ಬ್ಯಾಂಕ್ ನೌಕರರ ಬೇಡಿಕೆ ಈಡೇರಿಕೆಗೆ ಮೇ 25-26ರಂದು ಮುಷ್ಕರ: ಸಾಂಕೇತಿಕ ಧರಣಿ

ಬ್ಯಾಂಕ್ ನೌಕರರ ಬೇಡಿಕೆ ಈಡೇರಿಕೆಗೆ ಮೇ 25-26ರಂದು ಮುಷ್ಕರ: ಸಾಂಕೇತಿಕ ಧರಣಿ

ಬ್ಯಾಂಕ್ ನೌಕರರ ಬೇಡಿಕೆ ಈಡೇರಿಕೆಗೆ ಮೇ 25-26ರಂದು ಮುಷ್ಕರ: ಸಾಂಕೇತಿಕ ಧರಣಿ

ಕಲಬುರಗಿ: ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್ (AISBISF) ವತಿಯಿಂದ ಬ್ಯಾಂಕ್ ನೌಕರರ ಹಲವು ದೀರ್ಘಕಾಲದ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೇ 25 ಮತ್ತು 26ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಸ್ಟಾಫ್ ಯೂನಿಯನ್ (ಕರ್ನಾಟಕ) ತಿಳಿಸಿದೆ.

ಈ ಸಂಬಂಧ ನಗರದ ಎಸ್‌ಬಿಐ ಆಡಳಿತ ಕಚೇರಿ ಸೂಪರ್ ಮಾರ್ಕೆಟ್ ಆವರಣದಲ್ಲಿ ಸಾಂಕೇತಿಕ ಧರಣಿ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಫೆಡರೇಶನ್ ಹಲವಾರು ವರ್ಷಗಳಿಂದ ಎಸ್‌ಬಿಐ ಆಡಳಿತ ಮಂಡಳಿಯೊಂದಿಗೆ ಸಂವಾದ ಹಾಗೂ ಮನವೊಲಿಕೆ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದರೂ, ನಿರ್ವಹಣೆಯ ನಿರ್ಲಕ್ಷ್ಯ ಧೋರಣೆಯಿಂದ ಮುಷ್ಕರ ಅನಿವಾರ್ಯವಾಗಿದೆ ಎಂದು ಸಂಘಟನೆ ಮುಖಂಡರು ಆರೋಪಿಸಿದರು.

ಮುಖ್ಯ ಬೇಡಿಕೆಗಳಾಗಿ ಮೆಸೆಂಜರ್ ಹಾಗೂ ಶಸ್ತ್ರಸಜ್ಜಿತ ರಕ್ಷಕರ ತಕ್ಷಣದ ನೇಮಕಾತಿ, 2019ರಿಂದ ಸೇವೆಗೆ ಸೇರಿದ ನೌಕರರಿಗೆ ICT ವರ್ಗಾವಣೆ ಜಾರಿ, ಶಾಶ್ವತ ಹುದ್ದೆಗಳ ಔಟ್‌ಸೋರ್ಸಿಂಗ್ ಸ್ಥಗಿತ, ವೇತನ ಸಮಾನತೆ ಸಮಸ್ಯೆ ಪರಿಹಾರ, NPS ಒಳಪಡುವ ನೌಕರರಿಗೆ ಪಿಂಚಣಿ ನಿಧಿ ನಿರ್ವಹಣೆಯಲ್ಲಿ ಆಯ್ಕೆ ಅವಕಾಶ, ಸಮರ್ಪಕ ಸಿಬ್ಬಂದಿ ನೇಮಕಾತಿ ಹಾಗೂ ವೈದ್ಯಕೀಯ ಮರುಪಾವತಿ ಯೋಜನೆಯಲ್ಲಿ ಸುಧಾರಣೆಗಳನ್ನು ಮುಂದಿರಿಸಲಾಗಿದೆ.

ಸ್ಟೇಟ್ ಬ್ಯಾಂಕ್ ಸ್ಟಾಫ್ ಯೂನಿಯನ್ (ಕರ್ನಾಟಕ) ಸಾರ್ವಜನಿಕರು ಮತ್ತು ಗ್ರಾಹಕರು ನೌಕರರ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಉಪ ಪ್ರಧಾನ ಕಾರ್ಯದರ್ಶಿ ನವೀನ ಕಾಗಲ್ಕರ, ಸಹಾಯಕ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಕೃಷ್ಣ ಜೋಶಿ, ರಾಘವೇಂದ್ರ ಕುಲಕರ್ಣಿ, ರೀಟಾ ರಾಥೋಡ್, ಟಿ. ಸುಬ್ಬಯ್ಯ, ರವಿಚಂದ್ರ ಹಾಗೂ ಮಲ್ಲರಾವು ಕುಲಕರ್ಣಿ ಉಪಸ್ಥಿತರಿದ್ದರು.