ವಚನ ಸಾಹಿತ್ಯ ಸಂರಕ್ಷಣೆಗೆ ಸಹಕಾರಿ ಬ್ಯಾಂಕ್‌ಗಳ ಪಾತ್ರ ಮಹತ್ವದ್ದು: ಸೋಮಶೇಖರ ಟೆಂಗಲಿ
ವಚನ ಸಾಹಿತ್ಯ ಸಂರಕ್ಷಣೆಗೆ ಸಹಕಾರಿ ಬ್ಯಾಂಕ್‌ಗಳ ಪಾತ್ರ ಮಹತ್ವದ್ದು: ಸೋಮಶೇಖರ ಟೆಂಗಲಿ
ಕಲಬುರಗಿ, ಜು. 3: ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ 146ನೇ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಅಂಗವಾಗಿ, ಸುಮಾರು 115 ವರ್ಷಗಳ ಹಿಂದೆ ಡಾ. ಫ. ಗು. ಹಳಕಟ್ಟಿ ಅವರು ಆರ್ಥಿಕ ಸ್ವಾವಲಂಬನೆಯ ಉದ್ದೇಶದಿಂದ ಸ್ಥಾಪಿಸಿದ್ದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಕಲಬುರಗಿ ಶಾಖೆಯಲ್ಲಿ ಸಂಸ್ಥಾಪಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಬ್ರಹ್ಮಪುರದ ಗೋವಾ ಹೋಟೆಲ್ ಸಮೀಪದ ಅಶೋಕ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಸಂಜೆ 5.30ಕ್ಕೆ ನಡೆದ ಕಾರ್ಯಕ್ರಮದಲ್ಲಿ ಡಾ. ಫ. ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಖ್ಯಾತ ಉದ್ಯಮಿ ಸೋಮಶೇಖರ ಟೆಂಗಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ವಚನ ಸಾಹಿತ್ಯವು ಸಮಾಜಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶವನ್ನು ನೀಡಿದೆ. ಇಂತಹ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿ ಬ್ಯಾಂಕ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಸಮಾಜಸೇವಕಿ ಮಾಲಾಶ್ರೀ ಕಣ್ಣಿ ಮಾತನಾಡಿ, "ಕಲಬುರಗಿ ಶರಣರ ನಾಡು. ವಚನ ಸಾಹಿತ್ಯ ಮತ್ತು ಶರಣರ ತತ್ವಗಳನ್ನು ಅರಿತ ಪ್ರತಿಯೊಬ್ಬರೂ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನಲ್ಲಿ ಖಾತೆ ತೆರೆದು ವ್ಯವಹಾರ ನಡೆಸುವ ಮೂಲಕ ಸಂಸ್ಥಾಪಕರ ಆದರ್ಶವನ್ನು ಉಳಿಸಬೇಕು" ಎಂದು ಕರೆ ನೀಡಿದರು.
ನ್ಯಾಯವಾದಿ ವಿನೋದಕುಮಾರ ಜೇನವೆರಿ ಮಾತನಾಡಿ, ಮೋಸ ಮತ್ತು ಕಳ್ಳತನದಿಂದ ಗಳಿಸಿದ ಸಂಪತ್ತು ಶಾಶ್ವತವಲ್ಲ. ನಿತ್ಯ ಕಾಯಕ ಹಾಗೂ ಸತ್ಯನಿಷ್ಠೆಯಿಂದ ಸಂಪಾದಿಸಿದ ಸಂಪತ್ತೇ ಉಳಿಯುತ್ತದೆ. ಸಾವಿರ ವರ್ಷಗಳ ಇತಿಹಾಸವನ್ನು ಅವಲೋಕಿಸಿದಾಗ ನೇಕಾರ ಸಮುದಾಯವು ಶಿಸ್ತುಬದ್ಧ ಆರ್ಥಿಕ ವ್ಯವಸ್ಥೆಯನ್ನು ಸಮಾಜಕ್ಕೆ ಪರಿಚಯಿಸಿದ ಮೊದಲಿಗರೆಂಬುದು ಶರಣ ದಾಸಿಮಯ್ಯನ ವಚನಗಳಿಂದ ತಿಳಿದುಬರುತ್ತದೆ. ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಮುಂದಿನ ದಿನಗಳಲ್ಲಿ ಪರಿಪೂರ್ಣ ಬ್ಯಾಂಕ್ ಆಗಿ ಬೆಳೆಯಲಿ ಎಂದು ಹಾರೈಸಿದರು.
ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಕಲ್ಯಾಣಕುಮಾರ ಶಿಲವಂತ ಹಾಗೂ ರಾಜಕುಮಾರ ಬಿ. ಉದನೂರು ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.
ಶಿಕ್ಷಕ ಸತೀಶ್ ಜಾಮಗೊಂಡ ಅವರು ವಿಶೇಷ ಉಪನ್ಯಾಸ ನೀಡಿ, ಡಾ. ಫ. ಗು. ಹಳಕಟ್ಟಿ ಅವರ ಸಾಮಾಜಿಕ, ಆರ್ಥಿಕ ಹಾಗೂ ಸಾಹಿತ್ಯಿಕ ಕೊಡುಗೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ವ್ಯವಸ್ಥಾಪಕ ಧರ್ಮರಾಯ ಮಮದಾಪುರ ವಹಿಸಿದ್ದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರಾದ ಬಸವತರಾಯ ಕೊಳಕುರ, ಸಂಗಣ್ಣ ಭೀಮಳ್ಳಿ, ಶಿವರಾಜ ಅಂಡಗಿ, ಬ್ಯಾಂಕಿನ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಅಪ್ಪಾಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ವಿಶೇಷ ಅತಿಥಿಯಾಗಿದ್ದ ರಾಜಕುಮಾರ (ರಾಜು) ಉದನೂರು ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಿ ಶುಭಾಶಯ ಕೋರಲಾಯಿತು.
