ಸಚಿವ ಸ್ಥಾನಕ್ಕಾಗಿ ದಲಿತ ಮಹಿಳೆಯರಿಂದ ಪತ್ರ ಚಳುವಳಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹ

ಸಚಿವ ಸ್ಥಾನಕ್ಕಾಗಿ ದಲಿತ ಮಹಿಳೆಯರಿಂದ ಪತ್ರ ಚಳುವಳಿ   ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹ

ಸಚಿವ ಸ್ಥಾನಕ್ಕಾಗಿ ದಲಿತ ಮಹಿಳೆಯರಿಂದ ಪತ್ರ ಚಳುವಳಿ 

ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹ

ನರೇಗಲ್: ಪಟ್ಟಣದ ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ಮಹಿಳಾ ಸಂಘಟಿಕರು ಹಾಗೂ ಹಿರಿಯ ದಲಿತ ಮಹಿಳೆಯರು ರೋಣ ಶಾಸಕ ಜಿ. ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದರು.

ಸ್ಥಳೀಯ ಅಂಚೆ ಕಚೇರಿಯ ಆವರಣದಲ್ಲಿ ನಡೆದ ಪತ್ರ ಚಳುವಳಿಯಲ್ಲಿ ಭಾಗವಹಿಸಿ ಮಾತನಾಡಿದ ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಮೈಲಾರಪ್ಪ ವೀ. ಚಳ್ಳಮರದ, ದೀನ ದಲಿತರ, ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗೆ ನಾಲ್ಕು ದಶಕಗಳಿಂದ ಜಿ. ಎಸ್‌. ಪಾಟೀಲ ಅವರು ಶ್ರಮಿಸುತ್ತಿದ್ದಾರೆ. ಅಧಿಕಾರ ಇದ್ದರು, ಇಲ್ಲದಿದ್ದರೂ ದಲಿತರನ್ನು ಕೈಬಿಟ್ಟಿಲ್ಲ. ತೊಂದರೆ ಎಂದು ಮನೆಗೆ ಹೋಗುವ ಪ್ರತಿಯೊಬ್ಬರಿಗೂ ಸಹಾಯ ಮಾಡಿದ್ದಾರೆ. ರಾಜ್ಯದ ದಲಿತರ ಉದ್ಧಾರಕ್ಕಾಗಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸುತ್ತಿದ್ದೇವೆ ಎಂದರು. ಜಿಲ್ಲೆಯ ಹಿರಿಯ ಶಾಸಕರಾಗಿ ಎಲ್ಲರನ್ನೂ ಸರಿಸಮನಾಗಿ ಕರೆದುಕೊಂಡು ಹೋಗಿ, ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಕೈಗೊಂಡಿದ್ದಾರೆ. ಇಂದಿರಾಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ ಅವರ ಹಿರಿತನ ಹಾಗೂ ಪಕ್ಷಕ್ಕಾಗಿ ದುಡಿದ ಅವರ ಸೇವೆಯನ್ನು ಗುರುತಿಸಿ ಸಚಿವ ಸ್ಥಾನ ನೀಡುವ ಮೂಲಕ ಗೌರವಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಆಗುತ್ತದೆ ಎಂದರು.

ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ನರೇಗಲ್ ಘಟಕದ ಅಧ್ಯಕ್ಷೆ ಮುತ್ತವ್ವ ಚಳ್ಳಮರದ ಮಾತನಾಡಿ, ತಾಯಿಯ ಹೆಸರಿನಲ್ಲಿ ರೋಣ ಕ್ಷೇತ್ರದ ಮಹಿಳೆಯರ ಆರೋಗ್ಯ ಕಾಪಾಡುವ ಸಲುವಾಗಿ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಯೋಜನೆ ಮಾಡುತ್ತಾರೆ. ಯಾವುದೇ ಮಹಿಳೆಯ ಗೌರವಕ್ಕೆ ಧಕ್ಕೆ ಬಾರದಂತೆ ರಾಜಕಾರಣ ಮಾಡಿದ್ದಾರೆ. ಕ್ಷೇತ್ರದ ಯುವಕರಿಗಾಗಿ ಉದ್ಯೋಗಗಳನ್ನು ಸೃಷ್ಟಿಸಿ ಬದುಕು ಕಟ್ಟಿಕೊಟ್ಟಿದ್ದಾರೆ. ಇನ್ನೂ ಅನೇಕ ಉತ್ತಮ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ಜಿ. ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಕ್ತದ ಮೂಲಕ ಪತ್ರ ಬರೆಯುವ ಚಳುವಳಿಯನ್ನು ಕೈಗೊಳ್ಳಲಿದ್ದೇವೆ ಎಂದರು.

ಈ ವೇಳೆ ಕರಿಯಮ್ಮ ಚಳ್ಳಮರದ, ದುರಗವ್ವ ಚಳ್ಳಮರದ, ಮುಕ್ಕವ್ವ ಅಬ್ಬಿಗೇರಿ, ರೇಣವ್ವ ಹೊಂಬಳ, ಮುದಕವ್ವ ಹಳ್ಳದಮನಿ, ಶಾಂತವ್ವ ಪಾದಗಟ್ಟಿ, ಗಂಗವ್ವ ಚಳ್ಳಮರದ, ತುಳಸವ್ವ ಚಳ್ಳಮರದ, ಮುದಕಮ್ಮ ಚಳ್ಳಮರದ, ಕನಕವ್ವ ಹೊಂಬಳ ಇದ್ದರು.

ನರೇಗಲ್ ಪಟ್ಟಣದ ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ಮಹಿಳಾ ಸಂಘಟಿಕರು ಹಾಗೂ ಹಿರಿಯ ದಲಿತ ಮಹಿಳೆಯರು ರೋಣ ಶಾಸಕ ಜಿ. ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಪತ್ರ ಚಳುವಳಿ ಕೈಗೊಂಡರು. 

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ