ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳಿವೆ : ತೇಗಲತಿಪ್ಪಿ.
ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳಿವೆ : ತೇಗಲತಿಪ್ಪಿ.
ವಚನ ಸಾಹಿತ್ಯ ನಮ್ಮ ಬದುಕಿನ ಆದರ್ಶಗಳಾಗಿವೆ ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳಿವೆ. ಅಂತಹ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಿ ಸಂರಕ್ಷಣೆ ಮಾಡಿದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ನಿಜವಾದ ಸಾಧಕರಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಹೇಳಿದರು.
ಅವರು ರಾವೂರ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಂರಕ್ಷಣಾ ದಿನದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಇವತ್ತು ನಾವು ಶರಣರ ವಚನಗಳನ್ನು ಅವರ ಜೀವನವನ್ನು ಪುಸ್ತಕಗಳಲ್ಲಿ ಓದುತ್ತಿದ್ದರೆ ಅದು ಫ. ಗು. ಹಳಕಟ್ಟಿ ಅವರ ಪರಿಶ್ರಮದಿಂದ. ತಮ್ಮ ವ್ಯಯಕ್ತಿಕ ಜೀವನವನ್ನೇ ತ್ಯಾಗ ಮಾಡಿ ಮನೆ ಮಠ ಗಳಿಗೆ ತೆರಳಿ ತಾಡೋಲೆ, ತಾಳೆಗರಿ,ವಚನಗಳ ಕಟ್ಟು ಗಳನ್ನು ಸಂಗ್ರಹಣೆ ಮಾಡಿ ಅವುಗಳ ಮುದ್ರಣಕ್ಕೆ ತಮ್ಮ ಮನೆಯನ್ನೇ ಮಾರಿ ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸಿದವರು ಹಳಕಟ್ಟಿಯವರು. ವೈಚಾರಿಕತೆ, ವೈಜ್ಞಾನಿಕತೆ ಮತ್ತು ಜೀವನ ಮೌಲ್ಯಗಳನ್ನು ಹೊಂದಿರುವ ಇಂತಹ ಸಾಹಿತ್ಯ ರಚನೆ ರಚನೆ ಮಾಡಿ ಉಳಿಸಿದ್ದಕ್ಕೆ ನಾವೇಲ್ಲಾ ಹಳಕಟ್ಟಿ ಶರಣರಿಗೆ ಋಣಿಯಾಗಿದ್ದೇವೆ ಎಂದು ಹೇಳಿದರು.
ಜಿಲ್ಲಾ ಕ. ಸಾ. ಪ ಗೌರವಕಾರ್ಯದರ್ಶಿ ಧರ್ಮಣ್ಣ ಧನ್ನಿ ಮಾತನಾಡಿ ಮಕ್ಕಳಲ್ಲಿ ವಚನ ಕಂಠಪಾಠ ಸ್ಪರ್ಧೆಗಳನ್ನು ಏರ್ಪಡಿಸಿ ಈ ಹಂತದಲ್ಲಿ ವಚನ ಸಾಹಿತ್ಯದ ಅಭಿರುಚಿ ಮೂಡಿಸುತ್ತಿರುವ ಸಂಸ್ಥೆಯ ಕಾರ್ಯಕ್ರಮ ಶ್ಲಾಘನೀಯ. ಹೆಚ್ಚು ಹೆಚ್ಚು ವಚಗಳ ಅಧ್ಯಯನ ಹಾಗೂ ಅವುಗಳ ಅರ್ಥಗಳನ್ನು ತಿಳಿದುಕೊಂಡು ಅವುಗಳಂತೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಮಾತನಾಡಿದರು. ವೇದಿಕೆಯ ಮೇಲೆ ಕೇಂದ್ರ ಕ. ಸಾ. ಪ ಕಾರ್ಯಕಾರಿ ಸದಸ್ಯ ಸಯ್ಯದ್ ನಜಿರುದ್ದಿನ ಮುತ್ತಾವಲ್ಲಿ ಹಾಗೂ ಸಂಸ್ಥೆ ಸದಸ್ಯ ಸಿದ್ದಲಿಂಗ ಜ್ಯೋತಿ ಇದ್ದರು.
ಈರಣ್ಣ ಹಳ್ಳಿ ವಚನ ಗಾಯನ ಮಾಡಿದರು.
ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.
ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ 50 ಮಕ್ಕಳಿಗೆ ಮೆಡಲ್, ಪ್ರಮಾಣಪತ್ರ ಹಾಗೂ ನಗದು ಬಹುಮಾನ ನೀಡಿ ಸತ್ಕರಿಸಲಾಯಿತು.
9ನೇ ತರಗತಿಯ ಕುಮಾರಿ ಭಾಗ್ಯಶ್ರೀ ತಂದೆ ಈಶ್ವರಾಜ ನೂರು ವಚನಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ಗಮನ ಸೆಳೆದಳು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ಪ್ರಕಲ್ಪಗಳ ಶಿಕ್ಷಕರು, ಮಕ್ಕಳು ಹಾಗೂ ಪಾಲಕರು ಹಾಜರಿದ್ದರು.
