ವಾಡಿ | ವೀರ ಮಾತೆ ಚೆನ್ನಮ್ಮ ಜಯಂತಿ ಆಚರಣೆ
ವಾಡಿ ಯಲ್ಲಿ ವೀರ ಮಾತೆ ಚೆನ್ನಮ್ಮ ಜಯಂತಿ ಆಚರಣೆ
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ವೀರ ವನಿತೆ ಚೆನ್ನಮ್ಮ ತಾಯಿಯ ಇಂಗ್ಲೀಷರ ವಿರುದ್ಧ ಹೋರಾಟ ಮುಂದೆ 1857ರ ಸ್ವಾತಂತ್ರ ಸಂಗ್ರಾಮಕ್ಕೆ ಸ್ಪೂರ್ತಿದಾಯಕವಾಯಿತು ಎಂದರು.
ರಾಣಿ ಚೆನ್ನಮ್ಮ ಸ್ವಾತಂತ್ರದ ಜ್ಯೋತಿಯನ್ನು ಉರಿಸಿದಳು. ತಾನೂ ಉರಿದು ಅಮರಳಾದಳು. ಭಾರತದ ವೀರಸಂತತಿಯಲ್ಲಿ ಅವರ ರಕ್ತದ ಕಣಕಣಗಳಲ್ಲಿ ತಾಯ್ನಾಡಿನ ಭಕ್ತಿಯ ಕಾವನ್ನು ಹರಿಬಿಟ್ಟಳು.
ಚೆನ್ನಮ್ಮಾ ತಾಯಿ ನಮ್ಮವರ ಕೆಲ ಕಿಡಿಗೇಡಿಗಳ ಹಾಗೂ ಬ್ರಿಟಿಷ್ ರ ಕುತಂತ್ರದಿಂದ ಸೆರೆಯಾದರು, ಅವರ ವೀರಬಂಟರಲ್ಲಿ ಹಲವರು ಆಗಾಗ ವೇಷಮರೆಸಿ ಬಂದು ಹೊರಗಿನ ಸುದ್ದಿಯನ್ನು ತಿಳಿಸುತ್ತಿದ್ದರು. ಇಂಗ್ಲೀಷರನ್ನು ಸೋಲಿಸಲು ತಾವು ಮಾಡುತ್ತಿದ್ದ ಪ್ರಯತ್ನಗಳನ್ನು ವಿವರಿಸುತ್ತಿದ್ದರು. ಅವರಿಗೆಲ್ಲ ಚೆನ್ನಮ್ಮಾಜಿ ಸ್ವಾತಂತ್ರದ ಕಿಡಿಯಾಗಿದ್ದಳು. ಸಂಗೊಳ್ಳಿ ರಾಯಣ್ಣನಂತಹ ದೇಶಭಕ್ತರಿಗೆ ಸ್ಫೂರ್ತಿಯಾದಳು.
ದಿನಗಳು, ತಿಂಗಳುಗಳು,ವರ್ಷಗಳು ಜಾರಿಹೋದವು. ಇಂಗ್ಲೀಷರ ಬಲ ಕುಂದುವ ಮತ್ತೆ ಕಿತ್ತೂರು ಸ್ವತಂತ್ರವಾಗುವ ಸೂಚನೆ ಕಾಣಲಿಲ್ಲ ಈ ದುಃಖದಲ್ಲಿ ಕೊರಗಿ ಚೆನ್ನಮ್ಮರಾಣಿ 1829 ನೇ ಫೆಬ್ರವರಿ 21 ರಂದು ತೀರಿಕೊಂಡಳು. ಆಗ ಆಕೆಗೆ 51 ವರ್ಷ. ಇಂಗ್ಲೀಷರ ಕುತಂತ್ರವು ಫಲಿಸಿತು. ಕಿತ್ತೂರನ್ನು ಬಲಿ ತೆಗೆದುಕೊಂಡಿತು.ಆದರೆ ಆ ಕಿತ್ತೂರಿನ ವೀರರು ತೋರಿದ ಧೈರ್ಯ, ಶೌರ್ಯ, ಸಾಹಸಗಳ ಚರಿತ್ರೆಯನ್ನು ಯಾರು
ಬಲಿ ತೆಗೆದುಕೊಳ್ಳಲಾರದಂತದ್ದು, ಈ ಸೃಷ್ಟಿಯಲ್ಲಿ ತಾಯಿ ಚೆನ್ನಮ್ಮರಾಣಿ ತನ್ನ ಅಮರವಾದ ಇತಿಹಾಸವನ್ನು ಸ್ಥಾಪಿಸಿದಳು. ಈ ತಾಯ್ನಾಡಿನ ಮಕ್ಕಳ ದೇಶಪ್ರೇಮದ ನಿರಂತರಕ್ಕಾಗಿ ತನ್ನ ಬದುಕೆ ಸಾಕ್ಷಿ ಎಂದು ಸಾರಿದ ತಾಯಿಗೆ ಜನ್ಮದಿನದ ಕೃತಜ್ಞತೆಯ ನಮನಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ,ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ, ಅರ್ಜುನ ಕಾಳೆಕರ,ಶಿವಶಂಕರ ಕಾಶೆಟ್ಟಿ,ಮಲ್ಲಿಕಾರ್ಜುನ ಸಾತಖೇಡ, ಮಲ್ಲು ಇಂದೂರ,ದೇವಿಂದ್ರ ಪೂಜಾರಿ ಸೇರಿದಂತೆ ಇತರರು ಇದ್ದರು.