ಶಿಕ್ಷಕರ ಆನ್ಲೈನ್ ಹೊರೆ ಕಡಿಮೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಸರ್ಕಾರಕ್ಕೆ ಪತ್ರ

ಶಿಕ್ಷಕರ ಆನ್ಲೈನ್ ಹೊರೆ ಕಡಿಮೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಸರ್ಕಾರಕ್ಕೆ ಪತ್ರ

ಶಿಕ್ಷಕರ ಆನ್ಲೈನ್ ಹೊರೆ ಕಡಿಮೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಸರ್ಕಾರಕ್ಕೆ ಪತ್ರ

ಕಲಬುರ್ಗಿ: ಇಂದು ನಾವು ಕೃತಕ ಬುದ್ದಿಮತ್ತೆಯ ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದೇವೆ. ಪ್ರತಿಯೊಂದು ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮುಖಾಂತರ ಡಿಜಿಟಲ್ ಕಾರ್ಯಗಳು ಆರಂಭವಾಗಿವೆ. ಶೈಕ್ಷಣಿಕ ಕ್ಷೇತ್ರದಲ್ಲಿಯು ಸಹ ಡಿಜಿಟಲ್ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ ಇದರಿಂದ ಶಿಕ್ಷಕರು ಅನೇಕ ತೊಂದರೆ ಅನುಭವಿಸುತ್ತಿರುವದು ಅಷ್ಟೆ ಸ್ಪಷ್ಟವಾಗಿದೆ. ಡಿಜಟಲಿಕರಣದ ಸಂಪೂರ್ಣ ಜವಾಬ್ದಾರಿ ಶಿಕ್ಷಕರ ಹೆಗಲಿಗಿದ್ದು ಇದು ಶಿಕ್ಷಣದ ಮೇಲೆ ಹಾಗೂ ಶಿಕ್ಷಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಈಗ ಸರಕಾರಿ ಶಾಲಾ ಶಿಕ್ಷಕರು ಪಾಠ ಪ್ರವಚನದ ಜೋತೆ ಕಾಮ್ಸ್, ಸ್ಯಾಟ್ಸ,ಯುಡೈಸ್, ಪಿ ಎಪ್ ಎಮ್ ಎಸ್, ಆಧಾರ್ ಅಪಾರ್ ಐಡಿ, ಶಿಕ್ಷಾ ಕೋ ಪೈಲಟ್, ಇನ್ಸ್ಪೈರ್ ಅವಾರ್ಡ್ ಮಾನಕ್, ಸೇತುಬಂಧ್ ಪರೀಕ್ಷೆಗಳ ದಾಖಲೆ, ಬಿಸಿಯೂಟದ ಮಾಹಿತಿ,ಪಠ್ಯಪುಸ್ತಕ , ಸಮವಸ್ತ್ರ ವಿತರಣೆ,ಬಿ ಎಲ್ ಓ ಹೀಗೆ ಇನ್ನು ಹತ್ತಾರು ಆನ್ ಲೈನ್ ಕಾರ್ಯಗಳನ್ನು ನಿರಂತರವಾಗಿ ಮಾಡಬೇಕಾಗಿದೆ.ಇದರ ಜೋತೆ ಇಲಾಖೆ ದಿನಕ್ಕೊಂದು ಮಾಹಿತಿ ಕೇಳುತ್ತಿದೆ ಈ ವರದಿಗಳನ್ನು ಸ್ಟ್ರೇಡ್ ಸಿಟ್ ಹಾಗೂ ಮೊಬೈಲ್ ಅಪ್ಲೀಕೇಷನ್ ಗಳಲ್ಲಿ ದಾಖಲಿಸುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು ಇದು ಶಿಕ್ಷಕರ ಮೇಲೆ ನಿರಂತರ ಒತ್ತಡ ಹೇರುತ್ತಿದೆ.

ಇದರ ಜೋತೆ ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್ ಹಾಗೂ ಶಾಶ್ವತ ಇಂಟರ್‌ನೆಟ್ ಸೌಲಭ್ಯಗಳ ಕೊರತೆಯಿಂದಾಗಿ ಶಿಕ್ಷಕರು ತಮ್ಮ ಸ್ವಂತ ಮೊಬೈಲ್, ಡೇಟಾ ಮತ್ತು ಇಂಟರ್‌ನೆಟ್ ಬಳಕೆ ಮಾಡಿಕೊಂಡೇ ಅಧಿಕೃತ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇದರಿಂದ ಅಧಿಕ ಖರ್ಚು ಹೊರೆ ಹೊತ್ತಿರುವ ಶಿಕ್ಷಕರ ಜೊತೆಗೆ ಕಣ್ಣಿನ ತೊಂದರೆ, ಕುತಿಗೆ ಮತ್ತು ಬೆನ್ನುನೋವು, ತಲೆನೋವು, ಮಾನಸಿಕ ಒತ್ತಡದಂತಹ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ, ಕಾಮ್ಸ ಸಲುವಾಗಿ ಕೆಲವು ಕಡೆ ಅಪಘಾತಗಳು ಆಗಿರುವ ವರದಿಗಳಾಗಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರವು ಪ್ರತಿ ಶಾಲೆಗೆ ಕಂಪ್ಯೂಟ‌ರ್ ಹಾಗೂ ಶಾಶ್ವತ ಇಂಟರ್ನೆಟ್ ಸೌಲಭ್ಯ ಕಲ್ಪಿಸಬೇಕು. ಇಲ್ಲವೇ ಉಚಿತ ಟ್ಯಾಬ್ಲೆಟ್, ನೆಟ್ ಸೌಲಭ್ಯ, ಮಾಸಿಕ ಮೊಬೈಲ್/ಇಂಟರ್ನೆಟ್ ಭತ್ಯೆ ಅಥವಾ ಶಾಲೆಗೊಬ್ಬ ಕಂಪ್ಯೂಟರ್ ಆಪರೇಟರ್ ನೇಮಕ ಮಾಡುವಂತಹ ಶಾಶ್ವತ ಪರಿಹಾರಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಈ ಬೇಡಿಕೆ ಶಿಕ್ಷಕರ ಸೌಲಭ್ಯಕ್ಕಾಗಿ ಮಾತ್ರವಲ್ಲ; ಶಿಕ್ಷಣದ ಗುಣಮಟ್ಟ ಸುಧಾರಿಸಲು, ಬೋಧನಾ ಸಮಯ ಉಳಿಸಲು ಹಾಗೂ ಶಿಕ್ಷಕರ ಆರೋಗ್ಯ ಕಾಪಾಡಲು ಅತ್ಯಗತ್ಯವಾಗಿದೆ. ರಾಜ್ಯದ ಎಲ್ಲ ಶಿಕ್ಷಕರ ಸಂಘಗಳು, ಶಿಕ್ಷಣಾಭಿಮಾನಿಗಳು ಹಾಗೂ ಸಾರ್ವಜನಿಕರು ಈ ವಿಷಯದಲ್ಲಿ ಸರ್ಕಾರದ ಗಮನ ಸೆಳೆಯಲು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ಅವರು ಕರೆ ನೀಡಿದರು.

ಶಿಕ್ಷಕರ ಸಮಯ ಶಕ್ತಿಯನ್ನು ಡಾಟಾ ನಮೂದಿಸಲು ಬಳಕೆ ಮಾಡುವದನ್ನು ಬಿಟ್ಟು ವಿದ್ಯಾರ್ಥಿಗಳ ಭವಿಷ್ಯ ಬೆಳೆಸಲು ಉಪಯೋಗಿಸಬೇಕಾಗಿದೆ. ಇಂದು ಶಿಕ್ಷಕರು ಶಿಕ್ಷಕ ಹುದ್ದೆಯ ಜೋತೆ ಕ್ಲಾರ್ಕ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಶಿಕ್ಷಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅವರ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ