ಎಸ್‌ಐಆರ್‌ನಲ್ಲಿ ತಪ್ಪದೇ ಭಾಗವಹಿಸಿ: ಮರತೂರಕರ್
ಎಸ್‌ಐಆರ್‌ನಲ್ಲಿ ತಪ್ಪದೇ ಭಾಗವಹಿಸಿ: ಮರತೂರಕರ್
ಕಲಬುರಗಿ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ನಿಮಿತ್ತ ಮತಗಟ್ಟೆ ಮಟ್ಟದ ಅಧಿಕಾರಿಗಳು ಜೂನ್ 30ರಿಂದ ನಗರದಲ್ಲಿ ಮನೆ ಮನೆಗೆ ಭೇಟಿ ನೀಡಲಿದ್ದು, ಅವರು ನೀಡುವ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಬೇಕು.ನಿರ್ಲಕ್ಷ್ಯ ವಹಿಸಿದರೆ ಮತದಾರರ ಪಟ್ಟಿಯಲ್ಲಿ ಹೆಸರು ಡಿಲಿಟ್ ಆಗಲಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಸರ್ಕಾರಿ ಸೌಲಭ್ಯಗಳು, ನಿಗಮ ಮಂಡಳಿಗಳ ಸಾಲ ಸೌಲಭ್ಯಗಳು, ಹೊಸ ಆಶ್ರಯ ಮನೆ ಹೊಂದಲು, ಡ್ರೈವಿಂಗ್ ಲೈಸನ್ಸ್ ಪಡೆಯಲು, ನಳದ ಸಂಪರ್ಕ ಪಡೆಯಲು, ಗಂಗಾ ಕಲ್ಯಾಣ ಕೊಳವೆ ಬಾವಿ ಹೊಂದಲು, ಪಡಿತರ ಕಾರ್ಡ್, ಆಯುಷ್ಮಾನ್ ಸೇರಿದಂತೆ ಆರೋಗ್ಯ ಯೋಜನೆಗಳು, ಪಾಸಪೋರ್ಟ್,ಪಾನಕಾರ್ಡ್,ಆಧಾರ್‌ಕಾರ್ಡ್, ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳಲು ಮತದಾರರ ಗುರುತಿನ ಚೀಟಿಯ ಅವಶ್ಯಕತೆಯಿದೆ. ಆದ್ದರಿಂದ ಎಸ್.ಐ.ಆರ್ ಮಾಡಲು ಇಂದಿನಿಂದ ಜುಲೈ 29ರ ಒಳಗಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ) ಪ್ರತಿ ಮನೆಗೆ ಆಗಮಿಸುತ್ತಾರೆ. ಮತದಾರರು ಸುಗಮವಾಗಿ ಭಾಗವಹಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ಕ್ಯಾಂಪ್ ಗಳನ್ನು ಸಹ ಸ್ಥಾಪಿಸಲಾಗುತ್ತದೆ. ಕ್ಯಾಂಪಿನಲ್ಲಿ ಅಥವಾ ಬಿ.ಎಲ್.ಒ ಗಳು ಮನೆಗೆ ಬಂದಾಗ ಕುಟುಂಬದ ಸದಸ್ಯರೊಬ್ಬರಾದರೂ ಮನೆಯಲ್ಲಿದ್ದು ಅವರು ಕೊಡುವ ಅರ್ಜಿ ಫಾರ್ಮ್ ಪಡೆದು ಅಗತ್ಯ ದಾಖಲೆಗಳಾದ 2002ರ ಮತಪಟ್ಟಿಯಲ್ಲಿ ತಮ್ಮ ಅಥವಾ ತಮ್ಮ ತಂದೆ, ತಾಯಿ, ಅಜ್ಜ, ಅಜ್ಜಿ ಹೆಸರಿರುವ ಮತದಾರರ ಗುರುಚಿನ ಚೀಟಿಯ ಎಪಿಕ್ ನಂಬರ್, ಮೊಬೈಲ್ ನಂಬರ್, ಪ್ರತಿ ಮತದಾರರ ಒಂದು ಐಡೆಂಟಿಟಿ ಕಲರ್ ಫೋಟೋ ಅರ್ಜಿಗೆ ಲಗತ್ತಿಸಬೇಕು ಹಾಗೂ ಪ್ರಸ್ತುತ ವಾಸವಿರುವ ಸ್ಥಳದ ವಿಳಾಸವನ್ನು ಅರ್ಜಿಯಲ್ಲಿ ನಮೂದಿಸಬೇಕು ಎಂದು ಅವರು ತಿಳಿಸಿದ್ದಾರೆ.
