ಖೇಡ್ ಜಾತ್ರಾ ಮಹೋತ್ಸವದಲ್ಲಿ ಶಾಸಕ ಪ್ರಭು ಚವ್ಹಾಣ ಭಾಗಿ
ಖೇಡ್ ಜಾತ್ರಾ ಮಹೋತ್ಸವದಲ್ಲಿ ಶಾಸಕ ಪ್ರಭು ಚವ್ಹಾಣ ಭಾಗಿ
ಕಮಲನಗರ ತಾಲ್ಲೂಕಿನ ಖೇಡ್ ಗ್ರಾಮದಲ್ಲಿ ಜರುಗಿದ ಪೂಜ್ಯ ಶ್ರೀ ರೇವಪ್ಪಯ್ಯಾ ಸ್ವಾಮಿಯವರ ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಚಿವರು ಹಾಗೂ ಔರಾದ (ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ಜುಲೈ 5ರಂದು ಭಾಗವಹಿಸಿದರು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ರೇವಪ್ಪಯ್ಯಾ ಶಿವಶರಣರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಶಾಸಕರು, ಕ್ಷೇತ್ರದ ಜನರ ಸುಖ-ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದರು. ಬಳಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಸ್ವತಃ ಹೋಳಿಗೆ, ತುಪ್ಪ ಬಡಿಸುವ ಮೂಲಕ ಸೇವಾಭಾವ ಮೆರೆದರು.
ಈ ವೇಳೆ ಮಾತನಾಡಿದ ಅವರು, ಪೂಜ್ಯ ಶ್ರೀ ರೇವಪ್ಪಯ್ಯಾ ಸ್ವಾಮಿಯವರ ಮಹಿಮೆ ಅಪಾರವಾಗಿದೆ. ಇಲ್ಲಿ ಭಕ್ತಿಯಿಂದ ಬೇಡಿಕೊಂಡ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಪ್ರತಿವರ್ಷ ಜಾತ್ರೆಗೆ ಆಗಮಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಒಂದೇ ದಿನ 30 ಸಾವಿರಕ್ಕಿಂತ ಹೆಚ್ಚು ಭಕ್ತರು ಆಗಮಿಸಿರುವುದು ಪೂಜ್ಯರ ದಿವ್ಯ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಪೂಜ್ಯ ರೇವಪ್ಪಯ್ಯ ಸ್ವಾಮಿಯವರ ಆಶೀರ್ವಾದದಿಂದ ಎಲ್ಲರಿಗೂ ಒಳಿತಾಗುತ್ತಿದೆ. ನಾನು ಸ್ವಾಮಿಯ ಪರಮ ಭಕ್ತನಾಗಿದ್ದು, ಪ್ರತಿವರ್ಷ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತೇನೆ. ಮಂದಿರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಅನುಗುಣವಾಗಿ ಮೂಲಸೌಕರ್ಯ ಒದಗಿಸಲು ಯತ್ನಿಸುತ್ತಿದ್ದೇನೆ. ಈಗಾಗಲೇ ಉತ್ತಮ ಕಲ್ಯಾಣ ಮಂಟಪ, ಸಿಸಿ ಬೆಡ್ ಹಾಕಿಕೊಡಲಾಗಿದೆ. ಕುಡಿಯುವ ನೀರಿನ ಸಮಸ್ಯೆಯಿತ್ತು. ಬೋರವೆಲ್ ಕಲ್ಪಿಸಲಾಗಿದೆ. ಹುಲಸೂರ ರಸ್ತೆಯ ಬೇಡಿಕೆಯಿದೆ. ಅನುದಾನ ಕಲ್ಪಿಸಲಾಗಿದೆ. ಆದರೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಫೈಲ್ ಪೆಂಡಿಂಗ್ ಇದೆ. ಬೇಗ ಮಾಡಿಸಲು ಕ್ರಮ ವಹಿಸುತ್ತೇನೆ ಎಂದರು. ಮುಖ್ಯ ರಸ್ತೆಯಿಂದ ಮಂದಿರದ ವರೆಗೆ ಸಿಸಿ ರಸ್ತೆ ನಿರ್ಮಿಸಿಕೊಡಬೇಕೆಂಬ ಮನವಿಗೆ ಸ್ಪಂದಿಸಿದ ಶಾಸಕರು ಒದಗಿಸಿಕೊಡುತ್ತೇನೆ. ಹಾಗೆಯೇ ಮಂದಿರ ಹಾಗೂ ಖೇಡ್ ಗ್ರಾಮದ ಸಮಗ್ರ ಅಭಿವೃದ್ಧಿಗೆ ಹಂತ ಹಂತವಾಗಿ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ತಡೋಳಾ ಮಹೆಕರ್ ಮಠದ ಪೂಜ್ಯ ರಾಜೇಶ್ವರ ಶಿವಾಚಾರ್ಯರು ಕೂಡ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಮ್ಮ ಸನಾತನ ಪರಂಪರೆ, ಧರ್ಮ ರಕ್ಷಣೆಯ ಹಿತದೃಷ್ಟಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪೂಜ್ಯ ರೇವಪ್ಪಯ್ಯ ಸ್ವಾಮಿಯವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ. ಅಪಾರ ಭಕ್ತ ಬಳಗವನ್ನು ಹೊಂದಿರುವ ತಮ್ಮ ಧಾರ್ಮಿಕ, ಸೇವಾ ಕಾರ್ಯಗಳು ಹೀಗೆಯೇ ನಡೆಯಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಭಕ್ತರು, ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
