ಪ್ರಜಾಪ್ರಭುತ್ವ ಸ್ವಾಭಿಮಾನದ ಸಂಕೇತ :ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿಕೆ
ರಾಯಚೂರಿನಲ್ಲಿ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿಕೆ
ಪ್ರಜಾಪ್ರಭುತ್ವ ಸ್ವಾಭಿಮಾನದ ಸಂಕೇತ
ರಾಯಚೂರು:
ನಮ್ಮ ಹಿರಿಯರು ಅಹಿಂಸಾ ಮಾರ್ಗದ ಮೂಲಕ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಇಲ್ಲಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಮ್ಮ ದೇಶದ ಸತ್ಯ, ಅಹಿಂಸೆಯ ಹೋರಾಟ ಮಾರ್ಗ ವಿಶ್ವಕ್ಕೆ ಮಾದರಿಯಾಗಿದೆ. ಪ್ರಜಾಪ್ರಭುತ್ವ ಸ್ವಾಭಿಮಾನದ ಸಂಕೇತ ಎಂದರು.
ಜಿಲ್ಲೆಯ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಬೇಕು. ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದೇ ನಮ್ಮ ಧ್ಯೇಯವಾಗಿದೆ. ಈ ದಿಸೆಯಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದರು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ರಾಯಚೂರು ವಿಮಾನ ನಿಲ್ದಾಣಕ್ಕೆ ಅನುಮತಿ ನೀಡುವಂತೆ ಕೋರಲಾಗಿದೆ. ಆದರೆ, ಎರಡಕ್ಕೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಯೊಬ್ಬರು ಈ ನೆಲದಕಾನೂನನ್ನು ಗೌರವಿಸಬೇಕು. ಸಮಾಜದಲ್ಲಿ ಸಮಾನತೆ ನೆಲೆಯೂರಿದಾಗ ಮಾತ್ರ ದೇಶದಲ್ಲಿ ಸಮೃದ್ಧಿ ಕಂಡು ಬರಲು ಸಾಧ್ಯವಿದೆ. 78 ವರ್ಷಗಳಲ್ಲಿ ದೇಶ ಸಾಕಟ್ಟು ಅಭಿವೃದ್ಧಿ ಕಂಡಿದೆ. ಇನ್ನಷ್ಟು ಅಭಿವೃದ್ಧಿ ಕಾಣಬೇಕಿದೆ ಎಂದರು.
ಸಂಸದೀಯ ವ್ಯವಸ್ಥೆ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ದೇಶದ ಜನರಿಗೆ ನಂಬಿಕೆ ಇದೆ. ಮಾಧ್ಯಮಗಳೂ ಈ ನಂಬಿಕೆಯನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಧ್ವಜಾರೋಹಣದ ನಂತರ ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಪಡೆ, ನಾಗರಿಕ ಪೊಲೀಸ್, ಮಹಿಳಾ ಪೊಲೀಸ್, ಗೃಹ ರಕ್ಷಕ ದಳ, ಎನ್‌ಸಿಸಿ ಕೆಡೆಟ್, ಸ್ಕೌಟ್ಸ್ ಮತ್ತು ಗೈಡ್ಸ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜ್, ಸರ್ಕಾರಿ ಪ್ರೌಢಶಾಲೆ ಹಾಗೂ ಖಾಸಗಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಮೈದಾನದಲ್ಲಿ ಆಕರ್ಷಕ ಪಥ ಸಂಚಲನ ನಡೆಸಿದ ಸೇಂಟಮೇರಿ ಕಾನ್ವೆಂಟ್ ಸ್ಕೂಲ್, ಜಹೀರಾಬಾದ್ ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಭಾರತ ಸೇವಾ ದಳದ ವಿದ್ಯಾರ್ಥಿಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಕೊಡಲಾಯಿತು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಘಟಕಕ್ಕೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಮೂಹಿಕವಾಗಿ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು.
ರಾಯಚೂರು ನಗರ ಶಾಸಕ ಶಿವರಾಜ ಪಾಟೀಲ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ವಸಂತಕುಮಾರ, ರುಡಾ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ನಿತಿಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಪಾಂಡ್ವೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಪ್ಪ ಭಜಂತ್ರಿ, ರಾಯಚೂರು ಉಪ ವಿಭಾಗಾಧಿಕಾರಿ ಮೆಹಬೂಬಿ, ರಾಯಚೂರು ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರ, ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ, ರಾಯ ಚೂರು ನಗರಸಭೆಯ ಪೌರಾಯುಕ್ತ ಗುರುಸಿದ್ದಯ್ಯ ಉಪಸ್ಥಿತರಿದ್ದರು.