ಪ್ರೌಢಶಾಲಾ ಶಿಕ್ಷಕರಿಗೆ ಎಚ್ಚರಿಕೆ ಹಾಗೂ ಅವರಿಗೆ ಅತಿತುರ್ತು ಅಗತ್ಯ. - ಐ ಕೆ ಪಾಟೀಲ್
ಪ್ರೌಢಶಾಲಾ ಶಿಕ್ಷಕರಿಗೆ ಎಚ್ಚರಿಕೆ ಹಾಗೂ ಅವರಿಗೆ ಅತಿತುರ್ತು ಅಗತ್ಯ. - ಐ ಕೆ ಪಾಟೀಲ್
ಕಲಬುರ್ಗಿ: ಇತ್ತೀಚೆಗೆ ಪ್ರಕಟಗೊಂಡಿರುವ ಕರಡು ಅಧಿಸೂಚನೆಯಲ್ಲಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ 9ರಿಂದ 10ನೇ ತರಗತಿವರೆಗೆ ಬೋಧನೆ ಮಾಡಲು ಅವಕಾಶ ಕಲ್ಪಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಈ ಕ್ರಮದಿಂದ ಉಪನ್ಯಾಸಕರ ಕಾರ್ಯಭಾರ ಪೂರೈಕೆಗೆ ಅನುಕೂಲವಾಗುವ ಸಾಧ್ಯತೆ ಇದ್ದರೂ, ಪ್ರಸ್ತುತ 9 ಮತ್ತು 10ನೇ ತರಗತಿಗಳಲ್ಲಿ ಬೋಧನೆ ಮಾಡುತ್ತಿರುವ ಸಾವಿರಾರು ಪ್ರೌಢಶಾಲಾ ಶಿಕ್ಷಕರ ಭವಿಷ್ಯದ ಕಾರ್ಯಭಾರ, ಹೆಚ್ಚುವರಿ ಹುದ್ದೆಗಳ ಸಮಸ್ಯೆ ಹಾಗೂ ವರ್ಗಾವಣೆಗಳ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಲಿವೆ ಎಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಐ ಕೆ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ಇಂದು ಪ್ರೌಢಶಾಲಾ ಸಂಘಟನೆಗಳು ಈ ವಿಷಯದ ಬಗ್ಗೆ ಮೌನ ವಹಿಸಿದರೆ, ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಇದಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಇಂದಿನ ಪರಿಸ್ಥಿತಿಯೇ ನೈಜ ಉದಾಹರಣೆಯಾಗಿದೆ. ಹೊಸ ಕೇಡರ್ ಮತ್ತು ನೇಮಕಾತಿ ನಿಯಮಗಳು ಜಾರಿಗೆ ಬಂದಾಗ ಸಮರ್ಪಕ ಆಕ್ಷೇಪಣೆಗಳು ಮತ್ತು ಹೋರಾಟಗಳು ನಡೆಯದ ಪರಿಣಾಮವಾಗಿ ಸಾವಿರಾರು ಪ್ರಾಥಮಿಕ ಶಿಕ್ಷಕರು 1ರಿಂದ 5ನೇ ತರಗತಿಗಳಿಗೆ ಸೀಮಿತರಾಗಿ, ಹೆಚ್ಚುವರಿ ಶಿಕ್ಷಕರ ಸಮಸ್ಯೆ ಹಾಗೂ ವರ್ಗಾವಣೆ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ.
ಅದೇ ಪರಿಸ್ಥಿತಿ ಸುಮಾರು 40 ಸಾವಿರಕ್ಕೂ ಹೆಚ್ಚು ಪ್ರೌಢಶಾಲಾ ಶಿಕ್ಷಕರಿಗೂ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಈಗಲೇ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಎಲ್ಲಾ ಶಿಕ್ಷಕರ ಸಂಘಟನೆಗಳು, ಪ್ರತಿನಿಧಿಗಳು ಮತ್ತು ಪದಾಧಿಕಾರಿಗಳು ಈ ವಿಷಯದ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು.
ಹಳೇಪ್ರೌಢಶಾಲಾ ಶಿಕ್ಷಕರಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವವರನ್ನು ಇತರ ರಾಜ್ಯಗಳ ಮಾದರಿಯಲ್ಲಿ PGT (Post Graduate Teacher) ಹುದ್ದೆಯಾಗಿ ಮರುವರ್ಗೀಕರಿಸಬೇಕು.
ಸೇವಾ ಹಿರಿತನ ಮತ್ತು ಅರ್ಹತೆಯ ಆಧಾರದ ಮೇಲೆ 9ರಿಂದ 12ನೇ ತರಗತಿವರೆಗೆ ಬೋಧನೆ ಮಾಡಲು ಅವಕಾಶ ಕಲ್ಪಿಸಬೇಕು.
ಕರಡು ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ತರಬೇಕು.
ಪ್ರೌಢಶಾಲಾ ಶಿಕ್ಷಕರ ಕಾರ್ಯಭಾರ ಮತ್ತು ಹುದ್ದೆಗಳ ಭದ್ರತೆಯನ್ನು ಖಚಿತಪಡಿಸಬೇಕು.
ಭವಿಷ್ಯದಲ್ಲಿ ಹೆಚ್ಚುವರಿ ಶಿಕ್ಷಕರ ಸಮಸ್ಯೆ ಮತ್ತು ಅನಗತ್ಯ ಅಂತರಜಿಲ್ಲಾ ವರ್ಗಾವಣೆಗಳನ್ನು ತಡೆಯುವ ಕ್ರಮಗಳನ್ನು ಕೈಗೊಳ್ಳಬೇಕು.
ಚಿಂತಿಸಬೇಕಾದ ಪ್ರಶ್ನೆ
9ರಿಂದ 12ನೇ ತರಗತಿವರೆಗೆ ಬೋಧನೆ ಮಾಡಲು ಅವಕಾಶ ಪಡೆದು ವೃತ್ತಿಜೀವನದ ಭದ್ರತೆ ಸಾಧಿಸಲು ಸಿದ್ಧರಿದ್ದೀರಾ? ಅಥವಾ
ಹೆಚ್ಚುವರಿ ಶಿಕ್ಷಕರ ಪಟ್ಟಿಗೆ ಸೇರಿ ಅಂತರಜಿಲ್ಲಾ ವರ್ಗಾವಣೆ ಹಾಗೂ ಸೇವಾ ಅನಿಶ್ಚಿತತೆಗಳನ್ನು ಎದುರಿಸಲು ಸಿದ್ಧರಿದ್ದೀರಾ?
ಈ ಪ್ರಶ್ನೆಗೆ ಪ್ರತಿಯೊಬ್ಬ ಪ್ರೌಢಶಾಲಾ ಶಿಕ್ಷಕರೂ ಈಗಲೇ ಉತ್ತರ ಹುಡುಕಬೇಕಾಗಿದೆ.
ಆದ್ದರಿಂದ ಎಲ್ಲ ಶಿಕ್ಷಕ ಮಿತ್ರರು, ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ಈ ವಿಷಯದ ಬಗ್ಗೆ ಚರ್ಚೆ ನಡೆಸಿ, ವಾಟ್ಸಾಪ್ ಗುಂಪುಗಳಲ್ಲಿ ಅಭಿಪ್ರಾಯ ಸಂಗ್ರಹಿಸಿ, ಅಗತ್ಯವಿದ್ದಲ್ಲಿ ಜನಪ್ರತಿನಿಧಿಗಳು ಹಾಗೂ ವಿಧಾನ ಪರಿಷತ್ ಸದಸ್ಯರ ಮೂಲಕ ಸರ್ಕಾರದ ಮೇಲೆ ಒತ್ತಡ ತಂದು ಸೂಕ್ತ ತಿದ್ದುಪಡಿಗಳನ್ನು ತರಲು ಸಂಘಟಿತ ಹೋರಾಟ ರೂಪಿಸಬೇಕಾಗಿದೆ.
ಇದು ಕೇವಲ ಒಂದು ನಿಯಮ ತಿದ್ದುಪಡಿಯ ಪ್ರಶ್ನೆಯಲ್ಲ; ಪ್ರೌಢಶಾಲಾ ಶಿಕ್ಷಕರ ಭವಿಷ್ಯ, ಕಾರ್ಯಭಾರ ಭದ್ರತೆ ಮತ್ತು ವರ್ಗಾವಣೆ ವ್ಯವಸ್ಥೆಗೆ ಸಂಬಂಧಿಸಿದ ಮಹತ್ವದ ವಿಷಯವಾಗಿದೆ ಎಂದು ಐ ಕೆ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ
