ಭುವಿಯ ದೈವವು

ಭುವಿಯ ದೈವವು

ಭುವಿಯ ದೈವವು 

ವೈದ್ಯನೆಂಬುವವನು ಭುವಿಯ ದೈವವು 

ದೇವನ ರೂಪದ ಮಮತೆಯ ತರುವು 

ಉಸಿರಿಗುಸಿರಾಗಿ ಜೀವಕೆ ಕಲ್ಪತರುವಾಗಿ 

ನಿಸ್ವಾರ್ಥ ಸೇವೆ ಗೈಯುತಿರುವವನು//

ದೇಹ ಧರೆಗೆ ಆಸರೆಯ ಮಡಿಲಾಗಿ 

ಶರೀರವೆಂಬೊಲದ ಕೃಷಿಕನಾಗಿ 

ಯಂತ್ರದಂತಿರೊ ಕಾಯಕೆ ತಾಂತ್ರಿಕನಾಗಿ 

ಸದಾ ನಿರತನವನು ನಿಷ್ಠ ಕಾಯಕದಲಿ//

ತನದೆನುವುದ ಹಾಗೇ ಬಿಡಬಲ್ಲ 

ಇತರರಿಗಾಗಿ ಶ್ರಮದಾನ ಮಾಡದಿರನಲ್ಲ 

ಅಂತಿಂತವನಲ್ಲ ಎಲ್ಲರಂತಲ್ಲ 

ಹಿಡಿದ ಕೆಲಸ ಬಿಡದೇ ಮಾಡುವ ಮಲ್ಲ//

ವೇಳೆ ಹಾಳಾಗಲು ಬಿಡನಿವನು 

ಹಾಳು ಹರಟೆ ಮಾಡದಿರುವವನು 

ಸತತ ಕಲಿಕೆಯಲಿರುವ ತಾಪಸಿಯು 

ನಿಂತ ಹೃದಯ ನಡೆಸಬಲ್ಲಾತನು//

ಶ್ರದ್ಧಾ ಭಕ್ತಿಯು ವೃತ್ತಿಯ ಮೇಲೆ 

ಹೇಳಲಾಗದ ವರ್ಣಿಸಲಾಗದ ಲೀಲೆ 

ಹೊಗಳಿಕೆ ತೆಗಳಿಕೆಗೆ ಕಿವಿಗೊಡದೆ 

ರೋಗಿಗಳ ತೃಪ್ತಿಯ ನಗೆ ಇವಗೆ ಹೂಮಾಲೆ//

ಹೆದರಿಕೆಯಿಲ್ಲದ ಜಾಣ ಚತುರ ತಂತ್ರಜ್ಞ

ನಿಲ್ಲಿಸನಿವನು ಆರೋಗ್ಯ ನೀಡುವ ಯಜ್ಞ 

ಪ್ರೀತಿ ಮಮತೆಯ ಸುರಿಯುತ ನಿರುತ 

ಗೊತ್ತಿವನಿಗೆ ಗುಣಪಡಿಸುವ ಕಾಲಜ್ಞಾನ//

ಹಗಲಿರುಳು ನಿಷ್ಕಲ್ಮಶ ಸೇವಾಪರತೆ 

ಅವನೋಳಗೆ ತೀರದ ಸೇವಾವರತೆ

ಬೇಡಿವನಿಗೆ ಬಹುಮಾನ ಹೊಗಳಿಕೆ

ಬಂಧ ಸಂಬಂಧಗಳ ಕಥೆಯ ವ್ಯಥೆ//

ಕಣ್ಣಿಗೆ ಕಾಣುವ ದೇವಮಾನವ 

ಮಣ್ಣಿನ ಋಣವ ತೀರಿಸಿಯೇ ಹೋಗುವವ 

ಮರಣ ಗೆಲುವ ಬ್ರಹ್ಮನಿವನು 

ರೋಗ ರುಜಿನ ಜಡ್ಡು ಜಾಪತ್ರೆ ಕಳೆಯುವವ//

ಡಾ ಅನ್ನಪೂರ್ಣ ಹಿರೇಮಠ