ಜಾನಪದ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯ: ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಮತ
ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಮತ | ಯಡ್ರಾಮಿಯಲ್ಲಿ ಜಾನಪದ ದಿನಾಚರಣೆ, ಪದಗ್ರಹಣ, ಪುಸ್ತಕ ಬಿಡುಗಡೆ, ಕಲಾವಿದರು, ಶಿಕ್ಷಕರಿಗೆ ಸತ್ಕಾರ
ಜಾನಪದ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯ
ಕಲಬುರಗಿ: ನಮ್ಮತನ, ಹೃದಯ ಶ್ರೀಮಂತಿಕೆ, ಮಾನವೀಯ ಮೌಲ್ಯಗಳು, ಸಾಮಾಜಿಕ ಕಾಳಜಿ, ಕೌಟುಂಬಿಕ ಸಾಮರಸ್ಯ ಸೇರಿದಂತೆ ಬದುಕಿನ ಶ್ರೀಮಂತಿಕೆಯನ್ನು ಕಟ್ಟಿಕೊಡುವ, ನಮ್ಮ ದೇಶದ ಮೂಲ ಸಂಸ್ಕೃತಿ, ಪರಂಪರೆಯಾದ ಜಾನಪದ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿದೆ ಎಂದು ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಮತಪಟ್ಟರು.
ಯಡ್ರಾಮಿ ಪಟ್ಟಣದ ಕನ್ಯಾ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ‘ಕನ್ನಡ ಜಾನಪದ ಪರಿಷತ್’ನ ತಾಲೂಕಾ ಘಟಕದಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ, ‘ವಿಶ್ವ ಜಾನಪದ ದಿನಾಚರಣೆ’, ‘ಮೋಹನರಾಗ’ ಮತ್ತು ‘ಅಮೃತಧಾರೆ’ ಕವನ ಸಂಕಲನ ಬಿಡುಗಡೆ ಹಾಗೂ ಜಾನಪದ ಕಲಾವಿದರು, ಶಿಕ್ಷಕರು, ನಿವೃತ್ತ ಶಿಕ್ಷಕರಿಗೆ ಸತ್ಕಾರ, ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ, ಸತ್ವಯುತ ಸಾಹಿತ್ಯ ಹೊರಬರಬೇಕಾಗಿದೆ. ಜಾನಪದ ಸಂಸ್ಕೃತಿ, ಪರಂಪರೆ ಉಳಿಸಿ-ಬೆಳೆಸಿ ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯ ಎಲ್ಲರು ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಜನರಿಂದ, ಜನರಿಗಾಗಿ, ಸಾಮಾನ್ಯ ಜನರೇ ರಚಿಸಿದ ಸಾಹಿತ್ಯ ಜನಪದವಾಗಿದೆ. ಇದು ಶಿಷ್ಠ ಸಾಹಿತ್ಯಕ್ಕೆ ತಾಯಿಬೇರಾಗದ್ದು, ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ಜನಪದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸಬೇಕು ಎಂಬ ಉದ್ದೇಶಕ್ಕಾಗಿಯೇ ನಮ್ಮ ಪರಿಷತ್ ಕಳೆದ ಒಂಬತ್ತು ವರ್ಷಗಳಿಂದ ಅನೇಕ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮಾಡುತ್ತಿದೆ. ಎಲ್ಲಾ ಜಾನಪದ ಕಲಾವಿದರಿಗೆ ಮಾಸಾಶನ, ಪ್ರಶಸ್ತಿ-ಪುರಸ್ಕಾರ, ಗೌರವಗಳು, ಕಲಾವಿದರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಆದ್ಯತೆ, ವಸತಿ ಸೌಕರ್ಯ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಸರ್ಕಾರವು ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಮೋಹನರಾಗ ಮತ್ತು ಅಮೃತಧಾರೆ ಕವನ ಸಂಕಲನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಂಶೋಧಕ ಡಿ.ಎನ್.ಅಕ್ಕಿ, ಸಾಹಿತ್ಯ ರಚನೆಗೆ ನಿರಂತರ ಹಾಗೂ ಆಳವಾದ ಅಧ್ಯಯನ ಅಗತ್ಯ. ಆಶಯಕ್ಕೆ ಒತ್ತು ನೀಡಿ ಕಾವ್ಯಗಳು ರಚಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ, ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಸಂಘಟನಾ ಕಾರ್ಯದರ್ಶಿ ಸಾಯಬಣ್ಣ ಹೋಳ್ಕರ್, ಕಜಾಪ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಆಲಮೇಲ್, ಕಜಾಪ ಜೇವರ್ಗಿ ತಾಲೂಕಾಧ್ಯಕ್ಷ ದೇವಿಂದ್ರ ಗುಡೂರ್, ಸಾಹಿತಿ ರಾಜೇಂದ್ರ ಪಾಟೀಲ, ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ, ಪ್ರಮುಖರಾದ ದೇವಿಂದ್ರಪ್ಪಗೌಡ ಸರಕಾರ, ಮಹಾನಿಂಗಪ್ಪಗೌಡ ಬಂಡೆಪ್ಪಗೌಡ್ರ್, ಚಂದ್ರಶೇಖರ ಪುರಾಣ ಕ, ಸಿದ್ರಾಮಪ್ಪಗೌಡ ಮಾಲಿಪಾಟೀಲ್, ಮಲ್ಹಾರರಾವ್ ಕುಲಕಣ ð, ರವಿ ಸಾಹು ಡಗ್ಗಾ, ಬಸಲಿಂಗಪ್ಪ ಸಾಹು ಅಂಕಲಕೋಟಿ, ಸೂಗಮ್ಮ ಪಾಟೀಲ್, ಹುಸೇನಸಾಬ್ ವಡಗೇರಾ, ಎಸ್.ಎಸ್.ಮಾಲಿಬಿರಾದಾರ, ಅಮೃತ್ತ ದೊಡ್ಡಮನಿ, ಬಸವರಾಜ ಉಪ್ಪಾರ, ಬಸ್ಸೆಟ್ಟೆಪ್ಪ ವಾರದ, ದಸ್ತಗೀರ್ ಚೌದ್ರಿ, ಅಫ್ರೋಜ್ ಅತನೂರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ನಂತರ ವಿವಿಧ ಜಾನಪದ ಕಲಾ ಪ್ರದರ್ಶನ ಜರುಗಿತು.