮನ್ನಣೆಯನ್ನು ಗಳಿಸಿದ್ದ ಹಿರಿಯ ನಟ ಟಿ.ತಿಮ್ಮಯ್ಯ (92) ಅವರು ನಿನ್ನೆ (ನವೆಂಬರ್ 16) ನಮ್ಮನ್ನು ಆಗಲಿದ್ದಾರೆ.
ನಟ ಸಾರ್ವಭೌಮ ಡಾ.ರಾಜ್ಕುಮಾರ್ ರವರ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸುತ್ತಿದ್ದ ಟಿ ತಿಮ್ಮಯ್ಯ, ಕೇವಲ ಚಿತ್ರರಂಗದ ಪಾತ್ರಗಳಿಗೆ ಜೀವ ತುಂಬುತ್ತಾ ಪ್ರೇಕ್ಷಕರ ಹೃದಯ ಗೆದ್ದ ನಟರಾಗಿಯೂ ಹೆಸರು ಮಾಡಿದ್ದರು.
ಅವರು ಕನ್ನಡ ಚಿತ್ರರಂಗದ ಯಶಸ್ವಿ ಚಿತ್ರಗಳಾದ
'ಚಲಿಸುವ ಮೋಡಗಳು', 'ಬಂಧನ', 'ಪ್ರತಿಧ್ವನಿ', 'ಬೆಂಕಿಯ ಬಲೆ', 'ಪರಮೇಶಿ ಪ್ರೇಮ ಪ್ರಸಂಗ', 'ಭಾಗ್ಯದ ಲಕ್ಷ್ಮಿ ಬಾರಮ್ಮ', 'ಕರ್ಣ', 'ಕುರುಕ್ಷೇತ್ರ', 'ನಿಷ್ಕರ್ಷ', 'ಬೆಳದಿಂಗಳ ಬಾಲೆ' ಸೇರಿ ಮುಂತಾದ ಹತ್ತು ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಕನ್ನಡದ ಪ್ರಖ್ಯಾತ ನಿರ್ದೇಶಕರಾದ ದೊರೈ ಭಗವಾನ್, ಸುನೀಲ್ ಕುಮಾರ್ ದೇಸಾಯಿ, ಭಾರ್ಗವ, ಸಂಗೀತಂ ಶ್ರೀನಿವಾಸ್ ರಾವ್, ಕೆ.ವಿ.ಜಯರಾಮ್ ಅವರ ಜೊತೆ ಕೆಲಸ ಮಾಡಿದ ಕೀರ್ತಿ ಟಿ ತಿಮ್ಮಯ್ಯ ಅವರಿಗೆ ಸಲ್ಲುತ್ತದೆ.
80ರ ದಶಕದಲ್ಲಿ ರಂಗಭೂಮಿ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಟಿ ತಿಮ್ಮಯ್ಯನವರು ಸುಮಾರು ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ.
ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ.