ದಲಿತ ಮಹಿಳಾ ಒಕ್ಕೂಟ ಮತ್ತು ಸಮಾನ ಮನಸ್ಕ ಮಹಿಳಾ ಒಕ್ಕೂಟದಿಂದ ಸಮಾಲೋಚನಾ ಸಭೆ
ದಲಿತ ಮಹಿಳಾ ಒಕ್ಕೂಟ ಮತ್ತು ಸಮಾನ ಮನಸ್ಕ ಮಹಿಳಾ ಒಕ್ಕೂಟದಿಂದ ಸಮಾಲೋಚನಾ ಸಭೆ
ಬೆಂಗಳೂರಿನ ವೈಯಾಲಿಕಾವಲ್‌ನ ಘಾಟೇ ಭವನದಲ್ಲಿ ದಲಿತ ಮಹಿಳಾ ಒಕ್ಕೂಟ ಮತ್ತು ಸಮಾನ ಮನಸ್ಕ ಮಹಿಳಾ ಒಕ್ಕೂಟ, ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಚಿಂತಕರು, ಹಲವು ಆಯೋಗಗಳ ಅಧ್ಯಕ್ಷರು ಆಗಿರುವ ನಿವೃತ್ತ ನ್ಯಾ|| ನಾಗಮೋಹನದಾಸ್ ಅವರು “ಪರಿಷ್ಕೃತ ಕ್ರಿಮಿನಲ್ ಕಾನೂನುಗಳಲ್ಲಿ ಮಹಿಳೆ ಮತ್ತು ದಲಿತ ಪರ ಕಾನೂನು ಸುಧಾರಣೆಗಳು” ಎಂಬ ವಿಷಯದಲ್ಲಿ ಮಾತನಾಡುತ್ತ ಕೆಲವು ಕಾನೂನುಗಳನ್ನು ಸ್ವಾಗತ ಮಾಡಬಹುದಾಗಿದೆ. ಕೆಲವು ಕಾನೂನುಗಳನ್ನು ಚರ್ಚೆಗೆ ಒಳಪಡಿಸುವಂಥಹದ್ದಾಗಿದೆ. ಇದಕ್ಕೂ ಮೊದಲು ಈಗ ಮಾಡಿರುವ ಕ್ರಿಮಿನಲ್ ಕಾನೂನು ತಿದ್ದುಪಡಿ ಅವಶ್ಯಕವೇ? ಆದ್ಯತಾ ಮಾನದಂಡಗಳನ್ನು ರೂಪಿಸಿಕೊಂಡು, ನಂತರ ಕ್ರಮವಹಿಸಬೇಕು. ಭ್ರಷ್ಟರನ್ನು ಶಿಕ್ಷಿಸುವ ಕಠಿಣ ಕಾನೂನು ಬರಬೇಕು. ದೇಶ - ಆಡಳಿತ ಲಂಚಮುಕ್ತವಾಗಬೇಕು ಎಂದರು.
ಕೇಂದ್ರ ಸರ್ಕಾರ ಇದೀಗ ಮಂಡಿಸಿರುವ ೨೦೨೪-೨೫ನೇ ಸಾಲಿನ “ಬಡ್ಜೆಟ್” ಕುರಿತು ಚಿಂತಕರು, ವಿಮರ್ಶಕ ಶಿವಸುಂದರ್ ಅವರು ಮಾತನಾಡುತ್ತ . ದೇಶದ ೯೦% ಜನ ತೆರಿಗೆ ಕಟ್ಟುತ್ತೇವೆ. ಎಲ್ಲಾ ವಸ್ತುಗಳ ಮೇಲಿನ ಜಿ.ಎಸ್.ಟಿ. ಕಟ್ಟುತ್ತೇವೆ. ಸಂಬಳದಲ್ಲೇ ವೇತನದಾರರ ಜಿ.ಎಸ್.ಟಿ. ಕಡಿತಗೊಳ್ಳುತ್ತೆ. ದುಡಿಯುವ ಜನ, ಸಾಮಾನ್ಯ ಜನ ತೆರಿಗೆ ಕಟ್ತಾ ಇದ್ದಾರೆ. ಕೇಂದ್ರ ಸರ್ಕಾರದ, “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಂದರು. ಆದರೆ “ಯಾರೊಂದಿಗೆ ಯಾರ ವಿಕಾಸ” ಹೇಳಿ. ಸಂವಿಧಾನದಲ್ಲಿ ತಾರತಮ್ಯವಿಲ್ಲದ, ವ್ಯಕ್ತಿ ಘನತೆಯ, ಸರಿಸಮಾನ ಹಕ್ಕು ಅವಕಾಶಗಳಿವೆ. ಸರ್ಕಾರಗಳು ಜನಪರ ಯೋಜನೆಗಳನ್ನು ರೂಪಿಸುವಾಗ, ಬಡವರ ದೈನಂದಿನ ಜೀವನಾವಶ್ಯಕತೆಗಳು ಹೊರೆಯಾಗದಂತೆ ಆಯವ್ಯಯ ಮಾಡಬೇಕಾಗುತ್ತದೆ. ಆದರೆ ಈಗಿನ ಆಯವ್ಯಯ, ಬೆಲೆ ಏರಿಕೆಗೆ ಸಮಾನವಾಗಿ ಆದಾಯ ಏರಿಕೆಯ ಯೋಜನೆಗಳನ್ನು ರೂಪಿಸಿಲ್ಲ. ಇದರಿಂದಾಗಿ ಸಾಮಾನ್ಯ ಜನರ ಘನತೆಯ ಬದುಕು ದುಸ್ತರವಾಗುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಶಿಕ್ಷಣದ ವಿಚಾರದ ಬಗ್ಗೆ ಡಾ. ಎ.ಎನ್. ನಿರಂಜನಾರಾಧ್ಯ ಅವರು ಮಾತನಾಡುತ್ತ ಪ್ರಾಚೀನ ಭಾರತದ ಶಿಕ್ಷಣಾ ವ್ಯವಸ್ಥೆಯಿಂದ ಹಿಡಿದು ವರ್ತಮಾನದ ಶಿಕ್ಷಣ ಕುರಿತಾಗಿ ವಿಶ್ಲೇಷಣೆ ಮಾಡಿದರು. ಭಾರತ ಸ್ವಾತಂತ್ರö್ಯ ಚಳುವಳಿಯ ಪ್ರಮುಖ ಉದ್ಧೇಶಗಳಲ್ಲಿ ಶಿಕ್ಷಣವೂ ಒಂದಾಗಿತ್ತು. ೧೮೪೮ರಲ್ಲಿ ಸಾವಿತ್ರಿಬಾ ಮತ್ತು ಜ್ಯೋತಿಬಾ ಫುಲೆ ಅವರ ಶಿಕ್ಷಣದ ಹೋರಾಟ, ೧೮೮೨ರಲ್ಲಿ ಹಂಟರ್ ಆಯೋಗದ ಮುಂದೆ ಮಂಡಿಸಲಾದ ಬೇಡಿಕೆಯಲ್ಲಿ “ಶಿಕ್ಷಣ”ದ ಅಂಶ ಪ್ರಧಾನವಾಗಿತ್ತು. ೧೮೫೭ರ ಭಾರತ ಸ್ವಾತಂತ್ರö್ಯ ಹೋರಾಟದ ನಂತರ ಎಲ್ಲಾ ಚಳುವಳಿಯಲ್ಲಿ ಶಿಕ್ಷಣವೇ ಆದ್ಯತೆಯಾಗಿತ್ತು,
ಹೀಗಿದ್ದರೂ ಭಾರತದ ಅಂದಿನ ಸ್ವಾತಂತ್ರö್ಯ ಚಳುವಳಿಯ ನೇತಾರರ ದಾರ್ಶನಿಕತ್ವದಿಂದ ಶಿಕ್ಷಣದ ಹಕ್ಕು ಮುನ್ನಲೆಗೆ ಬಂದಿದ್ದು, ಸಂವಿಧಾನದಲ್ಲಿ “ಶಿಕ್ಷಣದ ಹಕ್ಕನ್ನು” ಮೂಲಭೂತ ಹಕ್ಕನ್ನಾಗಿಸಲು ಚರ್ಚೆ ನಡೆದಿತ್ತು. ಇಂಟರ್ ನ್ಯಾಷನಲ್ ಶಾಲೆಗಳಿಂದ ಹಿಡಿದು, ಖಾಸಗಿ ಶಿಕ್ಷಣ ವ್ಯವಸ್ಥೆಯ ನಡುವೆ ಸರ್ಕಾರಿ ಶಾಲೆಗಳು ನಲುಗಿ ಹೋಗುತ್ತಿವೆ. ಯಾವಾಗ ಭಾರತ ಖಾಸಗೀಕರಣ, ಉದಾರೀಕರಣ ನೀತಿ, ಗ್ಯಾಟ್ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಸರ್ವರಿಗೂ ಸಮಾನ ಶಿಕ್ಷಣ - ಗುಣಮಟ್ಟದ ಶಿಕ್ಷಣ ಮೂಲೋದ್ಧೇಶವೇ ಪಲ್ಲಟಗೊಂಡಿತು. ಅಲ್ಲಿಂದಾಚೆಗೆ ಈಗಿರುವ ೪೬೦೦೦ ಸರ್ಕಾರಿ ಶಾಲೆಗಳಲ್ಲಿ ೨೧೨೫ ಶಾಲೆಗಳು ಮುಚ್ಚಿವೆ, ಇನ್ನೂ ನೂರಾರು ಶಾಲೆಗಳು ಮುಚ್ಚುತ್ತಲಿವೆ.ಸಂವಿಧಾನದಲ್ಲಿ ಶಿಕ್ಷಣದ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಆಯವ್ಯಯದಲ್ಲಿ ಯೋಜನೆ ರೂಪಿಸಬೇಕಾಗುತ್ತದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ,ಸಮಾಲೋಚನಾ ಸಭೆಯ ಆಯೋಜಕರಾದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಶ್ರೀಮತಿ ಇಂದಿರಾ ಕೃಷ್ಣಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದ್ದರು. ಅಖಿಲಾ ವಿದ್ಯಾಸಂದ್ರ, ವಕೀಲರು, ಸ್ವಾಗತ, ಸಮನ್ವಯ ನಿರ್ವಹಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಹಿಳಾ ಒಕ್ಕೂಟದ ಪ್ರಧಾನ ಸಂಚಾಲಕರಾದ ಶ್ರೀಮತಿ ನಿರ್ಮಲಮ್ಮ, ಧನಮ್ಮ, ಯಾಸ್ಮಿನ್, ನಾರಾಯಣಮ್ಮ ಮತ್ತೆಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಆಶ ಕಾರ್ಯಕರ್ತೆಯರು ಭಾಗವಹಿಸಿದ್ದರು. ಲೇಖಕಿಯರಾದ ಶ್ರೀಮತಿ ಲೀಲಾ ವಾಸುದೇವ್, ಷರೀಫಾ, ಶ್ಯಾಮಲ, ತೇಜಸ್ವಿನಿ, ಸಿ.ಐ.ಟಿ.ಯುನ ಮಹಿಳಾ ಪ್ರತಿನಿಧಿಗಳು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೆಂಗಳೂರು ನಗರ ಜಿಲ್ಲಾ ಸಂಚಾಲಕರಾದ ಬಾಲಕೃಷ್ಣ, ಮೂರ್ತಿ, ಸಂತೋಷ, ತಿಮ್ಮರಾಜು, ಅಂಬರೀಶ್, ಕುಮಾರ್ ಮತ್ತು ಸರ್ವೋದಯದ ಡಾ. ವಿ. ಪ್ರಶಾಂತ, ಗಿರಿಜಾ ಹೆಗ್ಡೆ, ಹಾಗೂ ಸುರೇಶ್, ಪರಶುರಾಮ್ ಪಾಲ್ಗೊಂಡಿದ್ದರು.