ನಗರದಲ್ಲಿ ಬಡ ಜಂಗಮರಿಗೆ ನಿವೇಶನ ಕಲ್ಪಿಸಿ, ಸರಡಗಿ ರೇವಣಸಿದ್ಧ ಶಿವಾಚಾರ್ಯರು

ನಗರದಲ್ಲಿ ಬಡ ಜಂಗಮರಿಗೆ ನಿವೇಶನ ಕಲ್ಪಿಸಿ, ಸರಡಗಿ ರೇವಣಸಿದ್ಧ ಶಿವಾಚಾರ್ಯರು 

ಕಲಬುರಗಿ: 'ಹಳ್ಳಿಗಳಿಂದದ ಕಲಬುರಗಿ ನಗರಕ್ಕೆ ಬಂದು ಜೀವನ ನಡೆಸುತ್ತಿರುವ ಬಡ ಜಂಗಮ ಕುಟುಂಬಗಳಿಗೆ ನಗರದ ಸುತ್ತಮುತ್ತಲಿನಲ್ಲಿ ನಿವೇಶನ ನೀಡಲು ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಹಾಗೂ ಶಾಸಕರು ಮುಂದಾಗಬೇಕು' ಎಂದು ಶ್ರೀ ನಿವಾಸ ಸರಡಗಿಯ ಡಾ.ರೇವಣಸಿದ್ದ ಶಿವಾಚಾರ್ಯರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ರವಿವಾರ ಜಿಲ್ಲಾ ಜಂಗಮ ಸಮಾಜದ ವತಿಯಿಂದ ಆಯೋಜಿಸಿದ್ದ ಜಂಗಮ ಸಮುದಾಯದ ಸಾಧಕರ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

'ಜಂಗಮ ಸಮುದಾಯದವರು ನಗರದಲ್ಲಿ ತಿಂಗಳಿಗೆ ₹10 ಸಾವಿರದಿಂದ ₹12 ಸಾವಿರ ಸಂಬಳ ಪಡೆದು, ಮನೆ ಬಾಡಿಗೆ ಕಟ್ಟಿ ಉಳಿದ ದುಡ್ಡಲ್ಲಿ ಜೀವನ ನಡೆಸುತ್ತಿದ್ದಾರೆ. ಕಡಿಮೆ ಸಂಬಳದಲ್ಲಿ ಮನೆ ನಿರ್ವಹಣೆಯೂ ಕಷ್ಟವಾಗುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಜಂಗಮ ಸಮುದಾಯದ ಬಡವರಿಗೆ ನಿವೇಶನ ನೀಡ ಬೇಕು' ಎಂದು ಮನವಿ ಮಾಡಿದರು.

ಮುತ್ಯಾನ ಬಬಲಾದನ ಗುರುಪಾದಲಿಂಗ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ನಗರದಲ್ಲಿ ೫೦ ಎಕರೆ ಜಮೀನಿನಲ್ಲಿ ಎಲ್ಲಾ ಸಮುದಾಯದವರ ಜೊತೆ ಜಂಗಮ ಸಮುದಾಯದವರೆಗೂ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಮಾತನಾಡಿದರು,

ಜಂಗಮ ಸಮುದಾಯದ ಕೆ.ರಾಮಚಂದ್ರಯ್ಯ, ಸಾಧಕಾರದ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ನೀಲಮ್ಮ ಎಸ್. ಸಾಲಿಮಠ, ಆಕಾಂಕ್ಷಾ ಪುರಾಣಿಕ, ಬಸಯ್ಯ ಪ್ಯಾಟಿಮಠ ಕಾಳಗಿ, ಅನಿಲ ಮಠಪತಿ, ಸೋಮಶೇಖರ ಹಿರೇಮಠ, ನಾಗಲಿಂಗಯ್ಯ ಮಠಪತಿ, ಶಿವಾನಂದ ಮಠಪತಿ, ನಾಗಭೂಷಣಯ್ಯ. ಮಠಪತಿ, ಅನ್ನಪೂರ್ಣ ಹಿರೇಮಠ,ಶರಣಮ್ಮ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಬಿ. ಜಿ.ಪಾಟೀಲ, ಮೇಯರ್ ಯಲ್ಲಪ್ಪ ನಾಕ್ಕೋಡಿ, ಕುಡಾ ಅಧ್ಯಕ್ಷ ಮಜರ್ ಖಾನ್, ಪಾಲಿಕೆ ಸದಸ್ಯೆ ಶಾಂತಾಬಾಯಿ ಹಾಲಮಠ, ಬಿಲ್ವ ಆಸ್ಪತ್ರೆ ಮುಖ್ಯಸ್ಥ ಡಾ. ರೇಣುಪ್ರಸಾದ್ ಚಿಕ್ಕಮಠ, ಬಿಜಾಸಪುರ ಗ್ರೂಪ್ ಮುಖ್ಯಸ್ಥ ಪ್ರಶಾಂತ ಬಿಜಾಸಪುರ, ಜಂಗಮ ಸಮಾಜದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಸ್ವಾಮಿ ಉಪಸ್ಥಿತರಿದ್ದರು.